ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನೇಜರ್ ಕೊಲೆ ಕೇಸ್: ಕಂಚಿಶ್ರೀ ಆರೋಪಮುಕ್ತ

By Srinath
|
Google Oneindia Kannada News

kanchi-mutt-manager-sankararaman-murder-accused-proven-not-guilty
ಪುದುಚೇರಿ, ನ. 27: ಧಾರ್ಮಿಕ ವಲಯದಲ್ಲಿ ತೀವ್ರ ಸಂಚಲವನ್ನುಂಟುಮಾಡಿದ್ದ, 9 ವರ್ಷದಷ್ಟು ಹಳೆಯದಾದ ಶಂಕರರಾಮನ್‌ ಹತ್ಯೆ ಪ್ರಕರಣದ ತೀರ್ಪು ಇಂದು ಹೊರಬಿದ್ದಿದೆ. ಮ್ಯಾನೇಜರ್ ಶಂಕರರಾಮನ್‌ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಕಂಚಿ ಕಾಮಕೋಟಿ ಪೀಠದ ಜಗದ್ಗುರು 80 ವರ್ಷದ ಜಯೇಂದ್ರ ಸರಸ್ವತಿ ಹಾಗೂ ಕಿರಿಯಶ್ರೀ ವಿಜಯೇಂದ್ರ ಸರಸ್ವತಿ ಅವರು ಆರೋಪಮುಕ್ತರಾಗಿದ್ದಾರೆ.

ಪುದುಚೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಸಿಎಸ್ ಮುರುಗನ್‌ ಅವರು ಇದೀಗತಾನೆ ತೀರ್ಪು ಪ್ರಕಟಿಸಿದ್ದು, ಕಂಚಿಶ್ರೀಗಳನ್ನು ದೋಷಮುಕ್ತಗೊಳಿಸಿದ್ದಾರೆ. ಜತೆಗೆ ಪ್ರಕರಣದ ಎಲ್ಲ 23 ಆರೋಪಿಗಳೂ ದೋಷಮುಕ್ತರಾಗಿದ್ದಾರೆ.

ಕೊಲೆಯ ಹಿಂದಿನ ಉದ್ದೇಶ ಸಾಬೀತಾಗಿಲ್ಲ. ಮತ್ತು ಸಾಕ್ಷ್ಯವೂ ಸಾಬೀತಾಗಿಲ್ಲ. ಹಾಗಾಗಿ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಜಡ್ಜ್ ತೀರ್ಪಿನಲ್ಲಿ ತಿಳಿಸಿದ್ದಾರೆ. ತೀರ್ಪು ಹೊರಬೀಳುತ್ತಿದ್ದಂತೆ ಕೋರ್ಟ್ ಆವರಣದಲ್ಲಿದ್ದ ಹಿರಿಯ ಸ್ವಾಮೀಜಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಹತ್ಯೆಗೀಡಾದ ಶಂಕರರಾಮನ್‌ ಅವರ ಪತ್ನಿ ಪದ್ಮ ಮತ್ತು ಪುತ್ರ ಆನಂದ ಶರ್ಮ ಸೇರಿದಂತೆ ಒಟ್ಟು 189 ಸಾಕ್ಷಿಗಳನ್ನು 2009ರಿಂದ 2012ರ ಅವಧಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಒಟ್ಟು 83 ಮಂದಿ ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು.

ಏನಿದು ಪ್ರಕರಣ?: ತಮಿಳುನಾಡಿನ ಕಾಂಚೀಪುರಂನಲ್ಲಿರುವ ವರದರಾಜ ಪೆರುಮಾಳ್‌ ದೇಗುಲದ ಮ್ಯಾನೇಜರ್ ಎ ಶಂಕರರಾಮನ್‌ ಅವರನ್ನು 2004ರ ಸೆ. 3ರಂದು ದೇಗುಲದ ಆವರಣದಲ್ಲೇ ಹತ್ಯೆ ಮಾಡಲಾಗಿತ್ತು. ಕಂಚಿ ಹಿರಿಯಶ್ರೀ ಜಯೇಂದ್ರ ಸರಸ್ವತಿ ಹಾಗೂ ಕಿರಿಯಶ್ರೀ ವಿಜಯೇಂದ್ರ ಸರಸ್ವತಿ ಅವರನ್ನು ಈ ಪ್ರಕರಣದಲ್ಲಿ ಮೊದಲ ಮತ್ತು ಎರಡನೇ ಆರೋಪಿ ಎಂದು ಪರಿಗಣಿಸಲಾಗಿತ್ತು.

ಇವರಲ್ಲದೆ, ಕಂಚಿ ಮಠದ ವ್ಯವಸ್ಥಾಪಕ ಸುಂದರೇಶನ್‌ ಹಾಗೂ ಜಯೇಂದ್ರ ಸರಸ್ವತಿ ಸೇರಿದಂತೆ ಒಟ್ಟು 24 ಮಂದಿಯನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿತ್ತು. ಆ ಪೈಕಿ 23 ಮಂದಿ ಬದುಕಿದ್ದಾರೆ. ಒಬ್ಬ ಆರೋಪಿ ಎಂ ಕಾತಿರವಣನ್ ಎಂಬುವವರು ಕಳೆದ ಮಾರ್ಚ್ ತಿಂಗಳಲ್ಲಿ ಕೆಕೆ ನಗರದಲ್ಲಿ ಹತ್ಯೆಗೀಡಾಗಿದ್ದರು. ಕಂಚಿಶ್ರೀಗಳೂ ಸೇರಿದಂತೆ ಪ್ರಕರಣದ ಮೊದಲ ಆರು ಆರೋಪಿಗಳ ವಿರುದ್ಧ ಕೊಲೆ ಮತ್ತಿತರ ಆರೋಪಗಳನ್ನು ಹೊರಿಸಲಾಗಿತ್ತು.

ತಮಿಳುನಾಡಿನಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ವಿಚಾರಣೆಗೆ ಪೂರಕ ವಾತಾವರಣವಿಲ್ಲ ಎಂದು ಕಂಚಿ ಜಯೇಂದ್ರ ಸರಸ್ವತಿ ಅವರು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 2005ರಲ್ಲಿ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಪುದುಚೇರಿಯ ಚೆಂಗಲ್‌ ಪೇಟ್‌ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

English summary
Pondicherry- Kanchi mutt Sankararaman murder case judgement pronounced. Prime accused Kanchi Sankara Mutt Jayendra Saraswathi and all other 23 accused acquitted. The Principal District Sessions Court Judge, Puducherry, C.S. Murugan, delivered the judgment in the Sankararaman murder case on Wednesday a short while ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X