ಸಲಿಂಗ ವಿವಾಹ: ಕಾನೂನು ಮಾನ್ಯತೆ ಕೋರಿದ್ದ ಎಲ್ಲಾ ಮನವಿಗಳನ್ನು ತನಗೆ ವರ್ಗಾಯಿಸಿಕೊಂಡ ಸುಪ್ರೀಂ
ನವದೆಹಲಿ, ಜ. 06: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆಗೆ ಸಂಬಂಧಿಸಿದಂತೆ ದೇಶಾದ್ಯಂತ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಜನವರಿ 6) ಒಟ್ಟುಗೂಡಿಸಿ ತನಗೆ ವರ್ಗಾಯಿಸಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆಬಿ ಪಾರ್ದಿವಾಲಾ ಅವರ ಪೀಠವು ಫೆಬ್ರವರಿ 15 ರೊಳಗೆ ಎಲ್ಲಾ ಅರ್ಜಿಗಳಿಗೆ ಜಂಟಿ ಉತ್ತರವನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.
ಲಿಂಗ ವಿವಾಹದ ಅರ್ಜಿಗಳಿಗೆ ತನ್ನ ಉತ್ತರವನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿ ಮಾರ್ಚ್‌ನಲ್ಲಿ ಎಲ್ಲಾ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಯಾವುದೇ ಅರ್ಜಿದಾರರನ್ನು ಕೈಬಿಡದಂತೆ ಮತ್ತು ಎಲ್ಲಾ ಅರ್ಜಿಗಳ ವಿವರಗಳನ್ನು ಸರಿಯಾಘಿ ನೀಡುವಂತೆ ಕೇಂದ್ರ ಸರ್ಕಾರದ ವಕೀಲರನ್ನು ಕೋರಿದೆ.
ಕಳೆದ ವರ್ಷದ ನವೆಂಬರ್ 25 ರಂದು, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಸಲಿಂಗ ವಿವಾಹವನ್ನು ನೊಂದಾಯಿಸಲು ಅನುಮತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿತ್ತು.
ಇನ್ನು, ಸಲಿಂಗ ವಿವಾಹವನ್ನು ಅಂಗೀಕರಿಸುವ ಅರ್ಜಿಗಳ ಮೇಲೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಕಳೆದ ವರ್ಷ ಡಿಸೆಂಬರ್ 6 ರಂದು ಮುಂದೂಡಲಾಗಿತ್ತು, ಈ ವರ್ಷ ಏಪ್ರಿಲ್ 24 ರಂದು ವಿಚಾರಣೆ ನಡೆಯಲಿದೆ.
ಸರ್ವೋಚ್ಚ ನ್ಯಾಯಾಲಯವು 2018 ರಲ್ಲಿ ಸಲಿಂಗಕಾಮವನ್ನು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿಯಲ್ಲಿ ಸಲಿಂಗ ವಯಸ್ಕರ ನಡುವೆ ಖಾಸಗಿ ಸಮ್ಮತಿಯ ಲೈಂಗಿಕ ನಡವಳಿಕೆಯನ್ನು ಅಪರಾಧೀಕರಣಗೊಳಿಸುವುದು ಸ್ಪಷ್ಟವಾಗಿ ಅಸಂವಿಧಾನಿಕ ಎಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಸರ್ವಾನುಮತದಿಂದ ಅಭಿಪ್ರಾಯಪಟ್ಟಿದೆ.












Click it and Unblock the Notifications