ಕೇದಾರನಾಥ ಯಾತ್ರೆ: ಭಾರೀ ಹಿಮಪಾತ- ಚಾರ್‌ಧಾಮ್‌ಗೆ ಹೋಗುವ ದಾರಿ ಬಂದ್- ಏಪ್ರಿಲ್ 30 ರವರೆಗೆ ನೋಂದಣಿ ಸ್ಥಗಿತ
ದೇಶದ ಪವಿತ್ರ ಚಾರ್‌ಧಾಮ್ ಯಾತ್ರೆಗೆ ಭಾರೀ ಹಿಮಪಾತ ಅಡ್ಡಿಯನ್ನುಂಟು ಮಾಡಿದೆ. ಕೇದಾರನಾಥದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಭಾರೀ ಹಿಮಪಾತ ಮತ್ತು ಮಳೆ ಸುರಿಯುತ್ತಿದೆ. ಇದು ಮುಂಬರುವ ಚಾರ್ ಧಾಮ್ ಯಾತ್ರೆಯ ಸಿದ್ಧತೆಗೆ ಅಡ್ಡಿಯನ್ನುಂಟು ಮಾಡುತ್ತಿದೆ.
ಕೇದಾರನಾಥ ಯಾತ್ರೆಯನ್ನು ಏಪ್ರಿಲ್ 25 ರಂದು ತೆರೆಯಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳು ಪ್ರಯಾಣದ ವ್ಯವಸ್ಥೆಗೆ ಸಿದ್ಧತೆಗಳನ್ನು ನಡೆಸುತ್ತಿವೆ. ಆದರೀಗ ಇದಕ್ಕೆ ಹಿಮಪಾತ ಅಡ್ಡಿಯನ್ನುಂಟು ಮಾಡುತ್ತಿದೆ. ಭಾರೀ ಹಿಮಪಾತದಿಂದಾಗಿ ಚಾರ್‌ಧಾಮ್ ಹೋಗುವ ದಾರಿ ಬಂದ್ ಆಗಿದ್ದು ಏ.30 ರವರೆಗೆ ನೋಂದಣಿ ಸ್ಥಗಿತಗೊಳಿಸಲಾಗಿದೆ.

ಉತ್ತರಾಖಂಡ ಸರ್ಕಾರ ಭಾನುವಾರ ತೀರ್ಥಯಾತ್ರೆಗೆ ಸಲಹೆಯನ್ನು ನೀಡಿತು. ಆದರೆ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಭಕ್ತರು ಜಾಗರೂಕರಾಗಿ ತಮ್ಮ ಯಾತ್ರೆಯನ್ನು ಪ್ರಾರಂಭಿಸುವಂತೆ ಸೂಚಿಸಿದೆ.
" ಕೇದಾರನಾಥ ಧಾಮದಲ್ಲಿ ಮಧ್ಯಂತರ ಮಳೆ ಮತ್ತು ಹಿಮಪಾತವು ಮುಂದುವರಿಯುವುದನ್ನು ಗಮನಿಸಬಹುದು. ದೇಶ ಮತ್ತು ವಿದೇಶಗಳಿಂದ ಕೇದಾರನಾಥ ಧಾಮಕ್ಕೆ ಬರುವ ಎಲ್ಲಾ ಭಕ್ತರು ಕೇದಾರನಾಥ ಧಾಮಕ್ಕೆ ಹೋಗುವ ಮೊದಲು ಹವಾಮಾನ ಮುನ್ಸೂಚನೆಯನ್ನು ಪರಿಶೀಲಿಸುವಂತೆ ಸರ್ಕಾರದಿಂದ ತಿಳಿಸಲಾಗಿದೆ. ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ತೆಗೆದುಕೊಂಡು ಹೋಗುವಂತೆ ತಿಳಿಸಲಾಗಿದೆ'' ಎಂದು ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಅವರು ಎಎನ್‌ಐ ಜೊತೆ ಮಾತನಾಡುತ್ತಾ, ಕೇದಾರನಾಥ ಧಾಮದಲ್ಲಿ ಶನಿವಾರ ಭಾರೀ ಹಿಮಪಾತವಾಗಿತ್ತು. ಯಾತ್ರಾರ್ಥಿಗಳು ಜಾಗರೂಕರಾಗಿರಿ ಮತ್ತು ಹವಾಮಾನವನ್ನು ನೋಡುವ ಮೂಲಕ ತಮ್ಮ ಯಾತ್ರೆಯನ್ನು ಪ್ರಾರಂಭಿಸಲು ವಿನಂತಿಸಲಾಗಿದೆ ಎಂದರು.

