ಅಮೇಥಿ: ರಾಹುಲ್, ಸ್ಮೃತಿ, ವಿಶ್ವಾಸ್ ಮಧ್ಯೆ ತ್ರಿಕೋನವಾ?
ಅಮೇಥಿ, ಮೇ 5: ಈಗಷ್ಟೇ ಕಾಂಗ್ರೆಸ್ ಪಕ್ಷದ ಯುವರಾಜ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪರಂಪರಾಗತವಾಗಿ ಅಮೇಥಿಯನ್ನು ಪ್ರತಿನಿಧಿಸುತ್ತಿದ್ದರೂ ಕ್ಷೇತ್ರ ಹೇಗೆ ಅವಗಣನೆಗೆ ಈಡಾಗಿದೆ ಎಂಬುದನ್ನು ಓದಿದಿರಿ. ಈ ಕಣದಲ್ಲಿರುವ ಬಿಜೆಪಿಯ ಸ್ಮೃತಿ ಇರಾನಿ, ಆಮ್ ಆದ್ಮಿ ಕುಮಾರ್ ವಿಶ್ವಾಸ್ ಮತ್ತು ರಾಹುಲ್ ಗಾಂಧಿ ಅವರುಗಳ ಮಧ್ಯೆ ಕಣದಲ್ಲಿ ತ್ರಿಕೋನ ಸ್ಪರ್ಧೆ ಹೇಗಿದೆ ಎಂಬುದರತ್ತ ಒಂದು ನೋಟ ಇಲ್ಲಿದೆ.
ದೇಶಕ್ಕೆ ಮೂರು ಪ್ರಧಾನಿಗಳನ್ನು ಕೊಟ್ಟು ನಾಲ್ಕನೆಯ ಪ್ರಧಾನಿಯನ್ನೂ ಕಾಣಿಕೆ ನಿಡಲು ಮುಂದಾಗಿರುವ ಗಾಂಧಿ ಮನೆತನದ Congress ಪಕ್ಷಕ್ಕೆ ಅಮೇಥಿ ಎಷ್ಟು ಹಳೆಯದೋ ಅಷ್ಟೇ ಹೊಸ ಮುಖಗಳು ಈ ಬಾರಿ ಆ ಪಕ್ಷದ ಅಭ್ಯರ್ಥಿಯನ್ನು ಎದುರಿಸುತ್ತಿದೆ. ಹೌದು ಹೊಸ ಮುಖಗಳಾದ ಸ್ಮೃತಿ ಇರಾನಿ ಮತ್ತು ಕುಮಾರ್ ವಿಶ್ವಾಸ್ ಅವರಿಬ್ಬರೂ ಮೇ 7ರಂದು ನಡೆಯಲಿರುವ ಚುನಾವಣೆಯಲ್ಲಿ ರಾಹುಲ್ ಅವರನ್ನು ತಡವಿಕೊಂಡಿದ್ದಾರೆ.

2009ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು BSPಯ ಆಶೀಷ್ ಶುಕ್ಲಾ ಅವರ ವಿರುದ್ಧ 3,70,198 ಮತಗಳ ಅಂತರದಿಂದ ಜಯಶಾಲಿಯಾಗಿದ್ದರು. ಇನ್ನು 2004ರಲ್ಲಿಯೂ BSPಯ ಚಂದ್ರಪ್ರಕಾಶ್ ಮಿಶ್ರಾ ಅವರನ್ನು 2.9 ಲಕ್ಷ ಮತಗಳಿಂದ ಸೋಲಿಸಿದ್ದರು. ಆದರೆ ಈ ಬಾರಿಯೂ ರಾಹುಲ್ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಬಾರಿಸುತ್ತಾರಾ? ಆಡಳಿತ-ವಿರೋಧಿ ಅಲೆ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ಮತ್ತೆ ರಾಹುಲ್ ಅವರನ್ನು ಗೆಲ್ಲಿಸಿಕೊಡುವುದು ಕಷ್ಟವಾಗಿದೆ. ಜತೆಗೆ, ರಾಹುಲ್ ಅವರ ವೈಯಕ್ತಿಕ ವರ್ಚಸ್ಸು ಸಹ ಕಳೆಗುಂದಿದೆ ಎಂಬುದು ಅಮೇಥಿ ಪ್ರವಾಸದಲ್ಲಿ ಜನಜನಿತವಾದ ಸತ್ಯ.
