Arvind Kejriwal Arrest: ಅರವಿಂದ್ ಕೇಜ್ರಿವಾಲ್ ಬಂಧಿಸಿದ ಜಾರಿ ನಿರ್ದೇಶನಾಲಯಕ್ಕೆ ಸಿಕ್ಕಿದ್ದು ಬರೀ 70,000 ರೂಪಾಯಿ!
ನವದೆಹಲಿ, ಮಾರ್ಚ್ 22: ದೆಹಲಿ ಮದ್ಯ ನೀತಿ ಪ್ರಕರಣದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಮಾರ್ಚ್ 21ರ ಗುರುವಾರ ತಡರಾರಾತ್ರಿ ಬಂಧಿಸಿದೆ. ಕ್ರಿಮಿನಲ್ ಪ್ರಕರಣದಲ್ಲಿ ಬಂಧಿತರಾದ ಭಾರತದ ಮೊದಲ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಜಾರಿ ನಿರ್ದೇಶನಾಲಯ ಕ್ರಮ ಕೈಗೊಂಡಿದೆ. ಇನ್ನು, ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಅವರ ಪಕ್ಷ ಎಎಪಿ ಹೇಳಿದೆ. ಆಮ್ ಆದ್ಮಿ ಪಕ್ಷವು ಬಿಜೆಪಿ ಕಚೇರಿಗಳ ಹೊರಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದರೆ, ಜೆಪಿ ನಡ್ಡಾ ನೇತೃತ್ವದ ಬಿಜೆಪಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿದೆ.

ಅರವಿಂದ್ ಕೇಜ್ರಿವಾಲ್ ಬಂಧನದ ನಂತರ, ಅವರನ್ನು ರಾತ್ರಿ 11.25 ಕ್ಕೆ ಕೇಂದ್ರ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಕರೆತರಲಾಯಿತು. ಅವರು ಸ್ಪೋರ್ಟ್ಸ್ ಯುಟಿಲಿಟಿ ವಾಹನದ ಹಿಂದಿನ ಸೀಟಿನಲ್ಲಿ ಕುಳಿತಿರುವುದು ಕಂಡುಬಂದಿದೆ. ಜಾರಿ ನಿರ್ದೇಶನಾಲಯದ 10 ಸದಸ್ಯರ ತಂಡವು ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ಶೋಧ ನಡೆಸಿ ಎರಡು ಗಂಟೆಗಳ ನಂತರ ಅವರನ್ನು ಬಂಧಿಸಲಾಗಿತ್ತು.
ಅರವಿಂದ್ ಕೇಜ್ರಿವಾಲ್ ಅವರನ್ನು (ಮಾರ್ಚ್ 22 )ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಅವರ ಕಸ್ಟಡಿಗೆ ಕೋರಲಿದೆ. ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಸೇರಿದಂತೆ ಪ್ರಕರಣದಲ್ಲಿ ಇಡಿಯಿಂದ ಇದು 16 ನೇ ಬಂಧನವಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ವಿಚಾರಣೆಗಾಗಿ ಏಜೆನ್ಸಿ ನೀಡಿದ್ದ ಒಂಬತ್ತು ಸಮನ್ಸ್‌ಗಳನ್ನು ತಳ್ಳಿಹಾಕಿದ್ದರು.

