ಚುನಾವಣೆ ಕಾಲೇ ಲಾಲು ರಾಜಕೀಯ ನೆಲೆ ಶಿಥಿಲ
ಪಾಟ್ನಾ, ಫೆ.25- ಲೋಕಸಭಾ ಚುನಾವಣೆ ಸಮ್ಮುಖದಲ್ಲಿ ಬಿಹಾರ ರಾಜಕೀಯದಲ್ಲಿ ಧ್ರುವೀಕರಣ ಆರಂಭವಾಗಿದೆ. ರಾಜ್ಯ ವಿಧಾನಸಭೆಯಲ್ಲಿ ರಾಷ್ಟ್ರೀಯ ಜನತಾ ದಳದ 13 ಶಾಸಕರು ಪ್ರತಿಪಕ್ಷ ಸ್ಥಾನದಿಂದ ಎದ್ದುಹೋಗಿ ಆಡಳಿತಾರೂಢ ಜೆಡಿಯು ಪಕ್ಕದಲ್ಲಿ ಕುಳಿತಿದ್ದಾರೆ.
ಈ ಬೆಳವಣಿಗೆ ಅನಿರೀಕ್ಷಿತವಾದರೂ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಇದರಿಂದ ಒಳ್ಳೆಯದೇ ಆಗಿದೆ. ಆದರೆ ಕಡು ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದರೂ ಜೈಲಿಂದ ಬಿಡುಗಡೆಗೊಂಡು ಲೋಕಸಭಾ ಚುನಾವಣೆ ವೇಳೆ ತಮ್ಮ ರಾಜಕೀಯ ವರಸೆ ಆರಂಭಿಸುವ ಲೆಕ್ಕಾಚಾರದಲ್ಲಿದ್ದ RJD ನಾಯಕ ಲಾಲು ಪ್ರಸಾದ್ ಯಾದವ್ ಗೆ ಇದರಿಂದ ಭಾರಿ ಹಿನ್ನಡೆಯಾಗಿದೆ. (ಚಿತ್ರದಲ್ಲಿ: RJDಯಿಂದ ಸಿಡಿದೆದ್ದು ಹೋದ ಶಾಸಕರು ನಿನ್ನೆ ರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭ)

ಮೊನ್ನೆಯಷ್ಟೇ, ಒಂದು ಕಾಲದ ಆತ್ಮೀಯ ಗೆಳೆಯ ಲೋಕ ಜನಶಕ್ತಿ ಪಕ್ಷದ ಅಧಿನಾಯಕ ರಾಮ್ ವಿಲಾಸ್ ಪಾಸ್ವಾನ್ ಬಿಜೆಪಿಯತ್ತ ದಾಪುಗಾಲು ಹಾಕಿದ್ದು ಲಾಲೂಗೆ ಭಾರಿ ಹೊಡೆತ ನೀಡಿತ್ತು. ಅದನ್ನು ಅರಗಿಸಿಕೊಳ್ಳುವ ಮುನ್ನವೇ 13 ಶಾಸಕರು ವಿರೋಧಿ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಹಾರ ವಿಧಾನ ಸಭೆಯಲ್ಲಿರುವ 22 ಶಾಸಕರ ಪೈಕಿ 13 ಮಂದಿ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ, ಜೆಡಿಯುಗೆ ಬೆಂಬಲ ನೀಡಲಿದ್ದಾರೆ. ಆದರೆ 6 ಮಂದಿ ಶಾಸಕರು ತಮ್ಮ ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳುವಲ್ಲಿ ಲಾಲು ಯಶಸ್ವಿಯಾಗಿದ್ದಾರೆ.
ಬಿಹಾರ ವಿಧಾನ ಸಭೆಯ ಸಂಖ್ಯಾ ಬಲ 243. ಇಲ್ಲಿನ ಮ್ಯಾಜಿಕ್ ಸಂಖ್ಯೆ 122. ಜೆಡಿಯು 116 ಸದಸ್ಯರನ್ನು ಹೊಂದಿದೆ. ಇಷ್ಟು ದಿನ ನಾಲ್ವರು ಕಾಂಗ್ರೆಸ್ ಶಾಸಕರು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿಯಿಂದಾಗಿ ನಿತೀಶ್ ಸರಕಾರ ಉಸಿರಾಡುತ್ತಿತ್ತು. ಇದೀಗ 7 ಮಂದಿ RJD ಶಾಸಕರ ಬೆಂಬಲದಿಂದಾಗಿ ನಿತೀಶ್ ಕುಮಾರ್ ಬಹುಮತದಲ್ಲಿದ್ದಾರೆ.
JDU ಪಕ್ಷದ ನಿತೀಶ್ ಕುಮಾರ್ ಸಂಪುಟದಲ್ಲಿ 16 ಸ್ಥಾನಗಳು ಖಾಲಿಬಿದ್ದಿವೆ. ಜತೆಗೆ, ಲೋಕಸಭೆಗೆ ಅಭ್ಯರ್ಥಿಗಳನ್ನು ನಿಲ್ಲಿಸಬೇಕಾಗಿದೆ. ಅಲ್ಲಿಗೆ ಲಾಲು ಪ್ರಸಾದರ 13 ಶಾಸಕರನ್ನು ಅಕಾಮಡೇಟ್ ಮಾಡಿ, ಸೂಕ್ತ ಸ್ಥಾನಮಾನ ನೀಡುವುದು ಮುಖ್ಯಮಂತ್ರಿ ನಿತೀಶ್ ಅವರಿಗೆ ಕಷ್ಟವೇನೂ ಆಗದು.












Click it and Unblock the Notifications