ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಪತ್ರಕರ್ತ ಸಿದ್ದಿಕಿಗೆ 5 ದಿನ ಮಧ್ಯಂತರ ಜಾಮೀನು
ನವದೆಹಲಿ, ಫೆಬ್ರವರಿ 15: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಂಧಿತನಾಗಿದ್ದ ಕೇರಳದ ವೆಬ್‌ಸೈಟ್ ಒಂದರ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರಿಗೆ ಅಸ್ವಸ್ಥ ತಾಯಿಯನ್ನು ಭೇಟಿ ಮಾಡಲು ಸುಪ್ರೀಂಕೋರ್ಟ್ ಐದು ದಿನಗಳ ಮಧ್ಯಂತರ ಜಾಮೀನು ನೀಡಿದೆ.
ಸಿದ್ದಿಕಿ ಅವರು ಉತ್ತರ ಪ್ರದೇಶದ ಶಸ್ತ್ರಸಜ್ಜಿತ ಪೊಲೀಸರ ಬಿಗಿ ಕಾವಲಿನ ನಡುವೆ ಕೇರಳಕ್ಕೆ ತೆರಳಬಹುದಾಗಿದೆ. ಆದರೆ ಅವರು ಅಲ್ಲಿ ಸಂಬಂಧಿಕರು, ವೈದ್ಯರು ಮತ್ತು ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಸಾರ್ವಜನಿಕರನ್ನು ಭೇಟಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಉತ್ತರ ಪ್ರದೇಶದ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುವಂತೆ ಕೇರಳ ಪೊಲೀಸರಿಗೆ ಸೂಚಿಸಿದೆ.
ಸಿದ್ದಿಕಿ ಅವರು ಮಾಧ್ಯಮಗಳಿಗೆ ಯಾವುದೇ ಸಂದರ್ಶನ ನೀಡದಂತೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಪೋಸ್ಟ್ ಹಾಕದಂತೆ ನಿರ್ಬಂಧ ವಿಧಿಸಲಾಗಿದೆ.

ಅನಾರೋಗ್ಯಪೀಡಿತ ತಾಯಿಯನ್ನು ಖುದ್ದು ಭೇಟಿ ಮಾಡಲು ಅವಕಾಶ ನೀಡುವಂತೆ ಸಿದ್ದಿಕಿ ಅವರು ಮಧ್ಯಂತರ ಜಾಮೀನಿಗೆ ಮನವಿ ಮಾಡಿದ್ದರು. ಸಿದ್ದಿಕಿ ಅವರ ತಾಯಿಯ ಆರೋಗ್ಯ ತೀರಾ ಹದಗೆಟ್ಟಿದ್ದು, ಅವರು ಹೆಚ್ಚು ಸಮಯ ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿರುವುದಾಗಿ ಸಿದ್ದಿಕಿ ಪರ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದ್ದರು.
ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠವು ಮಾನವೀಯ ನೆಲೆಯಲ್ಲಿ ಅವರನ್ನು ತಮ್ಮ ತವರು ರಾಜ್ಯ ಕೇರಳಕ್ಕೆ ತೆರಳಲು ಅವಕಾಶ ನೀಡಿತು. ಐದನೇ ದಿನದ ಅಂತ್ಯದ ಒಳಗೆ ಉತ್ತರ ಪ್ರದೇಶದ ಕಾರಾಗೃಹಕ್ಕೆ ಅವರು ಮರಳಬೇಕಿದೆ.












Click it and Unblock the Notifications