Meghalaya election 2023; ಎನ್‌ಪಿಪಿ ಸರ್ಕಾರಕ್ಕೆ ಬಿಜೆಪಿ ಬೆಂಬಲ!
ಮೇಘಾಲಯ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿದೆ. ಸರ್ಕಾರ ರಚನೆ ಮಾಡಲು ಎನ್‌ಪಿಪಿಗೆ ಬೆಂಬಲ ನೀಡುವಂತೆ ರಾಜ್ಯ ಬಿಜೆಪಿ ಘಟಕಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೂಚನೆ ನೀಡಿದ್ದಾರೆ.
ಶಿಲ್ಲಾಂಗ್, ಮಾರ್ಚ್ 02; ಮೇಘಾಲಯ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿದೆ. 60 ಸದಸ್ಯ ಬಲದ ವಿಧಾನಸಭೆಯ 59 ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆದಿತ್ತು. ಬುಡಕಟ್ಟು ಮತ್ತು ಕ್ರೈಸ್ತ ಸಮುದಾಯದ ಪ್ರಾಬಲ್ಯವಿರುವ ಚಿಕ್ಕ ರಾಜ್ಯವಾದ ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 26 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚನೆ ಮಾಡಲು ಮೂವರು ಸದಸ್ಯರ ಕೊರತೆ ಎದುರಿಸುತ್ತಿದೆ.
ಗುರುವಾರ ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಯಿತು. ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಸರ್ಕಾರ ರಚಿಸಲು ಬಹುಮತದ ಕೊರತೆ ಎದುರಿಸಿತು. ಕಾನ್ರಾಡ್ ಸಂಗ್ಮಾ ಸರ್ಕಾರ ರಚನೆ ಮಾಡಲು ಬೆಂಬಲ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರವಾಣಿ ಕರೆ ಮಾಡಿ ಮನವಿ ಮಾಡಿದರು. ಅಮಿತ್ ಶಾ ಸಹ ಒಪ್ಪಿಗೆ ನೀಡಿದ್ದು, ಬಿಜೆಪಿ ರಾಷ್ಟ್ರೀಯ ಘಟಕದಿಂದ ಈ ಕುರಿತು ಮೇಘಾಲಯ ರಾಜ್ಯ ಘಟಕಕ್ಕೆ ಸೂಚನೆ ನೀಡಲಾಗಿದೆ.

ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿದೆ. 2018ರ ರೀತಿ ಈ ಬಾರಿಯೂ ಸಹ ಚುನಾವಣೋತ್ತರವಾಗಿ ಬಿಜೆಪಿ ಎನ್‌ಪಿಪಿಗೆ ಬೆಂಬಲ ನೀಡಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮೇಘಾಲಯ ಬಿಜೆಪಿ ಘಟಕಕ್ಕೆ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿಗೆ ಬೆಂಬಲ ನೀಡುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿವಮಂತ್ ಬಿಸ್ವಾಸ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ 2018ರ ಚುನಾವಣೆಯ ಬಳಿಕ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ಮೈತ್ರಿಕೂಟ ರಚನೆ ಮಾಡಿತ್ತು. ಆಗಲೂ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿತ್ತು. ಬಿಜೆಪಿಯ ಇಬ್ಬರು ಶಾಸಕರ ಪೈಕಿ ಒಬ್ಬರು ಸಚಿವರಾಗಿದ್ದರು. ಈ ಬಾರಿಯ ಚುನಾವಣೆಯಲ್ಲಿ ಎನ್‌ಪಿಪಿ ಮತ್ತು ಬಿಜೆಪಿ ಸ್ವತಂತ್ರವಾಗಿ ಕಣಕ್ಕಿಳಿದಿದ್ದವು. ಈಗ ಎನ್‌ಪಿಪಿ ಬಹುಮತದ ಕೊರತೆ ಎದುರಿಸಿದ ಕಾರಣ ಕಾನ್ರಾಡ್ ಸಂಗ್ಮಾ ಮನವಿಯಂತೆ ಎನ್‌ಪಿಪಿ ಪಕ್ಷಕ್ಕೆ ಬೆಂಬಲ ಘೋಷಣೆ ಮಾಡಲಾಗಿದೆ.

ಸರ್ಕಾರ ರಚನೆ ಲೆಕ್ಕಾಚಾರ; ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಎನ್‌ಪಿಪಿ ಪಕ್ಷ 26 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಬಿಜೆಪಿಯ ಇಬ್ಬರು ಶಾಸಕರು ಸರ್ಕಾರ ರಚನೆ ಮಾಡಲು ಎನ್‌ಪಿಪಿಗೆ ಬೆಂಬಲ ನೀಡಲಿದ್ದಾರೆ. ಇದರಿಂದಾಗಿ ಎನ್‌ಪಿಪಿ ಬಲ 28ಕ್ಕೆ ಏರಿಕೆಯಾಗಲಿದೆ. ಕಳೆದ ಬಾರಿ ಸರ್ಕಾರ ರಚನೆ ಮಾಡಲು ಯುನೈಟೆಡ್ ಡೆಮಾಕ್ರಟಿಕ್ ಪಕ್ಷ ಎನ್‌ಪಿಪಿಗೆ ಬೆಂಬಲ ನೀಡಿತ್ತು. ಈ ಬಾರಿ ಅವರು 11 ಸ್ಥಾನಗಳಲ್ಲಿ ಜಯಗಳಿಸಿದ್ದು, ಪುನಃ ಎನ್‌ಪಿಪಿ ಬೆಂಬಲಿಸುವ ನಿರೀಕ್ಷೆ ಇದೆ. ಇದರಿಂದಾಗಿ ಕಾನ್ರಾಡ್ ಸಂಗ್ಮಾ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ.
ಮೇಘಾಲಯ ರಾಜ್ಯದ ವಿಧಾನಸಭೆ ಒಟ್ಟು ಬಲ 60. ಆದರೆ ಫೆಬ್ರವರಿ 27ರಂದು 59 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದೆ. ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಚ್. ಡಿ. ಆರ್. ಲಿಂಗ್ಡೊ ಮೃತಪಟ್ಟ ಕಾರಣ ಆ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ಸರ್ಕಾರ ರಚನೆಗೊಂಡ ಬಳಿಕ ನಡೆಯುವ ಚುನಾವಣೆಯಲ್ಲಿ ಎನ್‌ಪಿಪಿ, ಬಿಜೆಪಿ, ಯುಡಿಪಿಯ ಅಭ್ಯರ್ಥಿ ಗೆದ್ದರೆ ಅವರ ಬೆಂಬಲ ಸಹ ಸರ್ಕಾರಕ್ಕೆ ಸಿಗಲಿದೆ. ಅಲ್ಲೇ ಇಬ್ಬರು ಪಕ್ಷೇತರರು ಸಹ ಗೆದ್ದಿದ್ದು ಅವರು ಸರ್ಕಾರಕ್ಕೆ ಬೆಂಬಲ ನೀಡುವ ನಿರೀಕ್ಷೆ ಇದೆ.
ಇನ್ನು ಈ ಬಾರಿ ಚುನಾವಣೆಯಲ್ಲಿ ಟಿಎಂಸಿ 5, ಹೆಚ್‌ಎಸ್‌ಪಿಡಿಪಿ 2, ಕಾಂಗ್ರೆಸ್ 5, ಪಿಡಿಎಫ್ 2, ವಿಪಿಪಿ 4 ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಅವರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.












Click it and Unblock the Notifications