ಹವಮಾನ ಬದಲಾವಣೆಯಿಂದಾಗಿ ರಿಷಿಕೇಶ ಮತ್ತು ಹರಿದ್ವಾರದಲ್ಲಿ ಏಪ್ರಿಲ್ 30 ರವರೆಗೆ ಪವಿತ್ರ ದೇವಾಲಯಕ್ಕೆ ಭೇಟಿ ನೀಡುವ ನೋಂದಣಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಗಡ್ವಾಲ್ ವಿಭಾಗದ ಹೆಚ್ಚುವರಿ ಕಮಿಷನರ್ (ಆಡಳಿತ) ಮತ್ತು ಚಾರ್ಧಾಮ್ ಯಾತ್ರಾ ಆಡಳಿತ ಸಂಸ್ಥೆಯ ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಸಿಂಗ್ ಕವಿರಿಯಾಲ್ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ, "ಕೆಟ್ಟ ಹವಾಮಾನ ಮತ್ತು ಭಾರೀ ಹಿಮಪಾತದ ದೃಷ್ಟಿಯಿಂದ, ಕೇದಾರನಾಥ ಯಾತ್ರೆಗೆ ಯಾತ್ರಾರ್ಥಿಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ. ರಿಷಿಕೇಶ ಮತ್ತು ಹರಿದ್ವಾರದಲ್ಲಿ ಏಪ್ರಿಲ್ 30 ರವರೆಗೆ ನೋಂದಣಿ ಸ್ಥಗಿತಗೊಳಿಸಲಾಗಿದೆ'' ಎಂದರು.
ಸರ್ಕಾರ ಹವಾಮಾನ ಪರಿಸ್ಥಿತಿಯನ್ನು ಅವಲೋಕಿಸಿ ಅದರಂತೆ ಭಕ್ತರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಕೇದಾರನಾಥ ಯಾತ್ರೆ: ಪ್ರಮುಖ ವಿವರಗಳು ಇಲ್ಲಿವೆ
*ಮಾರ್ಚ್ ವೇಳೆಗೆ ಒಟ್ಟು 6.34 ಲಕ್ಷ ಭಕ್ತರು ಚಾರ್ ಧಾಮ್ ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ತಿಳಿಸಿದೆ.
*ಏಪ್ರಿಲ್ 25, 2023 ರಿಂದ ಭಕ್ತರಿಗೆ ಭೇಟಿ ನೀಡಲು ಕೇದಾರನಾಥ ಧಾಮದ ಬಾಗಿಲು ತೆರೆಯಲಾಗುತ್ತದೆ.
*ಯಾತ್ರೆಯನ್ನು ಸುಗಮ ಮತ್ತು ಯಶಸ್ವಿಯಾಗಿ ನಡೆಸಲು ವ್ಯವಸ್ಥೆಗಳು ಮತ್ತು ಸಿದ್ಧತೆಗಳನ್ನು ಪೂರ್ಣಗೊಳಿಸಲು ಸರ್ಕಾರವು ಅಧಿಕಾರಿಗಳಿಗೆ ಸೂಚಿಸಿದೆ.
*ಕೇದಾರನಾಥ ಯಾತ್ರೆಯ ಮಾರ್ಗದಲ್ಲಿ ಹಿಮವನ್ನು ತೆಗೆದುಹಾಕಲು ಮತ್ತು ಹಾನಿಗೊಳಗಾದ ಮಾರ್ಗಗಳ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ತಂಡಗಳಿಗೆ ಸೂಚನೆ ನೀಡಲಾಗಿದೆ.
*"ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಹಿಮ ತೆಗೆಯುವ ಕೆಲಸವನ್ನು ತ್ವರಿತ ಗತಿಯಲ್ಲಿ ಪ್ರಾರಂಭಿಸಬೇಕು ಮತ್ತು ಎಲ್ಲಾ ಹಾನಿಗೊಳಗಾದ ಮಾರ್ಗಗಳ ದುರಸ್ತಿ ಕಾರ್ಯವನ್ನು ಸಹ ಶೀಘ್ರವಾಗಿ ಪೂರ್ಣಗೊಳಿಸಬೇಕು" ಎಂದು ಅಜೇಂದ್ರ ಹೇಳಿದರು.

*20 PRD (ಪ್ರಾಂತೀಯ ರಕ್ಷಕ ದಳ) ಜವಾನರನ್ನು ಯಾತ್ರೆಯ ಮಾರ್ಗದಲ್ಲಿ ಹೇಸರಗತ್ತೆ ಹಾಗೂ ಕುದುರೆಗಳ ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗಿದೆ.
*ಯಮುನೋತ್ರಿ, ಗಂಗೋತ್ರಿ ಮತ್ತು ಕೇದಾರನಾಥಗಳನ್ನು ಒಳಗೊಂಡಿರುವ 'ಚಾರ್ ಧಾಮ್' ಎಂದು ಕರೆಯಲ್ಪಡುವ ನಾಲ್ಕು ಪುರಾತನ ಯಾತ್ರಾ ಸ್ಥಳಗಳಲ್ಲಿ ಬದರಿನಾಥ ಧಾಮವೂ ಒಂದಾಗಿದೆ.
*ಇದು ಉತ್ತರಾಖಂಡದ ಬದರಿನಾಥ ಪಟ್ಟಣದಲ್ಲಿದೆ. ಇದು ಪ್ರತಿ ವರ್ಷ ಆರು ತಿಂಗಳವರೆಗೆ ತೆರೆದಿರುತ್ತದೆ (ಏಪ್ರಿಲ್ ಅಂತ್ಯ ಪ್ರಾರಂಭ ಮತ್ತು ನವೆಂಬರ್ ಆರಂಭದಲ್ಲಿ ಮುಚ್ಚಲಾಗುತ್ತದೆ).
*ಯಾತ್ರಿಕರ ಸಂಖ್ಯೆ ಮತ್ತು ಜನಸಂದಣಿ ನಿರ್ವಹಣೆಗಾಗಿ ಯಾತ್ರಾರ್ಥಿಗಳ ಆನ್‌ಲೈನ್ ಮತ್ತು ಆಫ್‌ಲೈನ್ ನೋಂದಣಿಯನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಿರ್ದೇಶನಗಳನ್ನು ನೀಡಿದ್ದಾರೆ.












Click it and Unblock the Notifications