ರಾಕೆಟ್ ಚಿಂದಿ ಚಿಂದಿ: ಭಾರತ ಗೆದ್ದರೂ ಜಪಾನ್ ಸೋತಿತು!
ಬಾಹ್ಯಾಕಾಶ ಲೋಕದಲ್ಲಿ ಭಾರತ ಮಿರಮಿರ ಮಿಂಚುತ್ತಿದೆ. ಅದರಲ್ಲೂ ಇಂದು ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆ 'ಚಂದ್ರಯಾನ-3' ಉಡಾವಣೆ ಮಾಡಿದ್ದು, ಇಡೀ ಜಗತ್ತು ಇತ್ತ ಗಮನ ನೆಟ್ಟಿದೆ. ಆದರೆ ಇದೇ ಸಂದರ್ಭದಲ್ಲಿ ಜಪಾನ್ ಸೋತು ಸುಣ್ಣವಾಗಿದೆ. ಭಾರತದ 'ಚಂದ್ರಯಾನ-3' ರಾಕೆಟ್ ನೇರವಾಗಿ ಬಾಹ್ಯಾಕಾಶ ತಲುಪಿದರೆ, ಜಪಾನ್ ರಾಕೆಟ್ ಬರೀ ಪರೀಕ್ಷೆಯಲ್ಲೇ ಬ್ಲಾಸ್ಟ್ ಆಗಿದೆ.
ಹೌದು, ಬಾಹ್ಯಾಕಾಶ ವಿಜ್ಞಾನ ಜಗತ್ತಿಗೆ ಇಂದು ಸಿಹಿ ಮತ್ತು ಕಹಿ ಎರಡೂ ಸಿಕ್ಕಂತಾಗಿದೆ. ಇತ್ತ ಭಾರತ ಯಶಸ್ವಿಯಾಗಿ ತನ್ನ 'ಚಂದ್ರಯಾನ-3' ಬಾಹ್ಯಾಕಾಶ ನೌಕೆ ಉಡಾಯಿಸಿದ್ದರೆ ಜಪಾನ್ ಮಾತ್ರ ಆಘಾತ ಎದರಿಸಿದೆ. ಜಪಾನ್ ಬಾಹ್ಯಾಕಾಶ ಸಂಸ್ಥೆಯ ರಾಕೆಟ್ ಎಂಜಿನ್ ಪರೀಕ್ಷೆ ಸಂದರ್ಭದಲ್ಲಿ ಬ್ಲಾಸ್ಟ್ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿದ ಜಪಾನ್‌ನ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಯಾವುದೇ ಹಾನಿ ಈ ಸ್ಫೋಟದಿಂದ ಉಂಟಾಗಿಲ್ಲ ಎಂದಿದ್ದಾರೆ. ಆದರೆ ಜಪಾನ್‌ಗೆ ಈ ರೀತಿ ಪದೇ ಪದೆ ಆಘಾತ ಎದುರಾಗುತ್ತಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

ಭಾರತ ರಾಕ್.. ಜಪಾನ್‌ಗೆ ಶಾಕ್!
ಅಂದಹಾಗೆ ಒಂದಾನೊಂದು ಕಾಲದಲ್ಲಿ ಜಪಾನ್ ಬಾಹ್ಯಾಕಾಶ ಲೋಕದ ಕಿಂಗ್ ಎಂಬಂತೆ ಮೆರೆದಿತ್ತು. ಅಮೆರಿಕದ ಜೊತೆ ಸೇರಿ ಹಲವು ಯೋಜನೆಗಳಿಗೂ ಕೈಹಾಕಿತ್ತು. ಆದರೆ ಕಳೆದ ಮಾರ್ಚ್‌ನಲ್ಲಿ ಅಲ್ಲದೆ ಜೂನ್ ತಿಂಗಳಲ್ಲೂ ಹೀಗೆ ದೊಡ್ಡ ಆಘಾತ ಎದುರಿಸಿತ್ತು ಜಪಾನ್. ಜಪಾನ್ ಬಾಹ್ಯಾಕಾಶ ಮಹತ್ವಾಕಾಂಕ್ಷೆ ಯೋಜನೆಗೆ ಸತತ ಹಿನ್ನಡೆಯಾಗುತ್ತಿದೆ. ಈಗ ಉತ್ತರ ಜಪಾನ್‌ನ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ ಏಜೆನ್ಸಿ ಟೆಸ್ಟಿಂಗ್ ಕೇಂದ್ರದಲ್ಲಿ ಎಪ್ಸಿಲಾನ್ ಎಸ್ ಎಂಬ ಎಂಜಿನ್ ಸ್ಪೋಟಗೊಂಡಿದೆ. ಈ ಮೂಲಕ ಪದೇ ಪದೆ ಸೋಲು ಕಾಣುವಂತಾಗಿದೆ. ಆದರೆ ಇದೇ ಸಮಯದಲ್ಲಿ ಭಾರತ ತನ್ನ ರಾಕೆಟ್ ಅನ್ನ ಯಶಸ್ವಿಯಾಗಿ ಉಡಾಯಿಸಿದೆ.
