ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಬಾಲಕ :ರಕ್ಷಣೆಗಾಗಿ ಸಮುದ್ರಕ್ಕೆ ಹಾರಿದ ಲೈಫ್ ಗಾರ್ಡ್; ರೆಸ್ಕ್ಯೂ ವಿಡಿಯೋ ವೈರಲ್
ದೂರದಲ್ಲಿ ನಿಂತು ನೋಡುವಾಗ ಸಮುದ್ರ ಬಹಳ ಸುಂದರವಾಗಿ ಕಾಣುತ್ತದೆ. ಬೀಚ್ಗೆ ಹೋಗುವುದೆಂದರೆ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಿಗಂತೂ ಬೀಚ್ಗೆ ಹೋದರೆ ವಾಪಸ್ ಬರುವುದಕ್ಕೆ ಮನಸ್ಸೇ ಇರುವುದಿಲ್ಲ. ಸಮುದ್ರ ತೀರದ ಮರಳಿನಲ್ಲಿ, ನೀರಿನಲ್ಲಿ ಆಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆದರೆ ಈ ಖುಷಿ ದುಃಖಕ್ಕೆ ಬದಲಾಗುವುದಕ್ಕೆ ಹೆಚ್ಚು ಹೊತ್ತು ಹಿಡಿಯುವುದಿಲ್ಲ. ಸಮುದ್ರ ಎಷ್ಟು ಶಾಂತವಾಗಿರುತ್ತದೆಯೋ ಅಷ್ಟೇ ರೌದ್ರ ರೂಪವನ್ನು ಕೂಡಾ ತಾಳಿ ಬಿಡುತ್ತದೆ.
ಮಳೆಗಾಲದಲ್ಲಿಯಂತೂ ಅಲೆಗಳ ರಭಸ ಹೆಚ್ಚಿರುತ್ತದೆ. ಸಮುದ್ರ ತೀರಾ ಮುಂದಕ್ಕೆ ಬರುತ್ತದೆ. ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಸಮುದ್ರ ದೊಡ್ಡದಾಗುವುದು. ಈ ಸಮಯದಲ್ಲಿ ಮಕ್ಕಳ ಬಗ್ಗೆ ತೀರಾ ಎಚ್ಚರಿಕೆ ಇರಬೇಕು. ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲವಾದರೆ ಒಂದೇ ನಿಮಿಷದಲ್ಲಿ ಆಗಬಾರದ್ದು ಆದೀತು.

ರಕ್ಕಸ ಅಲೆಗಳ ಅಬ್ಬರ
ಸಮುದ್ರದ ದೊಡ್ಡ ಅಲೆಗಳು ಏಳುವಾಗ ಅದರ ಅಪಾಯವನ್ನು ಊಹಿಸುವುದು ಸಾಧ್ಯವಾಗುವುದಿಲ್ಲ. ಎದುರಿಗೆ ಸಿಕ್ಕವರನ್ನು ತನ್ನೊಂದಿಗೆ ಬಾಚಿಕೊಂಡು ಸಮುದ್ರದೊಳಗೆ ಎಳೆದು ಬಿಡುತ್ತದೆ. ಈ ರೀತಿಯಾಗಿ ತುಂಬಾ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಂಥದ್ದೇ ಘಟನೆ ನಡೆದಿದೆ. ಸಮುದ್ರದ ರಕ್ಕಸ ಅಲೆಗಳು ಬಾಲಕನನ್ನು ಎಳೆದುಕೊಂಡು ಹೋಗಿದೆ. ಆದರೆ, ಈ ಹೊತ್ತಿನಲ್ಲಿ 16 ವರ್ಷದ ಲೈಫ್ ಗಾರ್ಡ್ ತೋರಿದ ಧೈರ್ಯ ಹುಡುಗನ ಜೀವ ಉಳಿಸಿದೆ.
