ಕಂಬಕ್ಕೆ ಕಟ್ಟಿ ಥಳಿಸಿ ಹತ್ಯೆ: ಐವರ ಬಂಧನ, ಪೊಲೀಸರ ಅಮಾನತು
ರಾಂಚಿ, ಜೂನ್ 24: ದೇಶದೆಲ್ಲೆಡೆ ವ್ಯಾಪಕ ಖಂಡನೆಗೆ ಒಳಗಾಗಿದ್ದ ಜಾರ್ಖಂಡ್‌ನಲ್ಲಿ ಕಳೆದ ವಾರ ಗುಂಪೊಂದು ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಮೋಟಾರ್‌ಸೈಕಲ್ ಕದ್ದ ಆರೋಪದಲ್ಲಿ ಕಳೆದ ಮಂಗಳವಾರ ತಬ್ರೇಜ್ ಅನ್ಸಾರಿ ಎಂಬ 24 ವರ್ಷದ ಯುವಕನನ್ನು ಹೊಡೆದು ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದಾರೆ.
ಮಂಗಳವಾರ ತನ್ನ ಕೆಲವು ಸ್ನೇಹಿತರೊಂದಿಗೆ ತಬ್ರೇಜ್ ಅನ್ಸಾರಿ ಜಮ್‌ಷೆಡ್ಪುರದಿಂದ ಸರೈಕೆಲಾ ಖರ್ಸವಾನ್‌ಜಿಲ್ಲೆಯ ಕರ್ಸೋವಾದಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ. ಮನೆಯಿಂದ ಐದು ಕಿಮೀ ದೂರದಲ್ಲಿ ಗುಂಪೊಂದು ಆತನ ಮೇಲೆ ದಾಳಿ ನಡೆಸಿತ್ತು.

ತಬ್ರೇಜ್ ದ್ವಿಚಕ್ರ ವಾಹನ ಕದ್ದಿದ್ದಾನೆಂದು ಆರೋಪಿಸಿದ ಗುಂಪು, ಆತನನ್ನು ಕಂಬಕ್ಕೆ ಕಟ್ಟಿ ಗಂಟೆಗಟ್ಟಲೆ ನಿರಂತರ ಥಳಿಸಿತ್ತು. ಆತನಿಗೆ ಹೊಡೆಯುವುದಲ್ಲದೆ 'ಜೈ ಶ್ರೀರಾಂ' ಮತ್ತು 'ಜೈ ಹನುಮಾನ್' ಎಂದು ಬಲವಂತಪಡಿಸುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಆತ ಹೊಡೆತ ಸಹಿಸಿಕೊಳ್ಳಲಾರದೆ ಪ್ರಜ್ಞೆ ಕಳೆದುಕೊಂಡ ಬಳಿಕವಷ್ಟೇ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿತ್ತು. ನಾಲ್ಕು ದಿನ ಆತನನ್ನು ಪೊಲೀಸರು ತಮ್ಮ ವಶದಲ್ಲಿಯೇ ಇರಿಸಿಕೊಂಡು ಶನಿವಾರ ಆಸ್ಪತ್ರೆಗೆ ಕರೆದು ತಂದಿದ್ದರು. ಆದರೆ, ಆಗಲೇ ಆತ ಮೃತಪಟ್ಟಿದ್ದ.
ಹಲವು ಬಾರಿ ಮನವಿ ಸಲ್ಲಿಸಿದ್ದರೂ ತಬ್ರೇಜ್‌ಗೆ ಪೊಲೀಸರು ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಲಿಲ್ಲ. ಆತನನ್ನು ಭೇಟಿ ಮಾಡಲೂ ಅವಕಾಶ ನೀಡಲಿಲ್ಲ. ಆತನನ್ನು ಆಸ್ಪತ್ರೆಗೆ ಸಾಗಿಸುವ ಬಹಳ ಸಮಯದ ಮೊದಲೇ ಮೃತಪಟ್ಟಿದ್ದ ಎಂದು ಆತನ ಕುಟುಂಬ ಆರೋಪಿಸಿದೆ.












Click it and Unblock the Notifications