ಭಾರತ ಬಾಹ್ಯಾಕಾಶ ಲೋಕದ ಕಿಂಗ್!
ಅಷ್ಟಕ್ಕೂ ಇಂದು ಮಧ್ಯಾಹ್ನ ಸರಿಯಾಗಿ 2:35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ 'ಚಂದ್ರಯಾನ-3' ರಾಕೆಟ್ ಲಾಂಚ್ ಆಗಿ ಯಶಸ್ಸು ಕಂಡಿದೆ. 3900 ಕಿಲೋ ತೂಕವಿರುವ ಬಾಹ್ಯಾಕಾಶ ನೌಕೆ ಮತ್ತು ರೋವರ್ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿದೆ. ಭೂಮಿಯಿಂದ 3,84,000 ಕಿಲೋಮೀಟರ್ ದೂರದಲ್ಲಿರುವ ಚಂದ್ರನತ್ತ ಭಾರತದ ಯಾತ್ರೆ ಹೊರಟಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಯೋಜನೆ ಟಾರ್ಗೆಟ್. ಆದರೆ ಜಪಾನ್ ಮಾತ್ರ ಈ ವಿಚಾರದಲ್ಲಿ ದೊಡ್ಡ ಹಿನ್ನಡೆ ಅನುಭವಿಸುತ್ತಿದೆ.
ಚಂದ್ರನ ಮೇಲೆ ಭಾರತದ ಹೆಜ್ಜೆ
ಚಂದ್ರನ ಮೇಲೆ ನೀರು ಹುಡುಕುವ ಕೆಲಸ ಸೇರಿ, ಸಾಕಷ್ಟು ಅಧ್ಯಯನವನ್ನ ನಡೆಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಷ್ಟಕ್ಕೂ ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರಬಿಂದು ಚಂದ್ರ. ಹೀಗಾಗಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಇಸ್ರೋ ಈ ಎಲ್ಲಾ ಕುತೂಹಲಗಳಿಗೆ ಉತ್ತರವನ್ನು ಹುಡುಕಿ ಚಂದ್ರನತ್ತ ಹೊರಟಿದೆ. ಇನ್ನೇನು 'ಚಂದ್ರಯಾನ -3' ಕೆಲವೇ ತಿಂಗಳಲ್ಲಿ ತನ್ನ ಗುರಿ ತಲುಪಿ, ಚಂದ್ರನ ಮೇಲೆ ರೋವರ್ ಇಳಿಸಲಿದೆ. ಜಗತ್ತಿನಲ್ಲೇ ಮೊದಲ ಬಾರಿಗೆ 2008ರಲ್ಲಿ ಇಸ್ರೋ ಸಂಸ್ಥೆ ಚಂದ್ರನ ಮೇಲೆ ನೀರು ಪತ್ತೆ ಮಾಡಿತ್ತು. ಈಗ ಎಲ್ಲ ಪ್ರಶ್ನೆಗೂ ಚಂದ್ರನ ಮೇಲೆ ಇಳಿದು ಉತ್ತರ ಕಂಡುಕೊಳ್ಳಲಿದೆ.
ಹೀಗೆ ಭಾರತ ಇಡೀ ಜಗತ್ತಿನಲ್ಲೇ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ. ಅದರಲ್ಲೂ ಅಮೆರಿಕ ಹಾಗೂ ರಷ್ಯಾವನ್ನೂ ಮೀರಿಸಿ ಭಾರತ ಬಾಹ್ಯಾಕಾಶ ಲೋಕದಲ್ಲಿ ಸಾಧನೆ ಮಾಡುತ್ತಿದೆ. ಇದೇ ಹೊತ್ತಲ್ಲಿ ಜಪಾನ್ ಹಿನ್ನಡೆ ಅನುಭವಿಸಿದ್ದು ಬೇಸರದ ಸಂಗತಿ. ಭಾರತ ಈಗಿನ ನೌಕೆಯೂ ಸೇರಿ ಈವರೆಗೆ ಒಟ್ಟು 3 ಬಾಹ್ಯಾಕಾಶ ನೌಕೆಗಳನ್ನು ಚಂದ್ರನ ಅಧ್ಯಯನಕ್ಕಾಗಿ ಕಳುಹಿಸಿದೆ. 2019ರಲ್ಲಿ ರೋವರ್ ಇಳಿಸುವಾಗ ಸೋಲು ಕಂಡಿದ್ದ ಇಸ್ರೋ, ಗೆಲುವಿನ ಮೂಲಕ ಈಗ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.












Click it and Unblock the Notifications