ಲವ್ ಜಿಹಾದ್ ಸಂತ್ರಸ್ತೆ ತಾರಾ ಪತಿ ಬಂಧನ
ರಾಂಚಿ, ಆ.28 : ಜಾರ್ಖಂಡಿನ ಶೂಟರ್ ತಾರಾ ಸಹದೇವ್ ರನ್ನು ಲವ್ ಜಿಹಾದ್ ಮೂಲಕ ಮದುವೆಯಾಗಿದ್ದ ಆಕೆ ಪತಿ ರಂಜಿತ್ ಕೊಹ್ಲಿ ಅಲಿಯಾಸ್ ರಾಕಿಬುಲ್ ಹಸನ್ ಖಾನ್ ನನ್ನು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಲವ್ ಜಿಹಾದ್, ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸಿದ ನಂತರ ಎಚ್ಚೆತ್ತುಕೊಂಡಿರುವ ತಾರಾ ತನ್ನ ಪತಿಯಿಂದ ವಿವಾಹ ವಿಚ್ಛೇದನ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ರಾಷ್ಟ್ರಮಟ್ಟದ ಶೂಟಿಂಗ್ ಕ್ರೀಡಾಪಟು ತಾರಾ ಪತಿ ರಂಜಿತ್ ಕುಮಾರ್ ಕೊಹ್ಲಿ ಅಲಿಯಾಸ್ ರಾಕಿಬುಲ್ ಹಸನ್ ಖಾನ್ ರನ್ನು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ರಾಂಚಿ ಹಾಗೂ ದೆಹಲಿ ಪೊಲೀಸರು ಜಂಟಿ ಕಾರ್ಯಾಚಾರಣೆ ನಡೆಸಿ ಬಂಧಿಸಿದ್ದರು. ರಂಜಿತ್ ತನ್ನ ತಾಯಿ ಜೊತೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಎಂದು ರಾಂಚಿ ಡಿಐಜಿ ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ.['ಲವ್ ಜಿಹಾದ್' ವಿವಾದದಲ್ಲಿ ಯೋಗಿ ಆದಿತ್ಯಾನಾಥ್ ]
ಕಳೆದ ಆ.22ರಂದು ತಾರಾ ಅವರು ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದರು. ಬಲವಂತವಾಗಿ ನನ್ನನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಪ್ರತಿನಿತ್ಯ ದೈಹಿಕ ಹಿಂಸೆ ನೀಡುತ್ತಿದ್ದಾನೆ ಎಂದು ಹಿಂದ್ ಪಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಐಪಿಸಿ ಸೆಕ್ಷನ್ 498 ಎ(ವರದಕ್ಷಿಣೆ ಕಿರುಕುಳ) 295ಎ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು.

ರಂಜಿತ್ ಗಾಗಿ ಬಲೆ ಬೀಸಿದ ಪೊಲೀಸರಿಗೆ ದೆಹಲಿಯ ಐಷಾರಾಮಿ ಹೋಟೆಲ್ ನಲ್ಲಿ ರಂಜಿತ್ ತನ್ನ ತಾಯಿ ಜೊತೆ ತಂಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ನಂತರ ಅವರನ್ನು ಚೇಸ್ ಮಾಡಿ ಬಂಧಿಸಲಾಗಿದೆ.
ಆದರೆ, ತನ್ನ ಸ್ನೇಹಿತನೊಬ್ಬನ ಮೂಲಕ ಮಾಧ್ಯಮಗಳಿಗೆ 7 ಪುಟಗಳ ಪತ್ರ ಬರೆದ ರಂಜಿತ್ ನಾನು ಹುಟ್ಟಿನಿಂದ ಹಿಂದೂವಾಗಿದ್ದೇನೆ. ತಾರಾಗೆ ನನ್ನ ಕಂಡರೆ ಆಗುತ್ತಿಲ್ಲ. ಆಕೆ ಮನೆಗೆ ನಾನು ಆರ್ಥಿಕ ನೆರವು ನೀಡುವಂತೆ ಕೋರಿದಳು. ನಾನು ಸದ್ಯಕ್ಕೆ ಸಾಧ್ಯವಿಲ್ಲ ಎಂದಿದ್ದಕ್ಕೆ ನಿನಗೆ ಸರಿಯಾದ ಪಾಠ ಕಲಿಸುತ್ತೇನೆ ಎಂದು ನನ್ನ ಮೇಲೆ ರೇಗಾಡಿದ್ದಳು ಎಂದು ಪತ್ರದಲ್ಲಿ ಹೇಳಿದ್ದಾನೆ.
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಕಾನೂನು ಪ್ರಕಾರ ಅರೋಪಿಗೆ ತಕ್ಕ ಶಿಕ್ಷೆಯಾಗಲಿದೆ. ಹಿಂದೂ ಸಂಘಟನೆಗಳು ಈ ಪ್ರಕರಣವನ್ನು ರಾಜಕೀಯ ಲಾಭ ಅಥವಾ ಇನ್ಯಾವುದೇ ಉದ್ದೇಶಕ್ಕೆ ಬಳಸಬಾರದು ಎಂದಿದ್ದಾರೆ.












Click it and Unblock the Notifications