ಚುನಾವಣೆ ಸಮೀಸುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಜೆಪಿ: ಮಧ್ಯಪ್ರದೇಶದ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 35 ರಷ್ಟು ಮೀಸಲಾತಿ
ಭೋಪಾಲ್, ಅಕ್ಟೋಬರ್ 05: ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಮಹತ್ವದ ನಿರ್ಧಾರವೊಂದನ್ನು ಮಧ್ಯಪ್ರದೇಶ ಸರ್ಕಾರ ಕೈಗೊಂಡಿದೆ. ರಾಜ್ಯ ಅರಣ್ಯ ಇಲಾಖೆಯನ್ನು ಹೊರತುಪಡಿಸಿ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 35 ರಷ್ಟು ಮೀಸಲಾತಿಯನ್ನು ಸಿಎಂ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಸರ್ಕಾರ ಘೋಷಿಸಿದೆ.
ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ 35 ರಷ್ಟು ಮೀಸಲಾತಿಯನ್ನು ಒದಗಿಸಲು ರಾಜ್ಯ ಸರ್ಕಾರವು ಮಧ್ಯಪ್ರದೇಶ ಸಿವಿಲ್ಸ್ ಸೇವೆಗಳ (ಮಹಿಳೆಯರ ನೇಮಕಾತಿಗಾಗಿ ವಿಶೇಷ ನಿಬಂಧನೆ) ನಿಯಮಗಳು-1997 ಅನ್ನು ತಿದ್ದುಪಡಿ ಮಾಡಿದೆ.

'ಯಾವುದೇ ಸೇವಾ ನಿಯಮಗಳಲ್ಲಿ ಏನೇ ಇದ್ದರೂ, ನೇರ ನೇಮಕಾತಿಯ ಹಂತದಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಕಾಯ್ದಿರಿಸಬೇಕು. ರಾಜ್ಯ (ಅರಣ್ಯ ಇಲಾಖೆ ಹೊರತುಪಡಿಸಿ) ಸರ್ಕಾರದ ಎಲ್ಲಾ ಹುದ್ದೆಗಳಲ್ಲಿ ಶೇ 35 ರಷ್ಟನ್ನು ಕಾಯ್ದಿರಿಸಬೇಕು. ಈ ಮೀಸಲಾತಿಯು ಪ್ರಾಯೋಗಿಕವಾಗಿ ಮಹಿಳೆಯರಿಗೆ ನ್ಯಾಯವನ್ನು ಒದಗಿಸಬೇಕು' ಎಂದು ಸರ್ಕಾರದ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿಯನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘೋಷಿಸಿದ್ದಾರೆ. ಪೊಲೀಸ್ ಮತ್ತು ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರಿಗೆ ಶೇಕಡಾ 35 ರಷ್ಟು ಮೀಸಲಾತಿಯನ್ನು ಘೋಷಿಸಿದ್ದಾರೆ. ಇದಾದ ಕೆಲವೇ ದಿನಗಳ ನಂತರ ಅಧಿಕೃತ ಅಧಿಸೂಚನೆ ಹೊರಬಂದಿದೆ.
ಸ್ಥಳೀಯ ಆಡಳಿತ ಮಂಡಳಿಗಳಾದ ಆಲ್ಡರ್‌ಮೆನ್ ಮತ್ತು ಇತರ ಪ್ರಮುಖ ಹುದ್ದೆಗಳಲ್ಲಿ ನೇಮಕ ಮಾಡಿಕೊಳ್ಳಲು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ಅವರ ಶೈಕ್ಷಣಿಕ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಚೌಹಾಣ್ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಮಸೂದೆಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನುಮೋದನೆ ಪಡೆದ ನಂತರ ಅಧಿಕೃತ ಕಾನೂನಾಗಿ ಮಾರ್ಪಟ್ಟಿದೆ.
'ನಾರಿ ಶಕ್ತಿ ವಂದನ್' ಎಂದು ಕರೆಯಲ್ಪಡುವ ಈ ಕಾನೂನು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಸರ್ವಾನುಮತದ ಬೆಂಬಲವನ್ನು ಗಳಿಸಿದೆ. ಹೊಸದಾಗಿ ಉದ್ಘಾಟನೆಗೊಂಡ ಸಂಸತ್ತಿನ ಕಟ್ಟಡದಲ್ಲಿ ಅಂಗೀಕರಿಸಲ್ಪಟ್ಟ ಮೊದಲ ಮಸೂದೆಯಾಗಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿಯನ್ನು ಇದು ಕಡ್ಡಾಯಗೊಳಿಸುತ್ತದೆ.
ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕರ್ನಾಟಕದಂತಯೇ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದೆ. ಇದಕ್ಕೆ ಟಕ್ಕರ್ ನೀಡಲು ಮೀಸಲಾತಿ ಅಸ್ತ್ರವನ್ನು ಬಿಜೆಪಿ ಬಳಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.












Click it and Unblock the Notifications