ಜನ್ ಲೋಕಪಾಲ ಮಸೂದೆಗಾಗಿ ಅಣ್ಣಾ ಮತ್ತೆ ನಿರಶನ

ಜನಲೋಕಪಾಲ ವಿಧೇಯಕ ಜಾರಿ ಕುರಿತು ನೀಡಿದ್ದ ಭರವಸೆಗಳನ್ನು ಈಡೇರಿಸದ ಕೇಂದ್ರ ಮೋಸ ಮಾಡಿದೆ ಎಂದು ಅಣ್ಣಾ ಹಜಾರೆ ದೂರಿದ್ದಾರೆ. ಗ್ರಾಮದ ಯಡವ್ಬದ ದೇಗುಲದ ಬಳಿ ಜನತಂತ್ರ ಮೋರ್ಚಾ ಬ್ಯಾನರ್ ಅಡಿಯಲ್ಲಿ ಅಣ್ಣಾ ಅವರು ನಿರಶನ ಕೂತಿದ್ದಾರೆ.
ಕೋಮು ಹಿಂಸಾಚಾರ ತಡೆ ವಿಧೇಯಕ ಜಾರಿಗೊಳಿಸುವುದಾಗಿ ಪ್ರತಿಜ್ಞೆ ಮಾಡುವ ಪ್ರಧಾನಿ ಮನಮೋಹನ್ ಸಿಂಗ್, ಭ್ರಷ್ಟಾಚಾರ ತಡೆ ಕಾನೂನು ಜಾರಿಗೆ ಏಕೆ ಮುಂದಾಗುವುದಿಲ್ಲ. ಮಸೂದೆ ಮಂಡನೆ ಮಾಡುವ ಸುಬುದ್ಧಿ ನೀಡಲಿ ಎಂದು ಬೆಳಗ್ಗೆ ದೇವರನ್ನು ಪ್ರಾರ್ಥಿಸಿದೆ ಎಂದು ಅಣ್ಣಾ ಹೇಳಿದ್ದಾರೆ.
'ಜನಲೋಕಪಾಲ್ ವಿಧೇಯಕ ಜಾರಿಗೆ ಸರ್ಕಾರ ಸಿದ್ಧವಾಗಿದೆ. ದಯವಿಟ್ಟು ನಿರಶನ ನಿಲ್ಲಿಸಿ' ಎಂದು ದಿಲ್ಲಿಯಲ್ಲಿ ನಿರಶನ ನಡೆಸಿದ್ದ ವೇಳೆ ಸೋನಿಯಾ ಗಾಂಧಿ ಪತ್ರ ಬರೆದ್ದಿರು. ಅವರ ಮಾತನ್ನು ನಂಬಿ ನಿರಶನ ಕೈ ಬಿಟ್ಟೆ. ಯುಪಿಎ ಸರಕಾರ ನನಗೆ ಹಾಗೂ ಜನತೆಗೆ ಈ ರೀತಿ ಮೋಸ ಮಾಡುತ್ತದೆ ಎಂದು ತಿಳಿದಿರಲಿಲ್ಲ ಎಂದು ಹೇಳಿದರು.
"ಲೋಕಸಭೆಯ ಅಂಗೀಕಾರ ಪಡೆದ ನಂತರ ವಿಧೇಯಕ ಒಂದು ವರ್ಷದಿಂದ ರಾಜ್ಯ ಸಭೆಯಲ್ಲಿ ಉಳಿದಿದೆ. ಈ ಕುರಿತು ಚರ್ಚೆ ನಡೆಯಬೇಕಿದ್ದು, ಅಲ್ಲಿ 71 ಕಾಂಗ್ರೆಸ್ ಸಂಸದರಿದ್ದಾರೆ. ವರ್ಷಗಳು ಉರುಳುತ್ತಿವೆ ಆದರೆ ವಿಧೇಯಕ ಅಲ್ಲೇ ಬಾಕಿಯಾಗಿದೆ. ಹಾಗಾಗಿ ನಿರಶನ ನಡೆಸುವುದು ಅನಿವಾರ್ಯ" ಎಂದು ನಿಲುವನ್ನು ಸಮರ್ಥಿಸಿಕೊಂಡರು.
''ಒಂದು ವೇಳೆ ಸರಕಾರ ಜನಲೋಕಪಾಲ ವಿಧೇಯಕವನ್ನು ಅಂಗೀಕರಿಸದಿದ್ದರೆ, ಚಳಿಗಾಲದ ಅಧಿವೇಶನದ ಮೊದಲ ದಿನದಿಂದಲೇ ರಾಮ್ ಲೀಲಾ ಮೈದಾನದಲ್ಲಿ ನಿರಶನ ನಡೆಸುವುದಾಗಿ ದೇಶದ ಜನತೆಗೆ ಆಶ್ವಾಸನೆ ನೀಡಿದ್ದೆ. ಆದರೆ ಆರೋಗ್ಯ ಸರಿಯಿಲ್ಲದ ಕಾರಣ ವೈದ್ಯರ ಸಲಹೆ ಮೇರೆಗೆ ನಿರಶನದ ಸ್ಥಳ ಬದಲಾಗಿದೆ. ಸ್ವಗ್ರಾಮದಲ್ಲೇ ಅನಿರ್ದಿಷ್ಟಾವಧಿ ನಿರಶನ ನಡೆಸುತ್ತೇನೆ" ಎಂದು ಪಿಟಿಐಗೆ ಅಣ್ಣಾ ತಿಳಿಸಿದ್ದಾರೆ.












Click it and Unblock the Notifications