Monsoon Session: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭ : ಪ್ರಮುಖ ಮಸೂದೆಗಳ ಮಂಡನೆ, ಚರ್ಚೆಗೆ ಪ್ರತಿಪಕ್ಷಗಳು ಸಜ್ಜು!
ದೆಹಲಿ, ಜುಲೈ 21: ಸಂಸತ್ತಿನ ಮಳೆಗಾಲದ ಅಧಿವೇಶನ ಇಂದು (ಜುಲೈ 21) ಆರಂಭವಾಗಿದೆ. ಸುಮಾರು ಒಂದು ತಿಂಗಳುಗಳ ಕಾಲ ಸಂಸತ್ತಿನ ಮಳೆಗಾಲದ ಅಧಿವೇಶನ ನಡೆಯಲಿದೆ. ಇಡೀ ಜಗತ್ತನೇ ತಲ್ಲಣಗೊಳಿಸಿದ ಏರ್ ಇಂಡಿಯಾ ವಿಮಾನ ಪತನ, ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ಬಳಿಕ ಉಭಯ ಸದನಗಳು ಸಭೆ ಸೇರುತ್ತಿರುವುದು ಇದೇ ಮೊದಲು. ಹೀಗಾಗಿ ಈ ಅಧಿವೇಶನದಲ್ಲಿ ಹಲವು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇರುವುದರಿಂದ ಈ ಮಳೆಗಾಲದ ಅಧಿವೇಶನ ಮಹತ್ವ ಪಡೆದಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಮುನ್ನ ಸರ್ಕಾರ ಇಂದು ಸರ್ವಪಕ್ಷ ಸಭೆ ಕರೆದಿದೆ. ಈ ಸಭೆಯಲ್ಲಿ, ಸಂಸತ್ತಿನ ಎರಡೂ ಸದನಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲಾ ರಾಜಕೀಯ ಪಕ್ಷಗಳಿಂದ ಸಹಕಾರವನ್ನು ಪಡೆಯಲಿದೆ. ಇಂದಿನಿಂದ ನಡೆಯಲಿರುವ ಮಳೆಗಾಲದ ಅಧಿವೇಶನವು ಆಗಸ್ಟ್ 21 ರವರೆಗೆ ಮುಂದುವರಿಯುತ್ತದೆ. ಸಂಸತ್ತಿನಲ್ಲಿ ಆಡಳಿತಾರೂಢ ಪಕ್ಷವನ್ನು ಕಟ್ಟಿ ಹಾಕಲು ಪ್ರತಿಪಕ್ಷಗಳು ಭರ್ಜರಿಯಾಗಿ ಸಜ್ಜಾಗಿವೆ.

ಈಗಾಗಲೇ ಇಂದಿನಿಂದ ಆರಂಭವಾಗಿರುವ ಸಂಸತ್ತಿನ ಅಧಿವೇಶನಗಳಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತು ಚರ್ಚಿಸಲು ಇಂಡಿಯಾ ಮೈತ್ರಿಕೂಟದ ನಾಯಕರ ಪ್ರಮುಖ ಸಭೆ ನಡೆಯಿತು. ಈ ಸಭೆಯಲ್ಲಿ 10 ಪಕ್ಷಗಳ ನಾಯಕರು ಭಾಗವಹಿಸಿದ್ದು, ಆಪರೇಷನ್ ಸಿಂಧೂರ್ ಕುರಿತು ಸಂಸತ್ತಿನ ಅಧಿವೇಶನದಲ್ಲಿ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮೈತ್ರಿಕೂಟದ ನಾಯಕರು ಸಜ್ಜಾಗಿದ್ದಾರೆ. ಆಪರೇಷನ್ ಸಿಂಧೂರ್ ಕುರಿತು ಕೇಂದ್ರವು ಇನ್ನೂ ಸತ್ಯಗಳನ್ನು ಬಹಿರಂಗಪಡಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆಯೂ ಸರ್ಕಾರವನ್ನು ಪ್ರಶ್ನಿಸುವುದಾಗಿ ವಿರೋಧ ಪಕ್ಷದ ನಾಯಕರು ಬಹಿರಂಗಪಡಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂಲಕ ಪಾಕ್-ಭಾರತದ ನಡುವಿನ ಕದನ ವಿರಾಮ ಘೋಷಣೆ, ಏರ್ ಇಂಡಿಯಾ ವಿಮಾನ ಪತನ, ಭಾರತದ ವಿದೇಶಾಂಗ ನೀತಿ ಮತ್ತು ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ, ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವುದು, ದೇಶದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳು, ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಎಂಟು ಪ್ರಮುಖ ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತಲು ವಿಪಕ್ಷಗಳು ಸಜ್ಜಾಗಿವೆ.
ಮುಂಗಾರು ಅಧಿವೇಶನದಲ್ಲಿ ಕೇಂದ್ರವು 8 ಮಸೂದೆಗಳು ಮಂಡನೆ ಮಾಡಲಿದೆ. ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, ಭೂ ಪರಂಪರೆಯ ತಾಣಗಳು, ಭೂವಿಜ್ಞಾನ (ಸಂರಕ್ಷಣೆ ಮತ್ತು ನಿರ್ವಹಣೆ) ಮಸೂದೆ, ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ, ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ ಸೇರಿವೆ. ಇವುಗಳ ಜೊತೆಗೆ, ಕೇಂದ್ರವು ಆದಾಯ ತೆರಿಗೆ-2025 ಮಸೂದೆಯನ್ನು ಸಹ ಮಂಡಿಸುವ ಸಾಧ್ಯತೆಯಿದೆ.












Click it and Unblock the Notifications