LPG e-KYC: ಎಲ್‌ಪಿಜಿ ಬಳಕೆದಾರರು ಗಮನಿಸಲೇಬೇಕಾದ ಮಹತ್ವದ ಮಾಹಿತಿ ಇದು
LPG e-KYC: ದೇಶಾದ್ಯಂತ ಅಡುಗೆ ಅನಿಲ (ಎಲ್‌ಪಿಜಿ) ಬಳಸುತ್ತಿರುವ ಗ್ರಾಹಕರಿಗೆ ಗ್ಯಾಸ್ ವಿತರಣಾ ಕಂಪನಿಗಳು ಮಹತ್ವದ ಸಂದೇಶವನ್ನು ರವಾನೆ ಮಾಡಿವೆ. ಇದರ ಡೆಡ್‌ಲೈನ್ ಮುಗಿಯಲು ಇನ್ನೂ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಒಂದು ವೇಳೆ ಇದನ್ನ ಮಿಸ್ ಮಾಡಿಕೊಂಡ್ರೆ ಸಬ್ಸಿಡಿ ಸ್ಥಗಿತವಾಗುವ ಸಾಧ್ಯತೆಯಿದೆ. ಹಾಗಾದ್ರೆ, ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂಡೇನ್ (Indane), ಎಚ್‌ಪಿ (HP Gas) ಮತ್ತು ಭಾರತ್ ಗ್ಯಾಸ್ (Bharat) ಬಳಕೆದಾರರು ತಮ್ಮ ಗ್ಯಾಸ್ ಸಂಪರ್ಕಕ್ಕೆ ತಕ್ಷಣವೇ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನಿಗದಿತ ಸಮಯದೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಿದ್ದರೆ, ಸರ್ಕಾರದ ಕಡೆಯಿಂದ ಸಿಗುವ ಗ್ಯಾಸ್ ಸಬ್ಸಿಡಿ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಸಿಲಿಂಡರ್‌ಗಳನ್ನು ಪೂರ್ಣ ಮಾರುಕಟ್ಟೆ ದರ ತೆತ್ತು ಖರೀದಿ ಮಾಡಬೇಕಾಗುತ್ತದೆ.

ಇ-ಕೆವೈಸಿ ಪ್ರಕ್ರಿಯೆಯ ಉದ್ದೇಶ ಏನು?
ಗ್ಯಾಸ್ ಪೂರೈಕೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು, ಅನಧಿಕೃತ ಹಾಗೂ ನಕಲಿ ಗ್ಯಾಸ್ ಸಂಪರ್ಕಗಳನ್ನು ಸಂಪೂರ್ಣವಾಗಿ ತಡೆಯುವುದು ಈ ಯೋಜನೆ ಮುಖ್ಯ ಉದ್ದೇಶವಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಅಷ್ಟೇ ಅಲ್ಲದೆ, ಸಾಮಾನ್ಯ ಗೃಹಬಳಕೆಯ ಗ್ಯಾಸ್ ಸಂಪರ್ಕ ಹೊಂದಿರುವ ಪ್ರತಿಯೊಬ್ಬರೂ ಸಹ ಈ ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಮಾಡಿಸಬೇಕಿದೆ. ಆನ್‌ಲೈನ್ ಪೋರ್ಟಲ್‌ಗಳಲ್ಲಿ ತಾಂತ್ರಿಕ ಹಾಗೂ ಸರ್ವರ್ ಸಮಸ್ಯೆಗಳು ಎದುರಾಗಿದ್ದರಿಂದ ಗ್ರಾಹಕರ ಅನುಕೂಲಕ್ಕಾಗಿ ಈ ಹಿಂದೆ ನೀಡಲಾಗಿದ್ದ ಅಂತಿಮ ಗಡುವನ್ನು ವಿಸ್ತರಿಸಲಾಗಿತ್ತು. ಆದರೆ ಇದೀಗ ಈ ಡೆಡ್‌ಲೈನ್ ಸಹ ಮುಗಿಯುವ ಹಂತದಲ್ಲಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಲಾಗಿದೆ. ಗ್ರಾಹಕರು ತಮ್ಮ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕವೇ ಕೆಳಗಿನ ಹಂತಗಳನ್ನು ಅನುಸರಿಸಿ ಇದನ್ನು ಪೂರ್ಣಗೊಳಿಸಬಹುದು. ಹಾಗಾದ್ರೆ ಹೇಗೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
ಇ-ಕೆವೈಸಿ ಪ್ರಕ್ರಿಯೆಗೆ ಸರಳ ವಿಧಾನಗಳು
* ಗೂಗಲ್ ಪ್ಲೇ ಸ್ಟೋರ್‌ನಿಂದ ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ (Indane Oil One, HP Pay, ಅಥವಾ Hello BPCL) ಮತ್ತು ಇದರೊಂದಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ 'Aadhaar FaceRD' ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
* ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಗ್ರಾಹಕರ ನೋಂದಣಿ ಸಂಖ್ಯೆ ಇರಬೇಕಾಗುತ್ತದೆ.
