Laptop Import: ಲ್ಯಾಪ್‌ಟಾಪ್ ಆಮದು ಬ್ಯಾನ್ ನಿರ್ಧಾರ ಮುಂದಕ್ಕೆ!
ನವದೆಹಲಿ: ಆಗೊಂದು ಕಾಲ ಇತ್ತು, ಕೈಯಲ್ಲಿ ಲ್ಯಾಪ್‌ಟಾಪ್ ಇದ್ದರೆ ಆ ವ್ಯಕ್ತಿಗೆ ಇರುವ ಬೆಲೆಯೇ ಬೇರೆ ಅನ್ನುವಂತೆ ಜನ ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹೀಗೆ ಬದಲಾದ ಕಾಲಘಟ್ಟದಲ್ಲಿ ಲ್ಯಾಪ್‌ಟಾಪ್ ಸಾಮಾನ್ಯ ವಸ್ತುವಾಗಿದೆ. ಪರಿಸ್ಥಿತಿ ಹೀಗಿದ್ದಾಗ ಕೇಂದ್ರ ಸರ್ಕಾರ ದಿಢೀರ್ ಶಾಕಿಂಗ್ ನಿರ್ಧಾರ ಪ್ರಕಟಿಸಿ, ಲ್ಯಾಪ್‌ಟಾಪ್ ಆಮದು ಬ್ಯಾನ್ ಮಾಡಿತ್ತು. ಆದರೆ ಈಗ ತನ್ನ ನಿರ್ಧಾರವನ್ನೇ ಮುಂದೂಡಿ ಆಶ್ಚರ್ಯ ಮೂಡಿಸಿದೆ.
ಹೌದು, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ ಸೇರಿ ಪರ್ಸನಲ್ ಕಂಪ್ಯೂಟರ್‌ಗಳ ಆಮದು ಮೇಲಿನ ನಿರ್ಬಂಧ ಜಾರಿಗೊಳಿಸುವುದನ್ನ ಅಕ್ಟೋಬರ್ 31ರ ತನಕ ಮುಂದೂಡಿ ಕೇಂದ್ರ ಸರ್ಕಾರ ಈಗ ಹೊಸ ಆದೇಶ ಹೊರಡಿಸಿದೆ. ಈ ನಿರ್ಧಾರ ಲ್ಯಾಪ್‌ಟಾಪ್ ಖರೀದಿ ಮಾಡುವವರೆಗೆ ಸ್ವಲ್ಪ ನೆಮ್ಮದಿ ನೀಡಿದ್ದು, ಕಂಪನಿಗಳು ಪರವಾನಗಿ ಇಲ್ಲದೇ ಆಮದು ಮಾಡಿಕೊಳ್ಳಲು ಈಗ ಹೆಚ್ಚಿನ ಸಮಯ ಸಿಕ್ಕಂತಾಗಿದೆ. ಆದರೆ ನವೆಂಬರ್ 1ರಿಂದ ಸಾಧನಗಳನ್ನು ಆಮದು ಮಾಡಿಕೊಳ್ಳಲು ಕಂಪನಿಗಳು ಸರ್ಕಾರದಿಂದ ಪರವಾನಗಿ ಪಡೆದುಯಬೇಕಾಗಿ ಬರುತ್ತದೆ.

