ಸುಮಿತ್ರಾ ಮಹಾಜನ್ 16ನೇ ಲೋಕಸಭೆ ಸ್ಪೀಕರ್
ನವದೆಹಲಿ, ಜೂ.5: ಬಿಜೆಪಿ ಹಿರಿಯ ನಾಯಕಿ,ಅನುಭವಿ ಸಂಸದೀಯಪಟು ಸುಮಿತ್ರಾ ಮಹಾಜನ್ ಅವರು ಲೋಕಸಭೆಯ ಸಭಾಧ್ಯಕ್ಷರಾಗಲಿದ್ದಾರೆ(ಸ್ಪೀಕರ್). ಈ ಬಗ್ಗೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಸುಮಿತ್ರಾ ಅವರಿಗೆ ಸೂಚನೆ ನೀಡಿದ್ದಾರೆ.
ಸುಮಿತ್ರಾ ಅವರು 1989ರಿಂದ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಿಂದ ನಿರಂತರವಾಗಿ ಆಯ್ಕೆಯಾಗುತ್ತಿದ್ದಾರೆ. ಅವರು ಸ್ಪೀಕರ್ ಆದರೆ ಈ ಸ್ಥಾನಕ್ಕೆ ಏರಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಮೀರಾಕುಮಾರ್ ಸಭಾಧ್ಯಕ್ಷರಾಗಿದ್ದರು.
71 ವರ್ಷದ ಸುಮಿತ್ರಾ ಮಹಾಜನ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ 1999 ರಿಂದ 2004 ರ ತನಕ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು.

ಬುಧವಾರದಿಂದ ಆರಂಭವಾಗಿರುವ 16ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಶುಕ್ರವಾರ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಬಿಜೆಪಿ ತನ್ನ ಅಭ್ಯರ್ಥಿಯಾಗಿ ಸುಮಿತ್ರಾ ಮಹಾಜನ್ ಅವರ ಹೆಸರನ್ನು ಘೋಷಣೆ ಮಾಡಿದೆ.
ಕಾಂಗ್ರೆಸ್ ಪಕ್ಷದ ಕಮಲ ನಾಥ್ ರಾಷ್ಟ್ರಪತಿ ಭವನದಲ್ಲಿ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಲೋಕಸಭೆ ಅಧಿವೇಶನ ಸಮಾವೇಶ ಕೆಲ ಕಾಲ ನಡೆದು, ಮುಂಡೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಬಳಿಕ ಕಲಾಪ ಮುಂದೂಡಲಾಯಿತು. ಕಾಯಂ ಸ್ಪೀಕರ್ ನೇಮಕವಾಗುವ ತನಕ ಹಂಗಾಮಿ ಸ್ಪೀಕರ್ ಕಲಾಪವನ್ನು ನಿರ್ವಹಿಸುತ್ತಾರೆ.

543 ನೂತನ ಸಂಸದರು ಎರಡು ದಿನಗಳೊಳಗೆ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದು, ಗುರುವಾರವೇ ಇದನ್ನು ಪೂರ್ಣಗೊಳಿಸಲು ಸರ್ಕಾರ ತ್ವರಿತ ಗತಿಯ ಪ್ರಕ್ರಿಯೆಗೆ ಯತ್ನಿಸಿದೆ. ಸೋಮವಾರ ಜೂನ್ 9ರಂದು ರಾಷ್ಟ್ರಪತಿ ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.












Click it and Unblock the Notifications