ಮೇವು ಹಗರಣದ ಅಪರಾಧಿ ಲಾಲೂಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ
ರಾಂಚಿ, ಸೆಪ್ಟೆಂಬರ್ 1: ಮೇವು ಹಗರಣದ ಆರೋಪಿ, ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಅವರ ಮೂತ್ರಕೋಶಗಳು(ಕಿಡ್ನಿ) ಕೆಲಸ ಮಾಡುತ್ತಿಲ್ಲ, ಶುಗರ್ ಹಾಗೂ ರಕ್ತದ ಒತ್ತಡ ಏರುಪೇರಾಗುತ್ತಿದೆ ಎಂದು ಹಿರಿಯ ವೈದ್ಯರು ಶನಿವಾರ ಅವರ ಆರೋಗ್ಯ ಪರೀಕ್ಷಿಸಿದ ಬಳಿಕ ಮಾಹಿತಿ ನೀಡಿದ್ದಾರೆ.
ಲಾಲೂಪ್ರಸಾದ್ ಯಾದವ್(71) ಮೇವು ಹಗರಣದಲ್ಲಿ ಆರೋಪಿಯಾಗಿ 2017ರಿಂದ ಜೈಲಿನಲ್ಲಿದ್ದಾರೆ. ಅವರು ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅವರ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಜೊತೆಗೆ ಶುಗರ್ ಕೂಡ ಹೆಚ್ಚಾಗಿದೆ, ರಕ್ತದ ಒತ್ತಡ ಕೂಡ ಏರು ಪೇರಾಗುತ್ತಿದೆ ಹೀಗಾಗಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಡಾ. ಉಮೇಶ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಅವರ ತೂಕವೂ ಕಡಿಮೆಯಾಗಿದೆ. ಈಗ ಅವರಿಗೆ ಔಷಧವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
1990ರ ಆರಂಭದಲ್ಲಿ ಚೈಬಾಸ ಖಜಾನೆಯಿಂದ ಹಣ ಲೂಟಿ ಮಾಡಿದ ಆರೋಪಕ್ಕೆ ಸಂಬಂಧಪಟ್ಟ ಕೇಸು ಇದಾಗಿದೆ. ಮಂಜೂರಾಗಿದ್ದ 7.1 ಲಕ್ಷಕ್ಕೆ ಬದಲಾಗಿ 33.7 ಕೋಟಿ ರೂಪಾಯಿಗಳನ್ನು ಖಜಾನೆಯಿಂದ ಲಾಲೂ ಅವರು ತೆಗೆದುಕೊಂಡ ಆರೋಪ ಎದುರಿಸುತ್ತಿದ್ದರು.












Click it and Unblock the Notifications