Madhya Pradesh; ಬಿಜೆಪಿ ಗೆಲುವು ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ!
ಭೋಪಾಲ್, ಡಿಸೆಂಬರ್ 03; ಮಧ್ಯಪ್ರದೇಶ ವಿಧಾನಸಭಾ ಚುನಾವಣೆ 2023ರಲ್ಲಿ ಬಿಜೆಪಿ ಜಯಗಳಿಸಿದೆ. ಕಾಂಗ್ರೆಸ್‌ನ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದ ಪಕ್ಷದ ಗೆಲುವಿನಲ್ಲಿ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಪಾತ್ರವೂ ಇದೆ.
ಭಾನುವಾರ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಮತದಾನ ನಡೆದಿತ್ತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 116. 2.30ರ ಮಾಹಿತಿ ಪ್ರಕಾರ ಬಿಜೆಪಿ 162 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

2018ರ ಚುನಾವಣೆಗೆ ಹೋಲಿಕೆ ಮಾಡಿದರೆ ಬಿಜೆಪಿ 52 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 48 ಸ್ಥಾನಗಳನ್ನು ಕಳೆದುಕೊಂಡಿದೆ. 2018ರ ಚುನಾವಣೆ ಬಳಿಕ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದಾಗ 22 ಶಾಸಕರು ಅವರ ಜೊತೆ ಹೋದರು. ಕಮಲ್‌ನಾಥ್ ಸರ್ಕಾರ ಬಹುಮತ ಕಳೆದುಕೊಂಡು ಪತನಗೊಂಡಿತು.
ಜ್ಯೋತಿರಾಧಿತ್ಯ ಸಿಂಧಿಯಾ ಪ್ರಭಾವ; 2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 114 ಸ್ಥಾನಗಳಲ್ಲಿ ಜಯಗಳಿಸಲು ಜ್ಯೋತಿರಾಧಿತ್ಯ ಸಿಂಧಿಯಾ ಪ್ರಭಾವ ಇರುವ ಚಂಬಲ್ ಮತ್ತು ಗ್ವಾಲಿಯರ್ ಪ್ರಾಂತ್ಯದ ಗೆಲುವು ಮಹತ್ವದ ಪಾತ್ರ ವಹಿಸಿತ್ತು. ಇದನ್ನು ಯಾರೂ ಸಹ ಅಲ್ಲಗಳೆಯುವಂತಿಲ್ಲ.
ಚಂಬಲ್ ಮತ್ತು ಗ್ವಾಲಿಯರ್ ಪ್ರಾಂತ್ಯದಲ್ಲಿ 8 ಜಿಲ್ಲೆಗಳಿವೆ. ಈ ಎಲ್ಲಾ ಜಿಲ್ಲೆಗಳು ಗ್ವಾಲಿಯರ್‌ನ ಮಾಜಿ ರಾಜ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ರಾಜಮನೆತನದ ಪ್ರಭಾವ ಇರುವ ಕ್ಷೇತ್ರಗಳು. 2013ರಲ್ಲಿ ಗ್ವಾಲಿಯರ್ ಪ್ರಾಂತ್ಯದಲ್ಲಿ 13 ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ಈಗ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿಯಲ್ಲಿರುವುದು ಪಕ್ಷಕ್ಕೆ ಅನುಕೂಲವಾಗಿದೆ.
ಗ್ವಾಲಿಯರ್ ಪ್ರಾಂತ್ಯದ 8 ಜಿಲ್ಲೆಗಳಲ್ಲಿ 21 ಸೀಟುಗಳಿವೆ. 2002 ರಿಂದ 2014ರ ತನಕ ಈ ಪ್ರಾಂತ್ಯಗಳಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಲೋಕಸಭೆಗೆ ಆಯ್ಕೆಯಾಗಿದ್ದಾರೆ. 1971ರಿಂದ ಈ ಕ್ಷೇತ್ರಗಳಲ್ಲಿ ಸಿಂಧಿಯಾ ಕುಟುಂಬದ ಪ್ರಭಾವವಿದೆ. ಆದ್ದರಿಂದ ಅವರು ಇರುವ ಪಕ್ಷಕ್ಕೆ ಜನರು ಬೆಂಬಲ ನೀಡುವುದು ಸಾಬೀತಾಗಿದೆ.
ಭಾನುವಾರ ಜ್ಯೋತಿರಾಧಿತ್ಯ ಸಿಂಧಿಯಾ ಶಿವರಾಜ್ ಸಿಂಗ್ ಚೌವ್ಹಾಣ್ ಭೇಟಿಯಾಗಿ ಮಾತುಕತೆ ನಡೆಸಿರುವುದು ಅವರು ಮುಖ್ಯಮಂತ್ರಿಯಾಗಲಿದ್ದಾರೆಯೇ? ಎಂಬ ಕುತೂಹಲ ಹುಟ್ಟುಹಾಕಿದೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಆದ್ದರಿಂದ ಸಿಂಧಿಯಾ ಕೇಂದ್ರ ಸಚಿವ ಸ್ಥಾನ ಬಿಟ್ಟು ಬಂದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜ್ಯೋತಿರಾಧಿತ್ಯ ಸಿಂಧಿಯಾ ನಿರ್ಗಮನದ ನಂತರ ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್‌ಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಹೇಳಿದ್ದರು. ಆದರೆ ಚುನಾವಣಾ ಫಲಿತಾಂಶ ಇದನ್ನು ಸುಳ್ಳಾಗಿಸಿದೆ.
ಕೇಂದ್ರ ಚುನಾವಣಾ ಆಯೋಗದ 2.48ರ ಮಾಹಿತಿ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ 161, ಕಾಂಗ್ರೆಸ್ 67, ಬಿಎಸ್‌ಪಿ 1 ಮತ್ತು ಇತರರು 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ 1,19,010 ಮತಗಳನ್ನು ಪಡೆದು ಸುಮಾರು 80 ಸಾವಿರ ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಚಿಂದ್ವಾರಾ ಕ್ಷೇತ್ರದಲ್ಲಿ 82,831 ಮತಗಳನ್ನು ಪಡೆದು 21,284 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.












Click it and Unblock the Notifications