ಲಾಕ್ ಡೌನ್ ವಿಸ್ತರಣೆ; ಭಾರತೀಯ ರೈಲ್ವೆಯ 5 ಘೋಷಣೆಗಳು
ಬೆಂಗಳೂರು, ಮೇ 03 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಲಾಗಿದ್ದ ಲಾಕ್ ಡೌನ್ ವಿಸ್ತರಣೆಯಾಗಿದೆ. ಮೇ 4ರಿಂದ 17ರ ತನಕ ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಆದ್ದರಿಂದ ರೈಲುಗಳ ಸಂಚಾರ ಸಹ ಆರಂಭವಾಗುವುದಿಲ್ಲ.
Recommended Video
ಶುಕ್ರವಾರ ಕೇಂದ್ರ ಗೃಹ ಇಲಾಖೆ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಆದರೆ, ದೇಶವನ್ನು ವಲಯವಾರು ವಿಂಗಡನೆ ಮಾಡಲಾಗಿದ್ದು, ವಿವಿಧ ವಲಯಗಳಿಗೆ ಲಾಕ್ ಡೌನ್‌ನಲ್ಲಿ ಕೆಲವು ವಿನಾಯಿತಿ ನೀಡಲಾಗಿದೆ.
ಲಾಕ್ ಡೌನ್ ಘೋಷಣೆಯಾದ ದಿನದಿಂದ ಭಾರತೀಯ ರೈಲ್ವೆ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಿತ್ತು. 2ನೇ ಹಂತದಲ್ಲಿ ಲಾಕ್ ಡೌನ್ ವಿಸ್ತರಣೆಯಾದ ಬಳಿಕ ರೈಲುಗಳ ಸಂಚಾರ ಸ್ಥಗಿತವನ್ನು ಸಹ ವಿಸ್ತರಣೆ ಮಾಡಲಾಗಿತ್ತು.
ಈಗ ಪುನಃ ರೈಲ್ವೆ ಮೇ 17ರ ಮಧ್ಯರಾತ್ರಿ ತನಕ ಪ್ರಯಾಣಿಕ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಆದರೆ, ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಗೂಡ್ಸ್ ರೈಲುಗಳು ಸಂಚಾರ ನಡೆಸುತ್ತವೆ ಎಂದು ಸ್ಪಷ್ಟಪಡಿಸಿದೆ.

ಮೇ 17ರ ತನಕ ಪ್ರಯಾಣಿಕರ ರೈಲು ಇಲ್ಲ
ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ ಲಾಕ್ ಡೌನ್ 2 ವಾರಗಳ ಕಾಲ ವಿಸ್ತರಣೆಯಾಗಿದೆ. ಆದ್ದರಿಂದ, ಮೇ 17ರ ಮಧ್ಯರಾತ್ರಿ ತನಕ ಪ್ರಯಾಣಿಕ ರೈಲು ಸಂಚಾರವನ್ನು ಆರಂಭಿಸುವುದಿಲ್ಲ ಎಂದು ಭಾರತೀಯ ರೈಲ್ವೆ ಘೋಷಣೆ ಮಾಡಿದೆ.

ಗೂಡ್ಸ್, ವಿಶೇಷ ರೈಲು ಸಂಚಾರ
ಈ ಹಿಂದೆ ಇದ್ದಂತೆ ಅಗತ್ಯ ವಸ್ತುಗಳ ಸರಬರಾಜಿಗಾಗಿ ಗೂಡ್ಸ್ ಮತ್ತು ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ವಲಸೆ ಕಾರ್ಮಿಕರ ಸಂಚಾರಕ್ಕಾಗಿ ವಿಶೇಷ ಶ್ರಮಿಕ ರೈಲುಗಳನ್ನು ಸಂಚಾರ ನಡೆಸಲಾಗುತ್ತದೆ. ಇವುಗಳಲ್ಲದೇ ಬೇರೆ ಯಾವುದೇ ರೈಲುಗಳು ಸಂಚಾರ ನಡೆಸುವುದಿಲ್ಲ ಎಂದು ಭಾರತೀಯ ರೈಲ್ವೆ ಹೇಳಿದೆ.

ರಾಜ್ಯ ಸರ್ಕಾರದಿಂದ ಮನವಿ ಮಾಡಬೇಕು
ರಾಜ್ಯ ಸರ್ಕಾರದಿಂದ ಗುರುತಿಸಲಾದ ವಲಸೆ ಕಾರ್ಮಿಕರು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳ ಸಂಚಾರಕ್ಕಾಗಿ ವಿಶೇಷ ಶ್ರಮಿಕ ರೈಲುಗಳನ್ನು ಓಡಿಸಲಾಗುತ್ತದೆ. ಆದರೆ, ಇದಕ್ಕಾಗಿ ರಾಜ್ಯ ಸರ್ಕಾರಗಳು ಮನವಿ ಸಲ್ಲಿಸಬೇಕಿದೆ. ರಾಜ್ಯ ಮನವಿ ಮಾಡದಿದ್ದರೆ ಬಸ್‌ಗಳಲ್ಲಿಯೇ ಕಾರ್ಮಿಕರನ್ನು ಕಳಿಸಬಹುದಾಗಿದೆ.

ರಾಜ್ಯ ಸರ್ಕಾರವನ್ನು ಸಂಪರ್ಕಿಸಿ
ಬೇರೆ-ಬೇರೆ ರಾಜ್ಯಗಳಿಗೆ ತೆರಳಲು ಬಯಸುವ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ತಾವು ಇರುವ ರಾಜ್ಯದ ಸರ್ಕಾರವನ್ನು ಸಂಪರ್ಕಿಸಬೇಕು. ರೈಲ್ವೆ ಇಲಾಖೆ ಕಾರ್ಮಿಕರನ್ನು ಕರೆದುಕೊಂಡು ಹೋಗುವ ಯಾವದೇ ಜವಾಬ್ದಾರಿ ತೆಗೆದುಕೊಂಡಿಲ್ಲ. ವಯಕ್ತಿಕ ಅಥವ ಗುಂಪಾಗಿ ಯಾವುದೇ ಟಿಕೆಟ್‌ಗಳನ್ನು ರೈಲ್ವೆ ನೀಡುತ್ತಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ರೈಲ್ವೆ ನಿಲ್ದಾಣಕ್ಕೆ ಬರಬೇಡಿ
ವಲಸೆ ಕಾರ್ಮಿಕರು ರೈಲು ಹೊರಡುವ ಸಮಯ ತಿಳಿಯಲು ರೈಲು ನಿಲ್ದಾಣಕ್ಕೆ ಬರಬೇಡಿ. ಸರ್ಕಾರ ರೈಲು ವ್ಯವಸ್ಥೆ ಮಾಡಿದರೆ ಸಮಯ, ನಿಲ್ದಾಣದ ವಿವರವನ್ನು ತಿಳಿಸಲಿದೆ ಎಂದು ಭಾರತೀಯ ರೈಲ್ವೆ ಮನವಿ ಮಾಡಿದೆ.












Click it and Unblock the Notifications