Lok Sabha Election 2024: ಮತ್ತೆ ಮೋದಿ ಮ್ಯಾಜಿಕ್- ಟೈಮ್ಸ್ ನೌ ಸಮೀಕ್ಷೆ ನೀಡಿದ ಅಂಕಿಅಂಶಗಳೇನು?
ನವದೆಹಲಿ, ಆಗಸ್ಟ್ 18: ಮುಂದಿನ ವರ್ಷದ ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿವೆ. ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸುತ್ತಿವೆ. ಪ್ರತಿಪಕ್ಷಗಳ ಮೈತ್ರಿಕೂಟವಾದ 'ಇಂಡಿಯಾ' ಎರಡು ಬಾರಿ ಸಭೆ ಸೇರಿ ಮಾತುಕತೆ ನಡೆಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ಸಹ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚರ್ಚೆ ನಡೆಸಿವೆ. ಒಂದು ವೇಳೆ, ಈಗ ಚುನಾವಣೆ ನಡೆದರೆ, ಮತ್ತೆ ಅಧಿಕಾರಕ್ಕೆ ಬರುವುದು ಮೋದಿಯೇ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.
ಟೈಮ್ಸ್ ನೌ- ಇಟಿಜಿ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಪ್ರಧಾನಿ ಮೋದಿ ಮ್ಯಾಜಿಕ್ ಮುಂದುವರಿಯಲಿದೆ. ಈಗಾಗಲೇ ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಮೋದಿ ಮೂರನೇ ಬಾರಿಯೂ ಆಯ್ಕೆಯಾಗಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) 300 ಕ್ಕೂ ಹೆಚ್ಚು ಸ್ಥಾನಗಳನ್ನು ವಶಪಡಿಸಿಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 160 ರಿಂದ 190 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.
ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) 296 ರಿಂದ 326 ಸ್ಥಾನಗಳನ್ನು ಗಳಿಸಬಹುದು ಎಂದು ಸಮೀಕ್ಷೆಯ ಅಂಕಿಅಂಶಗಳು ಬಹಿರಂಗಪಡಿಸಿವೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಹಲವು ರೀತಿಯಲ್ಲಿ ಪ್ರಯತ್ನಪಟ್ಟರೂ ಮೋದಿ ಮ್ಯಾಜಿಕ್‌ಗೆ ತಡೆಯೊಡ್ಡಲು ಸಾಧ್ಯವಿಲ್ಲ ಎಂದು ಸಮೀಕ್ಷೆ ಹೇಳಿದೆ.
ದೇಶದಲ್ಲಿ ಮೋದಿ ಜನಪ್ರಿಯತೆಯು ಇನ್ನೂ ಕುಗ್ಗಿಲ್ಲ ಎಂದು ಸಮೀಕ್ಷೆ ಹೇಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಇಂಡಿಯಾ ಮೈತ್ರಿಕೂಟಕ್ಕೆ ಸಾಧ್ಯವಾಗುವುದಿಲ್ಲ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಹಿಂದಿ ಭಾಷಿಗ ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಕೂಟ ತನ್ನ ಪ್ರಾಬಲ್ಯವನ್ನು ಮುಂದುವರಿಸಲಿದೆ. ಆ ರಾಜ್ಯಗಳಲ್ಲಿ ಶೇ 80 ರಷ್ಟು ಪ್ರಾಬಲ್ಯವನ್ನು ಎನ್‌ಡಿಎ ಹೊಂದಿದೆ ಎಂದು ಸಮೀಕ್ಷೆ ಹೇಳಿದೆ. ಇದು ಉತ್ತರ ಭಾರತದಲ್ಲಿ ಮೋದಿ ಅಲೆ ಇನ್ನೂ ಇದೆ ಎಂಬುದನ್ನು ತಿಳಿಸುತ್ತದೆ.
ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಗಮನಾರ್ಹ ಗೆಲುವು ದಾಖಲಿಸುತ್ತದೆ ಎಂದು ಸಮೀಕ್ಷೆ ಹೇಳಿದೆ. ಈ ರಾಜ್ಯಗಳಲ್ಲಿ ಎನ್‌ಡಿಎ 80 ರಲ್ಲಿ 70 ಸ್ಥಾನಗಳನ್ನು ಗಳಿಸಬಹುದು ಎಂದು ಇಟಿಜಿ ಸಮೀಕ್ಷೆ ಭವಿಷ್ಯ ನುಡಿದಿದೆ.
543 ಎಂಪಿ ಸ್ಥಾನಗಳಲ್ಲಿ ಎನ್‌ಡಿಎ ಶೇ 42.60 ಮತಗಳನ್ನು ಪಡೆಯಲಿದೆ. ನಂತರ ಇಂಡಿಯಾ ಮೈತ್ರಿಕೂಟವು ಶೇ 40.20 ಮತಗಳನ್ನು ಪಡೆಯಲಿದೆ. ವೈಎಸ್‌ಆರ್‌ಸಿಪಿ ಶೇ 2.67, ಬಿಆರ್‌ಎಸ್ ಶೇ 1.15, ಬಿಜೆಪಿ ಶೇ 1.75 ಹಾಗೂ ಇತರರು ಶೇ 11.63 ಮತಗಳನ್ನು ಪಡೆಯಲಿವೆ.












Click it and Unblock the Notifications