ಅಲೆಗಳ ರಭಸಕ್ಕೆ ಸಿಕ್ಕಿ ಹಾಕಿಕೊಂಡ 10 ವರ್ಷದ ಬಾಲಕ
ಕ್ಯಾಲಿಫೋರ್ನಿಯಾದ ಸಾಂತಾ ಕ್ರೂಜ್ನಲ್ಲಿರುವ ಸೀಬ್ರೈಟ್ ಬೀಚ್ನಲ್ಲಿ ಶನಿವಾರ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಅಲೆಗಳು ಎದ್ದಿವೆ. ಈ ಸಮಯದಲ್ಲಿ, ಬೀಚ್ನಲ್ಲಿ ಆಟ ಆಡುತ್ತಿದ್ದ ಮಗು ಅಲೆಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿದೆ. ಅಲೆಗಳು ಆ ಬಾಲಕನನ್ನು ಸಮುದ್ರದೊಳಗೆ ಎಳೆದಿದೆ. ಈ ಹುಡುಗನ್ನು ರಕ್ಷಿಸುವುದು ಅಷ್ಟು ಸುಲಭವಾಗಿರಲಿಲ್ಲ. ರಕ್ಷಿಸುವುದಕ್ಕೆ ಹೋದವರು ಕೂಡಾ ಪ್ರಾಣದ ಆಸೆ ಬಿಟ್ಟೇ ಹೋಗಬೇಕಿತ್ತು. ಯಾಕೆಂದರೆ ಪ್ರತೀ ಸೆಕೆಂಡಿಗೂ ಆ ಬಾಲಕನನ್ನು ಅಲೆಗಳು ದೂರ ದೂರವೇ ಎಳೆದುಕೊಂಡು ಹೋಗುತ್ತಿತ್ತು.
ಪ್ರಾಣದ ಹಂಗು ತೊರೆದು ರಕ್ಷಣೆಗಿಳಿದ ಲೈಫ್ ಗಾರ್ಡ್
ಮಗು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ 16 ವರ್ಷದ ಗಾರ್ಡ್ ಮುಂದೆ ಹಿಂದೆ ಯೋಚಿಸದೆ ಸಮುದ್ರಕ್ಕೆ ಹಾರಿದ್ದಾನೆ. ಸಮುದ್ರದ ಅಲೆಗಳನ್ನು ಮೀರಿ ಆ ಬಾಲಕನತ್ತ ಹೋಗಿದ್ದಾನೆ. ಹೇಗೋ ಮಾಡಿಕೊಂಡು ಆ ಬಾಲಕನ ಬಳಿ ತಲುಪುವಲ್ಲಿ ಗಾರ್ಡ್ ಯಶಸ್ವಿಯಾಗಿದ್ದಾನೆ. ನಂತರ ಹುಡುಗನನ್ನು ಗಟ್ಟಿಯಾಗಿ ಹಿಡಿದುಕೊಂಡು ದಡದ ಬಳಿ ಬರಲು ಪ್ರಯತ್ನಿಸಿದ್ದಾನೆ.