ಭಾರತದ ಲ್ಯಾಪ್‌ಟಾಪ್ ಮಾರುಕಟ್ಟೆ ಎಷ್ಟು?
ಅಂದಹಾಗೆ ನಮ್ಮ ದೇಶದಲ್ಲಿ ಲ್ಯಾಪ್‌ಟಾಪ್ ಮಾರುಕಟ್ಟೆ ಮೌಲ್ಯ ವಿಶಾಲವಾಗಿ ಬೆಳೆದಿದೆ. ಭಾರತದ ಲ್ಯಾಪ್‌ಟಾಪ್ ಮತ್ತು ಪರ್ಸನಲ್ ಕಂಪ್ಯೂಟರ್ ಮಾರುಕಟ್ಟೆ ವಾರ್ಷಿಕ ವಹಿವಾಟು ನೋಡುವುದಾದರೆ ಅಂದಾಜು ₹66 ಸಾವಿರ ಕೋಟಿ ರೂಪಾಯಿ. ಈ ಪೈಕಿ ಆಮದಿನ ಪಾಲು ಶೇಕಡ 65ರಷ್ಟು ಎಂದರೆ ನೀವೆ ಲೆಕ್ಕ ಹಾಕಿ. ಹೀಗಾಗಿಯೇ ಕೇಂದ್ರ ಸರ್ಕಾರ ಭಾರತದಲ್ಲೇ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಉತ್ಪಾದನೆಗೆ ಉತ್ತೇಜನ ನೀಡಲು ಆಮದು ನಿಷೇಧದ ನಿರ್ಧಾರ ಕೈಗೊಂಡಿದೆ ಎನ್ನಲಾಗಿತ್ತು. ಆದರೆ ಇದೀಗ ದಿಢೀರ್ ತನ್ನ ಆದೇಶ ಮುಂದೂಡಿ ಮಾಹಿತಿ ನೀಡಿದೆ.
ದಿಢೀರ್ ನಿರ್ಧಾರ ಬದಲಾಗಿದ್ದು ಏಕೆ?
ಅಷ್ಟಕ್ಕೂ ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯ ಅಂದ್ರೆ ಡಿಜಿಎಫ್‌ಟಿ ಹೊರಡಿಸಿದ ಹೊಸ ಆದೇಶದ ಪ್ರಕಾರ, ನಿರ್ಬಂಧ ನವೆಂಬರ್ 1ರಿಂದ ಜಾರಿಗೆ ಬರಲಿದೆ. ಲೈಸೆನ್ಸ್ ಇಲ್ಲದೇ ಅಕ್ಟೋಬರ್ 31ರವರೆಗೆ ಆಮದು ಮಾಡಿಕೊಳ್ಳಬಹುದು. ನವೆಂಬರ್ 1 ರಿಂದ ಲೈಸೆನ್ಸ್ ಅಗತ್ಯ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಕೇಂದ್ರ ಸರ್ಕಾರ ಆಗಸ್ಟ್ 3ರಂದು ಲ್ಯಾಪ್‌ಟಾಪ್ ಹಾಗೂ ಟ್ಯಾಬ್ ಸೇರಿ ಪರ್ಸನಲ್ ಕಂಪ್ಯೂಟರ್‌ಗಳ ಸಾಧನಗಳ ಆಮದು ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧ ಹೇರಿತ್ತು. ಆದರೆ ಈಗ ತನ್ನ ಆಮದು ನಿಷೇಧ ನಿರ್ಧಾರ ಮುಂದಕ್ಕೆ ಹಾಕಿದೆ. ಈ ನಿರ್ಧಾರ ಆಶ್ಚರ್ಯ ಹುಟ್ಟುಹಾಕಿದ್ದು, ಒಂದಷ್ಟು ಸಮಯ ಸಿಕ್ಕಂತಾಗಿದೆ.
ವಿದೇಶ ಹೂಡಿಕೆ ಹೆಚ್ಚಾಗುವ ನಿರೀಕ್ಷೆ
ಎಚ್‌ಎಸ್‌ಎನ್ 8471 ಅಡಿ ಬರುವ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಪರ್ಸನಲ್ ಕಂಪ್ಯೂಟರ್, ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಕಂಪ್ಯೂಟರ್ ಮತ್ತು ಸರ್ವರ್ಸ್ ಆಮದಿಗೆ ಅಕ್ಟೋಬರ್ 31, 2023ರ ತನಕ ಮುಕ್ತ ಅವಕಾಶ ನೀಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಆಮದು ನಿಷೇಧದ ನಿರ್ಧಾರದಿಂದ ಸ್ಥಳೀಯ ತಯಾರಕರು ಹಾಗೂ ದೇಶದಲ್ಲಿಯೇ ಕಂಪ್ಯೂಟರ್ & ಲ್ಯಾಪ್‌ಟಾಪ್ ಉತ್ಪಾದಿಸುತ್ತಿರುವ ವಿದೇಶಿ ಕಂಪನಿಗಳಿಗೆ ಪ್ರಯೋಜವಾಗಲಿದೆ. ವಿದೇಶ ಹೂಡಿಕೆ ಕೂಡ ಈ ಕ್ಷೇತ್ರದಲ್ಲಿ ಹೆಚ್ಚಾಗುವ ನಿರೀಕ್ಷೆ ಕೂಡ ಮೂಡಿದೆ.

ಒಟ್ನಲ್ಲಿ ಭಾರತದಲ್ಲಿ ತಂತ್ರಜ್ಞಾನ ಬೆಳೆದಂತೆ ಲ್ಯಾಪ್‌ಟಾಪ್ & ಟ್ಯಾಬ್ ಸೇರಿ ಪರ್ಸನಲ್ ಕಂಪ್ಯೂಟರ್‌ಗಳ ಸಾಧನಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಭಾರತದಲ್ಲೇ ಈ ವಸ್ತುಗಳ ಉತ್ಪಾದನೆಗೆ ಉತ್ತೇಜನ ನೀಡಲು ಮುಂದಾಗಿದೆ. ಆದರೆ ಹೊಸ ನಿರ್ಧಾರದ ಮೂಲಕ ಬೆಲೆ ಹೆಚ್ಚಳ ಆಗಬಾರದು ಎಂಬುದೇ ಗ್ರಾಹಕರ ಬೇಡಿಕೆ. ಇದರ ಜೊತೆಯಲ್ಲೇ ಭಾರತದಲ್ಲಿ ಉತ್ಪಾದನೆ ಹೆಚ್ಚಳವಾದರೆ ಗ್ರಾಹಕರ ಬೇಡಿಕೆ ಪೂರೈಕೆಗೆ ಸಹಾಯವಾಗಲಿದೆ. ಆರಂಭದಲ್ಲಿ ಒಂದಷ್ಟು ಗೊಂದಲಗಳು ಉಂಟಾದರೂ ಮುಂದೆ ಪರಿಸ್ಥಿತಿ ಸರಿಹೋಗುವ ನಿರೀಕ್ಷೆ ಇದೆ.












Click it and Unblock the Notifications