Kinetic E-Luna: ಕಡಿಮೆ ಬೆಲೆಯ ಸ್ವದೇಶಿ ನಿರ್ಮಿತ 'ಕೈನೆಟಿಕ್ ಇ-ಲೂನಾ' ಬಿಡುಗಡೆ, ಬೆಲೆ-ವೈಶಿಷ್ಟ್ಯಗಳೇನು?
ಬೆಂಗಳೂರು, ಫೆಬ್ರವರಿ 08: ಕೈನೆಟಿಕ್ ಇ-ಲೂನಾ (Kinetic E-Luna) ಒಂದು ಕಾಲದಲ್ಲಿ ಆಳಿದ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ. ಹಳ್ಳಿ, ಪಟ್ಟಣ, ನಗರಗಳಲ್ಲಿಯೂ ಬಳಕೆಯಾಗಿದ್ದ ಈ ಗಾಡಿಯು ಇದೀಗ ಪರಿಸರ ಸ್ನೇಹಿಯಾಗಿ ಎಲೆಕ್ಟ್ರಿಕ್ ರೂಪದಲ್ಲಿ ಆಕರ್ಷಕ ಬೆಲೆ, ಮೈಲೇಜ್, ವಿನ್ಯಾಸ ಸಹಿತವಾಗಿ ಮತ್ತೆ ರಸ್ತೆಗೆ ಇಳಿದಿದೆ.
ಹೌದು, ಕೈನೆಟಿಕ್ ಗ್ರೀನ್ ಎಲೆಕ್ಟ್ರಿಕ್ ಲೂನಾ ಅವತಾರದಲ್ಲಿ ಬಿಡುಗಡೆಗೊಂಡಿದೆ. ಅತ್ಯಧಿಕ ಸಾಮಾರ್ಥ್ಯದ ಈ ಲೂನಾವನ್ನು ಗ್ರಾಮೀಣ ಮತ್ತು ನಗರವಾಸಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿಯೇ ವಿನ್ಯಾಸಗೊಳಿಸಲಾಗಿದೆ. ಈ ಸ್ವದೇಶಿ ದ್ವಿಚಕ್ರವಾಹನದ ಬುಕ್ಕಿಂಗ್ ಅನ್ನು ಕಳೆದ ಜನವರಿ 26 ರಂದು ಆರಂಭಿಸಲಾಗಿತ್ತು.

ನೋಡ ನೋಡುತ್ತಿದ್ದಂತೆ ಕೈನೆಟಿಕ್ ಲೂನಾಗಾಗಿ ಸುಮಾರು 40,000 ಗ್ರಾಹಕರು ಸಂಪರ್ಕಿಸಿದ್ದಾರೆ. ನೋಂದಣಿ ಸಹ ಮಾಡಿಕೊಂಡಿದ್ದಾರೆ. ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಸಾಲಿಗೆ ಈ ಗ್ರೀನ್ ಲೂನಾ ಸೇರ್ಪಡೆಯಾಗಿದೆ. ಇದರ ಬೆಲೆ, ಕೆಪಾಸಿಟಿ ಇನ್ನಿತರ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.
ಇ-ಲೂನಾ ಆರಂಭಿಕ ಬೆಲೆ?
Kinetic E-Luna ದ ಎಕ್ಸ್ ಶೋ ರೂಂ ಬೆಲೆ 69,990 ನಿಗದಿ ಮಾಡಲಾಗಿದೆ. ಈ ಇ-ಲೂನಾ ವಾಹನವು ಪ್ರಸಕ್ತ ಆರ್ಥಿಕ ವರ್ಷ (FY25)ದಲ್ಲಿ 1,00,000 ಘಟಕಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಇದರ ನಿರ್ವಹಣೆ ವೆಚ್ಚವು ಕಡಿಮೆ ಇರಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ದೇಶದಲ್ಲಿ ಈ E-Luna 150 ಕೆಜಿಯಷ್ಟು ಪೇಲೋಡ್ ಸಾಮರ್ಥ್ಯ ಹೊಂದಿದೆ ಎಂದು ಕೈನೆಟಿಕ್ ಗ್ರೀನ್ ತಿಳಿಸಿದೆ. ಇದು IP67-ರೇಟೆಡ್ 2kWh ಲಿಥಿಯಂ-ಐಯಾನ್ ಬ್ಯಾಟರಿ ಸಹಿತ 2.2kW BLDC ಮಿಡ್-ಮೌಂಟ್ ಮೋಟಾರ್ ಅನ್ನು ಹೊಂದಿದೆ.
ಬ್ಯಾಟರಿ ತಂತ್ರಜ್ಞಾನದ ಮಾಹಿತಿ
ಮುಖ್ಯವಾಗಿ ಈ ಲೋನಾ ಬಳಕೆದಾರರಿಗೆ ಅನುಕೂಲವಾಗಲೆಂದು ವೇಗವಾಗಿ ಚಾರ್ಜ್ ಆಗುವಂತೆ ಬ್ಯಾಟರಿ ತಂತ್ರಜ್ಞಾನ ಒದಗಿಸುವ ಜತೆಗೆ ಬ್ಯಾಟರಿ ಬದಲಾಯಿಸುವ ಆಯ್ಕೆ ನೀಡಲಾಗಿದೆ. ಅಂದರೆ ನೀವು ವಾಹನದ ಬ್ಯಾಟರಿ ಪ್ರತ್ಯೇಕಿಸಿಟ್ಟು ಚಾರ್ಜ್ ಮಾಡಬಹುದಾಗಿದೆ.

ಒಂದು ಬಾರಿ ಈ ಲೂನಾ ಗಾಡಿ ಪೂರ್ತಿಯಾಗಿ ಚಾರ್ಜ್ ಆದರೆ ಒಟ್ಟು 110km ಮೈಲೇಜ್ ನೀಡುವ ಶಕ್ತಿ ಹೊಂದಿದೆ. ಪ್ರತಿ ಗಂಟೆಗೆ 50km ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಒಟ್ಟು ನಾಲ್ಕು ಗಂಟೆ ಸಮಯ ಹಿಡಿಯುತ್ತದೆ. ಭವಿಷ್ಯದಲ್ಲಿ E-Luna ಶಕ್ತಿ, ಸಾಮರ್ಥ್ಯದ ಹಲವು ಆಯ್ಕೆಗಳು ಅಪ್‌ಗ್ರೇಡ್ ಆಗಲಿವೆ ಎಂದು ಕಂಪನಿಯು ಬಿಡುಗಡೆ ವೇಳೆ ತಿಳಿಸಿದೆ.
ಇ-ಲೂನಾ ವೈಶಿಷ್ಟ್ಯಗಳ ಸಂಪೂರ್ಣ ಮಾಹಿತಿ
ಇ-ಲೂನಾವು ಮುಂದೆ ಟೆಲಿಸ್ಕೋಪಿಕ್ ಫೋರ್ಕ್‌ಗಳಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನವು 16 ಇಂಚಿನ ಚಕ್ರಗಳನ್ನು ಹೊಂದಿದೆ. ಇದಕ್ಕೆ ಕಾಂಬಿ ಬ್ರೇಕಿಂಗ್ (CBS) ವ್ಯವಸ್ಥೆ ಇದೆ. ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಮೂರು ರೈಡಿಂಗ್ ಮೋಡ್‌ಗಳು, ಡಿಟ್ಯಾಚೇಬಲ್ ರಿಯರ್‌ಸೀಟ್ ಮತ್ತು ಸೈಡ್ ಸ್ಟ್ಯಾಂಡ್ ಸೆನ್ಸಾರ್‌ಗಳು ಈ ವಾಹನದ ಹೈಲೇಟ್ ಆಗಿದೆ. ಕಡಿಮೆ ಬೆಲೆಗೆ ಇಷ್ಟೆಲ್ಲ ವೈಶಿಷ್ಟ್ಯಗಳು ಸವಾರರಿಗೆ ಉತ್ತಮ ಅನುಭವ ನೀಡುತ್ತವೆ. ಭಾರತೀಯರಿಗೆ ಇ ಲೂನಾ ಅತ್ಯುತ್ತಮ ಆಯ್ಕೆ ಆಗಿದೆ.
ಶೇಕಡಾ 100 ರಷ್ಟು ಮೇಡ್-ಇನ್-ಇಂಡಿಯಾ ಆಗಿದ್ದು, ಇಡೀ ಕೈನೆಟಿಕ್ ಗ್ರೂಪ್ ಇ-ಲೂನಾವನ್ನು ಮಾರುಕಟ್ಟೆಗೆ ಬಿಡಲು ನಮಗೆ ಹೆಮ್ಮ ಇದೆ ಎಂದು ಕೈನೆಟಿಕ್ ಗ್ರೂಪ್ ಅಧ್ಯಕ್ಷರಾದ ಅರುಣ್ ಫಿರೋಡಿಯಾ ಅವರು ತಿಳಿಸಿದ್ದಾರೆ.
ನಮ್ಮ ಇ-ಲೂನಾ ಮಲ್ಬೆರಿ ರೆಡ್, ಪರ್ಲ್ ಹಳದಿ, ನೈಟ್ ಸ್ಟಾರ್ ಬ್ಲ್ಯಾಕ್, ಓಷನ್ ಬ್ಲೂ ಮತ್ತು ಸ್ಪಾರ್ಕ್ಲಿಂಗ್ ಗ್ರೀನ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಆದಷ್ಟು ಶೀಘ್ರದಲ್ಲೇ ದೇಶಾದ್ಯಂತ ಮಾರಾಟ ಪ್ರಾರಂಭವಾಗಲಿದೆ. ಮುಖ್ಯವಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿಯೂ ಲಭ್ಯವಿರುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.
ಗ್ರಾಹರಿಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರ ಮಾರಾಟ ಕೇಂದ್ರ, ಇಲ್ಲವೇ ಆನ್‌ಲೈನ್ ಮೂಲಕವು ಸಂಪರ್ಕಿ ಮಾಹಿತಿ ಪಡೆಯಬಹುದು. ಈ ಲೂನಾ ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳ ಸ್ಥಾನ ತುಂಬುವ ನಿರೀಕ್ಷೆ ಇದೆ.












Click it and Unblock the Notifications