ಎಲ್ಲವೂ ಕ್ಯಾಮರಾದಲ್ಲಿ ಸೆರೆ
ಇನ್ನೇನು ಬಾಲಕ ಗಾರ್ಡ್ ಕೈಗೆ ಸಿಕ್ಕಿರುವುದನ್ನು ನೋಡಿದ ಉಳಿದ ಲೈಫ್ ಗಾರ್ಡ್ಗಳು ಕೂಡಾ ಸಹಾಯಕ್ಕೆ ಬಂದಿದ್ದಾರೆ. ಇಬ್ಬರನ್ನೂ ದಡಕ್ಕೆ ಸೇರಿಸುವಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ಅಲೆಗಳು ಬಹಳ ದೊಡ್ಡದಾಗಿದ್ದರೂ ಕೂಡಾ ಲೈಫ್ ಗಾರ್ಡ್ ಮಾತ್ರ ಆ ಹುಡುಗನನ್ನು ಬಿಟ್ಟಿರಲಿಲ್ಲ.ಅಲೆಗಳ ಜೊತೆಗ ಗುದ್ದಾಡಿ, ಎಳೆದಾಡಿ ಬಾಲಕನ್ನು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಅಲ್ಲಿದ್ದ ಸ್ಕಾಟ್ ವ್ಯಾಂಡರ್ ಡಸ್ಸೆನ್ ಇಡೀ ಘಟನೆಯನ್ನು ವೀಡಿಯೊದಲ್ಲಿ ರೆಕಾರ್ಡ್ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ಹಾಗೆಯೇ ಆ ಲೈಫ್ ಗಾರ್ಡ್ ಅನ್ನು ಎಲ್ಲರೂ ಹೊಗಳಿದ್ದಾರೆ. ಈತನೇ ನಿಜವಾದ ಹೀರೋ ಎಂದು ಕರೆದಿದ್ದಾರೆ. ಎರಿಕ್ ಟ್ರಂಪ್ ಕೂಡಾ ಈ ವೀಡಿಯೊವನ್ನು ಶೇರ್ ಮಾಡಿದ್ದು ಲೈಫ್ ಗಾರ್ಡ್ನನ್ನು ಹೊಗಳಿದ್ದಾರೆ. ಈ ಧೈರ್ಯಕ್ಕಾಗಿ ಅವರು ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಅರ್ಹರು ಎಂದು ಬರೆದಿದ್ದಾರೆ.
ಸಮುದ್ರದ ಶಕ್ತಿ ಮತ್ತು ಜಾಗರೂಕತೆಯ ಸಂದೇಶ
ಈ ಘಟನೆಯು ಮಗುವಿನ ಜೀವ ಉಳಿಸಿರುವುದಕ್ಕೆ ಮಾತ್ರ ಸೀಮಿತ ಅಲ್ಲ. ಕಡಲತೀರದ ಸುರಕ್ಷತೆಯ ಬಗ್ಗೆಯೂ ಇದು ಮೆಸೇಜ್ ನೀಡುತ್ತದೆ. ಹವಾಮಾನ ಮತ್ತು ಸಮುದ್ರದ ಅಲೆಗಳು ಯಾವಾಗಲೂ ಅನಿರೀಕ್ಷಿತ. ಯಾವ ಸಮಯದಲ್ಲಿ ಸಮುದ್ರ ರಾಜ ಮುನಿಸಿಕೊಳ್ಳುತ್ತಾನೆ ತಿಳಿಯುವುದೇ ಇಲ್ಲ. ಹಾಗಾಗಿ ಬೀಚ್ಗೆ ಹೋಗುವವರು ಕೂಡಾ ಕೆಲವು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಎಲ್ಲವನ್ನೂ ಲೈಫ್ ಗಾರ್ಡ್ಗಳ ಮೇಲೆ ಬಿಡುವುದಲ್ಲ.
Give this 16-year-old lifeguard the highest civilian honor. This is truly the best of America! Well done! pic.twitter.com/Pq99xNK6WI
— Eric Trump (@EricTrump) July 27, 2026
ಇಲ್ಲಿ ಇನ್ನೊಂದು ಮುಖ್ಯ ವಿಚಾರ. ಯಾರನ್ನೋ ಸಮುದ್ರ ನುಂಗುತ್ತಿದೆ ಅಂದಾಗ ಸುಮ್ಮನೆ ನೀರಿನೊಳಗೆ ಧುಮುಕುವುದಲ್ಲ. ಇದರಿಂದ ಯಾವ ಪ್ರಯೋಜನವೂ ಇಲ್ಲ. ಹೀಗೆ ನೀರಿನೊಳಗೆ ಧುಮುಕಿ ಕಾಪಾಡುವುದಕ್ಕೆ ಸಾಕಷ್ಟು ತರಬೇತಿ ಬೇಕಾಗುತ್ತದೆ. ಇಲ್ಲವಾದರೆ ಒಂದು ಜೀವನದ ಬದಲು ಎರಡೆರಡು ಜೀವನಗಳನ್ನು ಕಳೆದುಕೊಳ್ಳಬೇಕಾಗಬಹುದು.


Click it and Unblock the Notifications