* ಆ್ಯಪ್‌ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ನಮೂದಿಸಿ ಲಾಗಿನ್ ಆಗಿ.
* ನಂತರ ಇ-ಕೆವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ, ಫೋನ್ ಕ್ಯಾಮೆರಾ ಮೂಲಕ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡಿ. ಆಗ ಕೆಲವೇ ನಿಮಿಷಗಳಲ್ಲಿ ಈ ಪ್ರಕ್ರಿಯೆ ಮುಕ್ತಾಯವಾಗುತ್ತದೆ.
ಇ-ಕೆವೈಸಿ ಪೂರ್ಣಗೊಳದಿದ್ದರೆ ಏನು ಮಾಡಬೇಕು?
ಒಂದು ವೇಳೆ ಮೊಬೈಲ್ ಆ್ಯಪ್ ಬಳಸಿ ಇ-ಕೆವೈಸಿ ಮಾಡಲು ಸಾಧ್ಯವಾಗದಿದ್ದರೆ ಅಥವಾ ತಾಂತ್ರಿಕ ತೊಂದರೆಗಳು ಎದುರಾದರೆ ಚಿಂತಿಸುವ ಅಗತ್ಯವಿಲ್ಲ. ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ನೇರವಾಗಿ ಭೇಟಿ ನೀಡಬಹುದು. ಅಲ್ಲಿ ಆಧಾರ್ ಕಾರ್ಡ್, ಗ್ಯಾಸ್ ಪಾಸ್‌ಬುಕ್ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ, ಬೆರಳಚ್ಚು (Biometric) ಅಥವಾ ಕಣ್ಣಿನ ಸ್ಕ್ಯಾನ್ ಮೂಲಕ ಸುಲಭವಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಒಂದು ವೇಳೆ ಗ್ರಾಹಕರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಬ್ಯಾಂಕ್ ಖಾತೆಗೆ ಜಮಾ ಆಗುವ ಸರ್ಕಾರದ ಸಬ್ಸಿಡಿ ತಕ್ಷಣವೇ ಸ್ಥಗಿತಗೊಳ್ಳಲಿದೆ. ಅಲ್ಲದೆ ಭವಿಷ್ಯದಲ್ಲಿ ಹೊಸ ಸಿಲಿಂಡರ್ ಬುಕಿಂಗ್ ಮಾಡುವಾಗಲೂ ತಾಂತ್ರಿಕ ಅಡೆತಡೆಗಳು ಎದುರಾಗುವ ಸಾಧ್ಯತೆಯಿದೆ. ಯಾವುದೇ ಗೊಂದಲಗಳಿದ್ದರೆ, ಕಂಪನಿಗಳ ಅಧಿಕೃತ ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಇಕೆವೈಸಿ ಮಾಡಿಸಲು ದಿನಾಂಕ ಆಗಸ್ಟ್ 23 ಅಂದರೆ ಇನ್ನೊಂದು ದಿನ ಮಾತ್ರ ಬಾಕಿ ಇದೆ ಅಷ್ಟೇ.


Click it and Unblock the Notifications
