ವರ್ಷಾಂತ್ಯದಲ್ಲಿ ಭಾರತಕ್ಕೆ ಜಾನ್ಸನ್ ಅಂಡ್ ಜಾನ್ಸನ್ ಏಕಡೋಸ್ ಲಸಿಕೆ ಲಭ್ಯ
ನವದೆಹಲಿ, ಆಗಸ್ಟ್ 14: ಈ ವರ್ಷಾಂತ್ಯದ ವೇಳೆಗೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಏಕಡೋಸ್ ಕೊರೊನಾ ಲಸಿಕೆ ಭಾರತಕ್ಕೆ ಪೂರೈಕೆಯಾಗುವ ನಿರೀಕ್ಷೆಯಿದೆ.
ಕಳೆದ ವಾರ ಭಾರತದಲ್ಲಿ ಅಮೆರಿಕ ಮೂಲದ ಜಾನ್ಸನ್ ಅಂಡ್ ಜಾನ್ಸನ್ ಏಕ ಡೋಸ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.
ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ ಅನುಮತಿ ನೀಡುವುದರೊಂದಿಗೆ ಭಾರತದಲ್ಲಿ ಐದು ಕೊರೊನಾ ಲಸಿಕೆಗಳ ಬಳಕೆಗೆ ಅನುಮೋದನೆ ಸಿಕ್ಕಂತಾಗಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಪ್ರಕಟಿಸಿದ್ದರು.

"ಭಾರತ ತನ್ನ ಕೊರೊನಾ ಲಸಿಕೆಯ ಸಂಖ್ಯೆಯನ್ನು ವಿಸ್ತರಿಸಿಕೊಂಡಿದೆ. ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಏಕಡೋಸ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮೋದನೆ ನೀಡಲಾಗಿದೆ. ಈಗ ಭಾರತದಲ್ಲಿ ಐದು ಕೊರೊನಾ ಲಸಿಕೆಗಳು ಲಭ್ಯವಿವೆ. ಇದು ಕೊರೊನಾ ಸೋಂಕಿನ ವಿರುದ್ಧ ಭಾರತದ ಹೋರಾಟವನ್ನು ಇನ್ನಷ್ಟು ಬಲಗೊಳಿಸಲಿದೆ" ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದರು.
"ಆಗಸ್ಟ್ 7ರಂದು ಭಾರತ ಸರ್ಕಾರ ತುರ್ತು ಬಳಕೆಗೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಏಕ ಡೋಸ್ ಲಸಿಕೆಗೆ ಅನುಮೋದನೆ ನೀಡಿದೆ. 18 ವರ್ಷ ಹಾಗೂ ಮೇಲ್ಪಟ್ಟವರಿಗೆ ಕೊರೊನಾ ವಿರುದ್ಧ ಈ ಲಸಿಕೆಯನ್ನು ನೀಡಲಾಗುವುದು" ಎಂದು ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ವಕ್ತಾರರು ಹೇಳಿದ್ದಾರೆ.
Janssen ಎಂಬ ಲಸಿಕೆಯನ್ನು ಜಾನ್ಸನ್ ಅಂಡ್ ಜಾನ್ಸನ್ ಅಭಿವೃದ್ಧಿಪಡಿಸಿದೆ.
ತುರ್ತು ಬಳಕೆ ಸಂಬಂಧ ಅನುಮತಿ ಕೋರಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. "ಸಂಸ್ಥೆ ತನ್ನ ಏಕ ಡೋಸ್ ಲಸಿಕೆಯನ್ನು ಭಾರತದಲ್ಲಿ ಶೀಘ್ರವೇ ಬಿಡುಗಡೆಗೊಳಿಸಲು ಬದ್ಧವಾಗಿದೆ. ಭಾರತದಲ್ಲಿ ಸದ್ಯಕ್ಕೆ ಕೊರೊನಾ ಲಸಿಕೆಯ ವೈದ್ಯಕೀಯ ಅಧ್ಯಯನಗಳನ್ನು ನಡೆಸುವ ಅವಶ್ಯಕತೆಯಿಲ್ಲ ಎಂದು ತಿಳಿಸಲಾಗಿದೆ. ನಮ್ಮ ಏಕ ಡೋಸ್ ಲಸಿಕೆಯನ್ನು ಭಾರತಕ್ಕೆ ತಲುಪಿಸುವ ನಮ್ಮ ಸಾಮರ್ಥ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂಬುದರ ಕುರಿತು ಅನ್ವೇಷಣೆ ನಡೆಸುತ್ತಿದ್ದೇವೆ. ಈ ಕುರಿತು ಭಾರತ ಸರ್ಕಾರದೊಂದಿಗೆ ಚರ್ಚಿಸುತ್ತಿದ್ದೇವೆ" ಎಂದು ವಕ್ತಾರರು ತಿಳಿಸಿದ್ದರು.
ಭಾರತದಲ್ಲಿ ಇದೇ ಜನವರಿ 16ರಿಂದ ಬೃಹತ್ ಕೊರೊನಾ ಲಸಿಕೆ ಅಭಿಯಾನ ಆರಂಭಿಸಲಾಗಿದೆ. ಈವರೆಗೂ ಐದು ಕೊರೊನಾ ಲಸಿಕೆಗಳಿಗೆ ಭಾರತದಲ್ಲಿ ಅನುಮೋದನೆ ದೊರೆತಿದೆ. ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್, ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್ ಹಾಗೂ ಮಾಡೆರ್ನಾ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿತ್ತು. ಇದೀಗ ಐದನೇ ಲಸಿಕೆಯಾಗಿ ಜಾನ್ಸನ್ ಅಂಡ್ ಜಾನ್ಸನ್‌ನ ಲಸಿಕೆ ಸೇರ್ಪಡೆಯಾಗಿದೆ.
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ದೇಶೀಯ ಲಸಿಕೆಗಳಾಗಿದ್ದು, ಇನ್ನುಳಿದವು ವಿದೇಶಗಳಲ್ಲಿ ಅಭಿವೃದ್ಧಿಯಾಗಿವೆ. ಇವುಗಳ ಸ್ಥಳೀಯ ಉತ್ಪಾದನೆ ಕುರಿತು ಮಾತುಕತೆಗಳು ಮುಂದುವರೆದಿವೆ.
ಜಾನ್ಸನ್ & ಜಾನ್ಸನ್ ಸಂಸ್ಥೆಯ ಕೊರೊನಾ ಲಸಿಕೆ ಪಡೆದ ಎಂಟು ತಿಂಗಳ ನಂತರವೂ ಹೆಚ್ಚು ಸಾಂಕ್ರಾಮಿಕವಾಗಿರುವ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿ. ಲಸಿಕೆಯು ಕೊರೊನಾ ಸೋಂಕಿನ ರೂಪಾಂತರಗಳ ವಿರುದ್ಧ ಶೇ.85 ರಷ್ಟು ಪರಿಣಾಮಕಾರಿ ಎಂದು ಈಚೆಗೆ ಸಂಸ್ಥೆ ಪ್ರಕಟಿಸಿತ್ತು.
ಇದೇ ವರ್ಷಾಂತ್ಯಕ್ಕೆ ಈ ಲಸಿಕೆ ಭಾರತಕ್ಕೆ ಪೂರೈಕೆಯಾಗುವುದಾಗಿ ತಿಳಿದುಬಂದಿದೆ.












Click it and Unblock the Notifications