ಇನ್ನು AAP ಕವಿ ಕುಮಾರ್ ವಿಶ್ವಾಸ್ 2011ರಿಂದಲೂ ಅಣ್ಣಾ ಹಜಾರೆ ಜತೆ ಭ್ರಷ್ಟಾಚಾರ ವಿರೋಧಿ ಆಮದೋಲನದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡವರು. ಆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ. ಕುಮಾರ್ ವಿಶ್ವಾಸ್ ಆಗಾಗ ವಿವಾದಗಳ ಗೂಡಾಗಿದ್ದಾರೆ. ಉತ್ತರಪ್ರದೇಶದವರೇ ಆದ ಕುಮಾರ್ ವಿಶ್ವಾಸ್, ರಾಹುಲ್ ಗಾಂಧಿಗೆ ತೀವ್ರ ಪ್ರತಿರೋಧವೊಡ್ಡುವ ವಿಶ್ವಾಸ ಹೊಂದಿದ್ದಾರೆ. (ಅಮೇಥಿ: ರಾಹುಲ್ ಗಾಂಧಿ ಸೋಲಿಗೆ ಈ ಅಷ್ಟಾಂಶ ಸಾಕು)
ಹಾಗೆಯೇ, BJPಯ ಸ್ಮೃತಿ ಇರಾನಿ ಪಕ್ಷದಲ್ಲಿ ಪ್ರಬಲವಾಗಿ ಗುರುತಿಸಿಕೊಂಡವರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ರಾಜ್ಯದಿಂದ ಮೇಲ್ಮನೆಗೆ ಆಯ್ಕೆಯಾಗಿಬಂದವರು. ಇದೀಗ ಮೋದಿ ಸೋದರಿ ಎಂದೇ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದ್ದಾರೆ. ಕಿರುತೆರೆ ನಟಿ ಕಮ ರಾಜಕಾರಣಿ ಸ್ಮೃತಿ ಇರಾನಿ, 2004ರಲ್ಲಿ ದಿಲ್ಲಿಯ ಚಾಂದಿನಿ ಚೌಕ್ ಕ್ಷೇತ್ರದಿಂದ ಸ್ಪರ್ಧಿಸಿ, ಕಪಿಲ್ ಸಿಬಲ್ ಗೆ ಸೋತಿದ್ದವರು. 2010ರಲ್ಲಿ ಪಕ್ಷದಲ್ಲಿ ಹೆಚ್ಚು ಚಾಲ್ತಿಗೆ ಬಂದ ಸ್ಮೃತಿ ಇರಾನಿ, ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
ಒಟ್ಟಾರೆ ಏನಪ್ಪಾ ಅಂದರೆ ಸ್ಮೃತಿ ಇರಾನಿ ಮತ್ತು ಕುಮಾರ್ ವಿಶ್ವಾಸ್ ಪರಸ್ಪರ ವಿರೋಧಿಗಳಾಗಿ ಹೋರಾಟ ನಡೆಸಿದ್ದಾರೆ. ಜತೆಗೆ ತಮ್ಮಿಬ್ಬರ ಗುರಿಯಾದ ರಾಹುಲ್ ಗಾಂಧಿ ಅವರ ವಿರುದ್ಧವೂ ಹೋರಾಟ ನಡೆಸಿದ್ದಾರೆ. ಆದರೆ ಇವರಿಬ್ಬರೂ ಮತ ವಿಭಜನೆಗೆ ದಾರಿಯಾಗಿ ಅಂತಿಮವಾಗಿ ರಾಹುಲ್ ಗಾಂಧಿ ಗೆಲುವಿಗೆ ಸೋಪಾನವಾಗುತ್ತಾರಾ? ಎಂಬುದು ಕದನ ಕುತೂಹಲವಾಗಿದೆ.












Click it and Unblock the Notifications