ಲೋಕ ಕದನ LIVE: ತೃಣಮೂಲ ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಬಿಜೆಪಿ ಸೇರ್ಪಡೆ
ನವದೆಹಲಿ, ಮಾರ್ಚ್ 14: ಲೋಕಸಭಾ ಚುನಾವಣೆ ಕದನ ದಿನೇ-ದಿನೇ ಬಣ್ಣ ಪಡೆದುಕೊಂಡು ರಂಗೇರುತ್ತಿದೆ. ಬಿಜೆಪಿ-ಕಾಂಗ್ರೆಸ್ ಜೊತೆಗೆ ಮಹಾಘಟಬಂದನ್ ಈ ಬಾರಿಯ ಸಾರ್ವತ್ರಿಕ ಚುನಾವಣೆಗೆ ಜಿದ್ದಾ-ಜಿದ್ದಿತನ ಪ್ರಾಪ್ತಿಸಿದೆ.
ನಿನ್ನೆಯಷ್ಟೆ ಕಾಂಗ್ರೆಸ್‌ನ ಮಹತ್ವದ ಕಾರ್ಯಕಾರಿಣಿ ಸಭೆ ನಡೆದಿದ್ದು, ಬಿಜೆಪಿಯನ್ನು ಸೋಲಿಸುವ ಏಕೈಕ ಗುರಿಯನ್ನು ಕಾಂಗ್ರೆಸ್ ನಿನ್ನೆ ಘೋಷಿಸಿದೆ. ಪ್ರಿಯಾಂಕಾ ಗಾಂಧಿ ತಮ್ಮ ಮೊದಲ ರಾಜಕೀಯ ಭಾಷಣವನ್ನು ನಿನ್ನೆ ಮಾಡಿದ್ದು ಸಹ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮಾಡಿಕೊಂಡಿವೆ. ಕಾಂಗ್ರೆಸ್ 20 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದರೆ. ಜೆಡಿಎಸ್ 8 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಪ್ರತಿದಿನ ನಡೆಯುವ ಲೋಕಸಭೆಗೆ ಸಂಬಂಧಿಸಿದ ಎಲ್ಲ ಸುದ್ದಿಗಳನ್ನು ಈ ಲೈವ್ ಪುಟದಲ್ಲಿ ನೀಡಲಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಘೋಷಣೆ. ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಣೆ, ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆ.

ದೆಹಲಿಯ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕಮ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಪಾಕಿಸ್ತಾನದ ಮೇಲೆ ದಾಳಿ ಆದಾಗ ಕಾಂಗ್ರೆಸ್ ನಡೆದುಕೊಂಡ ರೀತಿ ನನಗೆ ಸರಿ ಬರಲಿಲ್ಲ ಅದಕ್ಕಾಗಿ ಪಕ್ಷ ತ್ಯಜಿಸಿದೆ ಎಂದು ಅವರು ಹೇಳಿದ್ದಾರೆ.

ಬಿಹಾರ ಬಿಜೆಪಿ ಚುನಾವಣಾ ಸಮಿತಿಯು ಇಂದು ಪಾಟ್ನಾದಲ್ಲಿ ಸಭೆ ನಡೆಸಿದೆ. ಬಿಹಾರದಲ್ಲಿ ಬಿಜೆಪಿಯು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ.
ತೃಣಮೂಲ ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ವಿವಿಧ ರಾಜ್ಯಗಳಲ್ಲಿ ಬಿಜೆಪಿಗೆ ಸೇರ್ಪಡೆ ಆಗುತ್ತಿರುವ ಶಾಸಕರ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿದೆ.

ಕೇರಳದ ತ್ರಿಶೂರ್‌ಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನಿಷ್ಟ ಆರ್ಥಿಕ ಭದ್ರತೆಯನ್ನು ಎಲ್ಲ ಬಡವರಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ಪವನ್ ಕಲ್ಯಾಣ್ ಸ್ಥಾಪಿತ ಜನಸೇನಾ ಪಕ್ಷವು ವಿಧಾನಸಭಾ ಚುನಾವಣೆಗೆ 32 ಅಭ್ಯರ್ಥಿಗಳು ಹಾಗೂ ಲೋಕಸಭೆ ಚುನಾವಣೆಗೆ 4 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಆಂಧ್ರ ಪ್ರದೇಶದ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆರಹಿತ 16 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.












Click it and Unblock the Notifications