Lok Sabha Election 2024 Result; ಹೈದರಾಬಾದ್‌ನಲ್ಲಿ ಬಿಜೆಪಿ ಹಿನ್ನಡೆ
ಹೈದರಾಬಾದ್, ಜೂನ್ 04; ಲೋಕಸಭಾ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದೆ. ದೇಶದ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ತೆಲಂಗಾಣ ರಾಜ್ಯದ ಹೈದರಾಬಾದ್ ಸಹ ಒಂದು. ಸದ್ಯದ ಮಾಹಿತಿ ಪ್ರಕಾರ ಕ್ಷೇತ್ರದಲ್ಲಿ ಬಿಜೆಪಿಯ ಕೆ. ಮಾಧವಿ ಲತಾ ಹಿನ್ನಡೆ ಅನುಭವಿಸಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಪ್ರತಿನಿಧಿಸುವ ಕ್ಷೇತ್ರ ಹೈದರಾಬಾದ್. ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಒವೈಸಿಗೆ ಎದುರಾಳಿಯಾಗಿ ಕೆ. ಮಾಧವಿ ಲತಾ ಕಣಕ್ಕಿಳಿಸಿದೆ. ಕ್ಷೇತ್ರದ ಚುನಾವಣಾ ಪ್ರಚಾರ ಜೋರಾಗಿತ್ತು.

ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು 122254 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ. ಅಸಾದುದ್ದೀನ್ ಒವೈಸಿ 162979 ಮತಗಳನ್ನು ಪಡೆದಿದ್ದಾರೆ. ತೆಲಂಗಾಣ ಕಾಂಗ್ರೆಸ್ ಆಡಳಿತ ಇರುವ ರಾಜ್ಯ. ಹೈದರಾಬಾದ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಹಮದ್ ವಾಲಿವುಲ್ಲಾ ಸಮೀರ್ 16641 ಮತಗಳನ್ನು ಪಡೆದಿದ್ದಾರೆ.
ಹೈದರಾಬಾದ್‌ನ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರಿಗೆ ಇದು ಮೊದಲ ಚುನಾವಣೆ. ಹೈದರಾಬಾದ್ ಎಐಎಂಐಎಂ ಭದ್ರಕೋಟೆ ಎಂದರೂ ತಪ್ಪಿಲ್ಲ. ಅಸಾದುದ್ದೀನ್ ಒವೈಸಿ ಕ್ಷೇತ್ರದ ಹಾಲಿ ಸಂಸದರು. 2004ರಿಂದ ನಾಲ್ಕು ಬಾರಿ ಅವರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ 6 ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ ಈ ಬಾರಿ ಬಿಜೆಪಿ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ಭಾರೀ ಪ್ರಚಾರ ಕೈಗೊಂಡಿತ್ತು.
ಚುನಾವಣಾ ಪೂರ್ವ ಸಮೀಕ್ಷೆಗಳು ಹೈದರಾಬಾದ್‌ನಲ್ಲಿ ಅಸಾದುದ್ದೀನ್ ಒವೈಸಿ ಜಯಗಳಿಸಲಿದ್ದಾರೆ ಎಂದು ಅಂದಾಜಿಸಿದ್ದವು. ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಸಹ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎರಡಂಕಿ ಸೀಟುಗಳು ಬರುವುದಿಲ್ಲ ಎಂದು ಸಮೀಕ್ಷೆಗಳು ಹೇಳಿದ್ದವು.
ಕಾಂಗ್ರೆಸ್, ಬಿಜೆಪಿ ನಡುವೆ ತೆಲಂಗಾಣದಲ್ಲಿ ನೇರ ಪೈಪೋಟಿ ಇದೆ. ಬಿಆರ್‌ಎಸ್ ಪಕ್ಷ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿಯೂ ಸೋಲು ಕಂಡಿತ್ತು. ಲೋಕಸಭೆ ಚುನಾವಣೆಯಲ್ಲಿ 1 ಸ್ಥಾನವನ್ನು ಪಕ್ಷ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications