Jammu And Kashmir Elections: ಈ ಚುನಾವಣೆ ಆ 3 ಕುಟುಂಬದ ಆಡಳಿತವನ್ನು ಕೊನೆಗೊಳಿಸಲಿದೆ: ಅಮಿತ್ ಶಾ ಕಿಡಿ
ನವದೆಹಲಿ, ಸೆಪ್ಟೆಂಬರ್ 23: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳು ತಮ್ಮ ಆಡಳಿತವನ್ನು ಕೊನೆಗೊಳಿಸಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಈ ಚುನಾವಣೆಯು ಅಬ್ದುಲ್ಲಾ ಕುಟುಂಬ, ಮುಫ್ತಿ ಕುಟುಂಬ ಮತ್ತು ನೆಹರು-ಗಾಂಧಿ ಕುಟುಂಬಗಳ ಆಡಳಿತವನ್ನು ಕೊನೆಗೊಳಿಸಲಿದೆ . ಈ ಮೂರು ಕುಟುಂಬಗಳು ಇಲ್ಲಿ ಪ್ರಜಾಪ್ರಭುತ್ವಕ್ಕೆ ಅಡ್ಡಿಯಾಗಿರುವುದರಿಂದ ಇದು ಅವಶ್ಯಕವಾಗಿದೆ ಎಂದು ಅವರು ಜಮ್ಮು ಮತ್ತು ಕಾಶ್ಮೀರದ ಮೆಂಧರ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಹೇಳಿದರು.

ಮೂರು ಪಕ್ಷಗಳು 1990 ರಿಂದ ಇಲ್ಲಿಯವರೆಗೆ ಭಯೋತ್ಪಾದನೆಯನ್ನು ಹರಡುತ್ತಿವೆ ಎಂದು ಆರೋಪಿಸಿದರು. ಕಣಿವೆಯಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸಿರುವ ಮೋದಿ ನೇತೃತ್ವದ ಸರ್ಕಾರವನ್ನು ಶ್ಲಾಘಿಸಿದ ಅವರು, 'ಇಲ್ಲಿನ ಯುವಕರಿಗೆ ಕಲ್ಲುಗಳ ಬದಲು ಲ್ಯಾಪ್‌ಟಾಪ್ ನೀಡಲಾಗಿದೆ' ಎಂದರು.
ಒಂದು ವೇಳೆ 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರದೇ ಇರುತ್ತಿದ್ದರೆ ಆಗ ಪಂಚಾಯಿತಿ, ಬ್ಲಾಕ್ ಮತ್ತು ಜಿಲ್ಲಾ ಚುನಾವಣೆಗಳು ನಡೆಯುತ್ತಿರಲಿಲ್ಲ. ಈ ಮೂರು ಕುಟುಂಬಗಳು ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಿದ್ದವು ಎಂದು ಅಮಿತ್ ಶಾ ಹೇಳಿದ್ದಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಒಬಿಸಿ, ಹಿಂದುಳಿದ ವರ್ಗಗಳು, ಗುಜ್ಜರ್ ಬಕರ್ವಾಲ್ ಮತ್ತು ಪಹಾರಿಗಳಿಗೆ ಮೀಸಲಾತಿ ಸಿಕ್ಕಿತು ಎಂದಿದ್ದಾರೆ.












Click it and Unblock the Notifications