"ಕೇಜ್ರಿವಾಲ್ ಬಂಧನ ಭ್ರಷ್ಟಾಚಾರದ ಸೋಲಿನ ಸಂಕೇತ. ಈಗ ಅರವಿಂದ್ ಕೇಜ್ರಿವಾಲ್ ತಕ್ಷಣ ರಾಜೀನಾಮೆ ನೀಡಬೇಕು. ಕೇಜ್ರಿವಾಲ್ ಜೈಲಿನಿಂದ ಸರ್ಕಾರವನ್ನು ನಡೆಸುತ್ತಾರೆ ಎಂದು ಕೇಜ್ರಿವಾಲ್ ಪಕ್ಷದ ನಾಯಕರು ಹೇಳುವುದು ಸಾಂವಿಧಾನಿಕ ನಿಯಮಗಳಿಗೆ ಅಪಮಾನವಾಗಿದೆ" ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಮನೆಯಲ್ಲಿ ಸಿಕ್ಕಿದ್ದು 70,000 ಮಾತ್ರ!
ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು ಅರವಿಂದ್ ಕೇಜ್ರಿವಾಲ್ ಅವರ ಮನೆಯ ಪ್ರತಿಯೊಂದು ಮೂಲೆಯನ್ನು ಏಜೆನ್ಸಿಯಿಂದ ಶೋಧಿಸಲಾಗಿದೆ ಎಂದು ಹೇಳಿದ್ದಾರೆ. ಇಡಿ ಅಧಿಕಾರಿಗಳಿಗೆ ಅವರ ಮನೆಯಿಂದ 70,000 ರೂಪಾಯಿ ಮಾತ್ರ ಪತ್ತೆಯಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಇಡಿ ಯಾವುದೇ ಪುರಾವೆಗಳು, ಆಸ್ತಿ ದಾಖಲೆಗಳು, ಅಕ್ರಮ ಹಣ ಅಥವಾ ಹಣದ ಜಾಡು ಪಡೆದಿಲ್ಲ ಎಂದು ಆರೋಪಿಸಿದ್ದಾರೆ.
ಮಧ್ಯರಾತ್ರಿಯ ವಿಚಾರಣೆಯ ಮೂಲಕ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ರದ್ದುಗೊಳಿಸುವಂತೆ ಪಕ್ಷವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ ಎಂದು ಎಎಪಿ ನಾಯಕಿ ಅತಿಶಿ ಹೇಳಿದ್ದಾರೆ. ಆದರೆ, ವರದಿಗಳ ಪ್ರಕಾರ, ಗುರುವಾರ ರಾತ್ರಿ ಯಾವುದೇ ವಿಶೇಷ ಪೀಠವನ್ನು ಸ್ಥಾಪಿಸಲಾಗಿಲ್ಲ. "ಅವರು (ಕೇಜ್ರಿವಾಲ್) ದೆಹಲಿಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಅಗತ್ಯವಿದ್ದರೆ, ಅವರು ಜೈಲಿನಿಂದ ಸರ್ಕಾರವನ್ನು ನಡೆಸುತ್ತಾರೆ. ಅವರು ಶಿಕ್ಷೆಗೊಳಗಾಗದ ಕಾರಣ ಜೈಲಿನಿಂದ ಸರ್ಕಾರವನ್ನು ನಡೆಸುವುದನ್ನು ತಡೆಯುವ ಯಾವುದೇ ನಿಯಮವಿಲ್ಲ" ಎಂದು ಅತಿಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಿಜೆಪಿ ಕಚೇರಿಗಳ ಹೊರಗೆ ಎಎಪಿ ಪ್ರತಿಭಟನೆ
ಅರವಿಂದ್ ಕೇಜ್ರಿವಾಲ್ ಅವರ ಬಂಧನ ಪ್ರಜಾಪ್ರಭುತ್ವದ ಕೊಲೆ ಎಂದು ಎಎಪಿ ನಾಯಕ ಗೋಪಾಲ್ ರೈ ಹೇಳಿದ್ದಾರೆ. ಎಎಪಿ ಕಾರ್ಯಕರ್ತರು ಬಿಜೆಪಿ ಕಚೇರಿಗಳ ಹೊರಗೆ ಪ್ರತಿಭಟನೆ ನಡೆಸುವಂತೆ ಸೂಚಿಸಿದ್ದಾರೆ. "ಈ ಸರ್ವಾಧಿಕಾರದ ವಿರುದ್ಧ ದೇಶಾದ್ಯಂತ ಬಿಜೆಪಿ ಕಚೇರಿಗಳ ಹೊರಗೆ ಪ್ರತಿಭಟಿಸುವಂತೆ ನಾನು ದೇಶವಾಸಿಗಳಿಗೆ ಮನವಿ ಮಾಡುತ್ತೇನೆ. ನಾವು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಎಪಿ ಕಚೇರಿಯಲ್ಲಿ ಸೇರುತ್ತೇವೆ ನಂತರ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ಮಾಡುತ್ತೇವೆ" ಎಂದು ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
ಇನ್ನು, ಇಂಡಿಯಾ ಇಕ್ಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಅರವಿಂದ್ ಕೇಜ್ರಿವಾಲ್ ಅವರ ಬೆಂಬಲಕ್ಕೆ ನಿಂತಿವೆ. ಬಿಜೆಪಿಯು ಮುಂಬರುವ ಚುನಾವಣೆಯ ಭಯದಲ್ಲಿದೆ ಮತ್ತು ಪ್ರತಿಪಕ್ಷಗಳಿಗೆ ಎಲ್ಲಾ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮತ್ತೊಂದು ಎಎಪಿ ಮಿತ್ರಪಕ್ಷ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಕೇಜ್ರಿವಾಲ್ ಅವರ ಬಂಧನವು ಬಿಜೆಪಿ ಅಧಿಕಾರಕ್ಕಾಗಿ ಎಷ್ಟು ಕೀಳುಮಟ್ಟಕ್ಕೆ ಇಳಿಯುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಅರವಿಂದ್ ಕೇಜ್ರಿವಾಲ್ ಅಥವಾ ಅವರ ಕುಟುಂಬವನ್ನು ಭೇಟಿಯಾಗಲಿದ್ದಾರೆ.












Click it and Unblock the Notifications