ಮಧ್ಯಪ್ರದೇಶದಲ್ಲಿ ಪ್ರತಿಷ್ಠೆ ಪಕ್ಕಕ್ಕಿಟ್ಟು ಬಿಎಸ್ಪಿ ಜೊತೆ ಕಾಂಗ್ರೆಸ್ ಮೈತ್ರಿ?
ಇಂಧೋರ್, ಅಕ್ಟೋಬರ್ 15: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಎಸ್ಪಿ ಒಪ್ಪದ ಕಾರಣದಿಂದಾಗಿ ವಿಧಾನಸಭೆ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಆದರೆ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಇನ್ನೂ ಸಾಧ್ಯತೆಗಳಿವೆ ಎಂಬ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸುತ್ತಿದೆ.
ಈ ಕುರಿತು ಭಾನುವಾರ ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ, 'ನಮ್ಮೆಲ್ಲರ ಮುಖ್ಯ ಗುರು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು. ಅದಕ್ಕಾಗಿ ಅಗತ್ಯವಿರುವ ಸಾಧ್ಯತೆಗಳನ್ನೆಲ್ಲ ಪರಾಮರ್ಶಿಸುತ್ತೇವೆ' ಎಂದರು.
14 ವರ್ಷಗಳ ಕಾಲ ಅರಾಜಕತೆಯ ಆಡಳಿತವನ್ನು ಬಿಜೆಪಿ ನೀಡಿದೆ. ಇದಕ್ಕೆ ಅಂತ್ಯಬೇಕಿದೆ ಎಂದ ಅವರು, ಕಾಂಗ್ರೆಸ್ ಪಕ್ಷವು ಸಮಾನ ಮನಸ್ಕ ಇತರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮತ ಒಡೆಯದಂತೆ ನೋಡಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಡ್ರೈವರ್ ಸೀಟಿನಲ್ಲಿ ನಾವೇ?
ಬಿಎಸ್ಪಿಯು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೇ ಇರುವುದು ಕಾಂಗ್ರೆಸ್ ಗೆ ಹಿನ್ನಡೆಯನ್ನುಂಟುಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಂದಿಯಾ, 'ಖಂಡಿತ ಇಲ್ಲ. ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದರಿಂದ ನಮಗೆ ಲಾಭಗಳಿದ್ದವು. ಆದರೆ ಈಗಲೂ ಕಾಂಗ್ರೆಸ್ಸಿಗೆ ಜನಬೆಂಬಲವಿದೆ. ಬದಲಾವಣೆಗಾಗಿ ಜನರು ನಮ್ಮನ್ನು ಬಯಸುತ್ತಿದ್ದಾರೆ. ಆದ್ದರಿಂದ ಈಗಲೂ ನಾವೇ ಡ್ರೈವರ್ ಸೀಟಿನಲ್ಲಿ ಕುಳಿತಿದ್ದೇವೆ' ಎಂದರು.

ಬಿಎಸ್ಪಿ ಜೊತೆ ಮೈತ್ರಿ ಸಾಧ್ಯತೆ
ಕಾಂಗ್ರೆಸ್ಸಿಗೆ ಮಾಯಾವತಿ ಕೈಕೊಟ್ಟರೂ, ಈಗಲೂ ಕಾಂಗ್ರೆಸ್ಸಿನಲ್ಲಿ ಒಂದು ಭರವಸೆ ಉಳಿದುಕೊಂಡಿದೆ. ಸಮಾಜವಾದಿ ಪಕ್ಷ ಮತ್ತು ಗೊಂಡ್ವಾನ ಗಣತಂತ್ರ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಕ್ಕೆ ಪ್ರಯತ್ನ ನಡೆಸುತ್ತಿದೆ. ಬಿಎಸ್ಪಿ ಜೊತೆ ಮತ್ತೊಮ್ಮೆ ಸಂಧಾನ ನಡೆಸಲು ಕಾಂಗ್ರೆಸ್ ಪ್ರಯತ್ನಿಸುವ ಸಾಧ್ಯತೆಯೂ ಇದೆ. 'ನಮ್ಮೆಲ್ಲರ ಆದ್ಯ ಗುರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ಆಗಿರುವುದರಿಂದ ಎಲ್ಲಾ ಮೈತ್ರಿ ಸಾಧ್ಯತೆಗಳ ಬಗ್ಗೆಯೂ ಚಿಂತಿಸಲಾಗುವುದು' ಎಂದು ಸಿಂದಿಯಾ ಹೇಳಿದ್ದಾರೆ.

ಮಾಯಾವತಿ ನಿಲುವು ಬದಲಾಗುವುದೇ?
ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ನಡೆದ ಭಿನ್ನಾಭಿಪ್ರಾಯದಿಂದಾಗಿ ಕಾಂಗ್ರೆಸ್ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರದಿಂದ ಹಿಂದೆ ಸರಿದಿತ್ತು. ಈ ಎರಡು ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಆಡಳಿತವಿರೋಧಿ ಅಲೆ ಇದ್ದರೂ ಕಾಂಗ್ರೆಸ್ ಯಾವ ಪಕ್ಷದೊಂದಿಗೂ ಮೈತ್ರಿಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವುದರಿಂದ ಗೆಲ್ಲುವುದು ಸುಲಭವಿಲ್ಲ.

ಜನರಿಗೆ ಬದಲಾವಣೆ ಬೇಕಿದೆ!
"ನಾವು ನರೇಂದ್ರ ಮೋದಿ ಅಥವಾ ಶಿವರಾಜ್ ಸಿಂಗ್ ಅವರ ವಿರುದ್ಧ ಹೋರಾಡುತ್ತಿಲ್ಲ. ಬದಲಾಗಿ ಜನರ ಪರವಾಗಿ ಹೋರಾಡುತ್ತಿದ್ದೇವೆ. ಮಧ್ಯಪ್ರದೇಶ ಸರ್ಕಾರ ರೈತರನ್ನು, ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸೋತಿದೆ. ಭ್ರಷ್ಟಾಚಾರ, ನಿರುದ್ಯೋಗ ಹೆಚ್ಚಾಗಿದೆ. ಆದ್ದರಿಂದ ಜನರು ಬದಲಾವಣೆ ಬಯಸುತ್ತಿದ್ದಾರೆ" ಎಂದು ಸಿಂದಿಯಾ ಹೇಳಿದರು.ಒಟ್ಟು 230 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications