ವಿಶ್ವದ ಶ್ರೀಮಂತ ಪದ್ಮನಾಭಸ್ವಾಮಿ ದೇಗುಲದಲ್ಲಿ ಖತರ್ನಾಕ್ ಕಳ್ಳತನ: ಕರ್ನಾಟಕದಿಂದ ಎಸ್ಕೇಪ್!
Theft at Sree Padmanabhaswamy Temple: ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿರುವ ಕೇರಳದ ತಿರುವನಂತಪುರಂನ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭಾರೀ ದೊಡ್ಡ ಕಳ್ಳತನವಾಗಿದೆ. ಈ ದೇವಸ್ಥಾನವು ವಿಶ್ವದ ಆಗರ್ಭ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ. ಅಲ್ಲದೇ ಕೇಂದ್ರೀಯ ಭದ್ರತಾ ಪಡೆಗಳು ಈ ದೇವಸ್ಥಾನಕ್ಕೆ ಭಾರೀ ಭದ್ರತೆಯನ್ನು ಕಲ್ಪಿಸಿವೆ. ಇಷ್ಟು ಭದ್ರತೆಯ ನಡುವೆಯೂ ಕಳ್ಳತನವಾಗಿದೆ. ಅಲ್ಲದೇ ಕಳ್ಳರು ಪರಾರಿಯಾದ ವಿಷಯದಲ್ಲಿ ಕರ್ನಾಟಕದ ಮಂಗಳೂರು ಹೆಸರೂ ಕೇಳಿ ಬಂದಿದೆ.
ಕೇರಳದ ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿದೆ. ಇಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳು, ಮುತ್ತುರತ್ನಗಳು ಸಹ ಇವೆ. ಇತ್ತೀಚಿನ ವರ್ಷಗಳಲ್ಲಿ ದೇವಸ್ಥಾನದ ತಳಮಹಡಿಯಲ್ಲಿರುವ ಕೋಣೆಗಳ ಬಾಗಿಲು ತೆಗೆದಾಗ ಅಪಾರ ಪ್ರಮಾಣದ ಚಿನ್ನಾಭರಣ ಇಲ್ಲಿ ಇರುವುದು ಪತ್ತೆಯಾಗಿತ್ತು. ಇದೀಗ ಈ ದೇವಸ್ಥಾನದಲ್ಲೇ ಖತರ್ನಾಕ್ ಕಳ್ಳರು ಕರಾಮತ್ತು ಪ್ರದರ್ಶಿಸಿದ್ದು, ಕೇರಳ ಬೆಚ್ಚಿ ಬಿದ್ದಿದೆ. ಅಲ್ಲದೇ ಈ ಕಳ್ಳರು ಪರಾರಿಯಾಗಿರುವುದು ನಮ್ಮ ಕರ್ನಾಟಕದ ಮೂಲಕವೇ !

ಏನಿದು ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಘಟನೆ: ಕೇರಳದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಯಾರು ಅಂದಾಜು ಸಹ ಮಾಡಲಾಗದ ಘಟನೆ ನಡೆದಿದೆ. ಈ ದೇವಸ್ಥಾನದಲ್ಲಿ ಭಾರೀ ಭದ್ರತೆ ಇದೆ. ಆದರೂ ಹರಿಯಾಣ ಮೂಲದ ನಾಲ್ವರು ಕಳ್ಳತನ ಮಾಡಿದ್ದಾರೆ. ಹರಿಯಾಣದಿಂದ ಕೇರಳದ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಬರುವಂತೆ ಬಂದಿರುವ ಈ ಕಳ್ಳರು ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾರೆ. ಈ ರೀತಿ ಹರಿಯಾಣದಿಂದ ಬಂದ ನಾಲ್ವರಲ್ಲಿ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಸೇರಿದ್ದಾನೆ ಎನ್ನಲಾಗಿದೆ.
ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದ್ದ ಹಾಗೂ ಪುರಾತನ ಕಾಲದ ನೈವೇದ್ಯ ಪಾತ್ರೆಯನ್ನೇ ಕಳ್ಳರು ಎಗರಿಸಿದ್ದಾರೆ. ಅನಂತ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ರಾಜರ ಕಾಲದಿಂದಲೂ ಬಳಸಲಾಗುತ್ತಿದ್ದ ವಸ್ತುವಿದು. ಇದು ಕೋಟ್ಯಾಂತರ ರೂಪಾಯಿ ಮೌಲ್ಯಕ್ಕೆ ಸಮನಾಗಿದ ವಸ್ತುವಾಗಿದೆ. ಶತಮಾನಗಳ ಕಾಲದಿಂದಲೂ ದೇವಸ್ಥಾನದಲ್ಲಿ ಬಳಸುತ್ತಿರುವ ವಸ್ತುಗಳು ಇವೆ. ಅವುಗಳಲ್ಲಿ ಪದ್ಮನಾಭ ಸ್ವಾಮಿಗೆ ನೈವೇದ್ಯ ಮಾಡುವ ನೈವೇದ್ಯ ಪಾತ್ರೆಯೂ ಒಂದು. ಇಷ್ಟೊಂದು ಮಹತ್ವವಿರುವ ಪಾತ್ರೆಯನ್ನು ಹೇಗೆ ಕಳ್ಳತನ ಮಾಡಲಾಯಿತು ಎನ್ನುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಭಾರೀ ಭದ್ರತೆ: ಭಾರೀ ಭದ್ರತೆ ಇರುವ ದೇವಸ್ಥಾನಗಳಲ್ಲಿ ಇದೂ ಒಂದಾಗಿದೆ. ಅತಿ ಭದ್ರತಾ ವಲಯ ಎಂದು ಘೋಷಿಸಲಾಗಿದೆ. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಕೇರಳದ ಒಬ್ಬ ಎಸ್ಪಿ, ಡಿವೈಎಸ್ಪಿ, ನಾಲ್ವರು ಸಿಐಗಳು ಸೇರಿದಂತೆ 200ಕ್ಕೂ ಪೊಲೀಸ್ ಸಿಬ್ಬಂದಿ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಅಲ್ಲದೇ ಕೇಂದ್ರ ಭದ್ರತಾ ಪಡೆಗಳು ಸಹ ಇಲ್ಲಿ ಹದ್ದಿನ ಕಣ್ಣಿಟ್ಟಿವೆ. ಮೆಟಲ್ ಡಿಟೆಕ್ಟರ್ ಸೇರಿದಂತೆ ಹಲವು ಭಾರೀ ಭದ್ರತೆಗಳನ್ನು ಕಲ್ಪಿಸಲಾಗಿದೆ. ಈ ಎಲ್ಲಾ ಭದ್ರತೆಗಳನ್ನು ಮೀರಿ ಕಳ್ಳರು ತಮ್ಮ ಖತರ್ನಾಕ್ ಕಳ್ಳತನವನ್ನು ಪ್ರದರ್ಶಿಸಿದ್ದಾರೆ.
ಮೂವರು ಕಳ್ಳರು ದೇವಸ್ಥಾನದಿಂದ ನೈವೇದ್ಯ ಪಾತ್ರೆಯನ್ನು ತೆಗೆದುಕೊಂಡು ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು ಪರಿಶೀಲಿಸುವಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ ಏನು: ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಇದೇ ತಿಂಗಳು 13ರಂದು ಕಳ್ಳತನ ನಡೆದಿದೆ. ಎರಡು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಅಂದರೆ ಅಕ್ಟೋಬರ್ 15ರಂದು ದೇವಸ್ಥಾನದ ಅಧಿಕಾರಿಗಳು ಕಳ್ಳತನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳರ ಗುರುತು ಸಿಕ್ಕಿದೆ. ಈ ಕಳ್ಳರು ತಂಗಿದ್ದ ಹೋಟೆಲ್‌ನಲ್ಲಿ ಪಾಸ್ ಪೋರ್ಟ್ ಮಾಹಿತಿ ಸಂಗ್ರಹಿಸಲಾಗಿದೆ. ಈ ಮಾಹಿತಿಯ ಆಧಾರ ಮೇಲೆ ಕಳ್ಳರ ಪತ್ತೆ ಸಾಧ್ಯವಾಗಿದೆ.
ಕರ್ನಾಟಕದ ಲಿಂಕ್: ಇನ್ನು ಈ ನಾಲ್ವರು ಕಳ್ಳರು ಕರ್ನಾಟಕದ ಉಡುಪಿ ಜಿಲ್ಲೆಗೆ ಬಂದು ಹೋಗಿದ್ದಾರೆ. ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಂತರ ಈ ಕಳ್ಳರು ಮಂಗಳೂರು ವಿಮಾನ ನಿಲ್ದಾಣದಿಂದಲೇ ವಿಮಾನದ ಮೂಲಕ ಪರಾರಿಯಾಗಿದ್ದಾರೆ ಎನ್ನುವ ವಿಷಯ ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಭಾರೀ ಭದ್ರತಾ ಲೋಪ: ಕೇಂದ್ರ ಹಾಗೂ ಕೇರಳ ಸರ್ಕಾರವು ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭಾರೀ ಭದ್ರತೆ ಕಲ್ಪಿಸಿದೆ. ಆದರೆ, ಈ ದೇವಸ್ಥಾನದಲ್ಲಿ ಈ ರೀತಿ ಕಳ್ಳತನ ಆಗಿರುವುದು ಕೇರಳ ಸರ್ಕಾರಕ್ಕೆ ಭಾರೀ ಮುಜುಗರವನ್ನು ಉಂಟು ಮಾಡಿದೆ. ಭದ್ರತಾ ಲೋಪಕ್ಕೆ ಕಾರಣರಾಗಿರುವ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಕೇರಳದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications