ISRO: ಕೃತಕ ಗ್ರಹಣ ಸೃಷ್ಟಿಯ ಚಮತ್ಕಾರ: ಇಎಸ್ಎಯ ಪ್ರೋಬಾ-3 ಉಡಾವಣೆಗೊಳಿಸಲಿದೆ ಇಸ್ರೋ
ಅತ್ಯಂತ ನಿಖರವಾದ ಸಂರಚಿತ ಹಾರಾಟವನ್ನು (ಫಾರ್ಮೇಶನ್ ಫ್ಲೈಯಿಂಗ್) ನಡೆಸುವ ಮೂಲಕ, ಕೃತಕ ಸೂರ್ಯ ಗ್ರಹಣಗಳನ್ನು ಸೃಷ್ಟಿಸುವ ಇಎಸ್ಎಯ ಮಹತ್ವಾಕಾಂಕ್ಷಿ, ಐತಿಹಾಸಿಕ ಪ್ರೋಬಾ-3 ಯೋಜನೆ ಉಡಾವಣೆಗೆ ಬಹುತೇಕ ಸಿದ್ಧವಾಗಿದೆ. ಪ್ರೋಬಾ-3 ಡಿಸೆಂಬರ್ 4, ಬುಧವಾರದಂದು ಭಾರತೀಯ ಕಾಲಮಾನ ಸಂಜೆ 4:08ಕ್ಕೆ ಬಾಹ್ಯಾಕಾಶಕ್ಕೆ ನೆಗೆಯಲಿದೆ. ಭಾರತದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಪಿಎಸ್ಎಲ್‌ವಿ-ಎಕ್ಸ್ಎಲ್ ರಾಕೆಟ್ ಮೂಲಕ ಈ ಪ್ರೋಬಾ-3 ಉಡಾವಣೆಗೊಳ್ಳಲಿದೆ. ಈ ಯೋಜನೆ ಭಾರತದ ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಪ್ರದರ್ಶಿಸಿ, ವಿಜ್ಞಾನಿಗಳಿಗೆ ಸೂರ್ಯನನ್ನು ಹೊಸ ರೀತಿಯಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಿದೆ.
ಈ ಉಪಗ್ರಹ ಉಡಾವಣೆಗೊಂಡ 18 ನಿಮಿಷಗಳ ಬಳಿಕ ರಾಕೆಟ್‌ನಿಂದ ಬೇರ್ಪಡಲಿದೆ. ಅದಾಗಿ ಅಂದಾಜು 15 ನಿಮಿಷಗಳ ಬಳಿಕ, ಬೆಲ್ಜಿಯಂನ ರೆಡುವಿನಲ್ಲಿರುವ ಇಎಸ್ಎಯ ಯುರೋಪಿಯನ್ ಸ್ಪೇಸ್ ಸೆಕ್ಯುರಿಟಿ ಆ್ಯಂಡ್ ಎಜುಕೇಶನ್ ಸೆಂಟರ್ (ಇಎಸ್ಇಸಿ) ಹಾರಾಟ ನಿಯಂತ್ರಣ ತಂಡ ಉಪಗ್ರಹದಿಂದ ಮೊದಲ ಸಂದೇಶಗಳನ್ನು ಪಡೆಯಲಿದೆ.

ಇಎಸ್ಎಯ ಕಕ್ಷೀಯ ಪ್ರದರ್ಶಕ ಯೋಜನಾ ಸರಣಿಯ ನೂತನ ಯೋಜನೆಯಾಗಿರುವ ಪ್ರೋಬಾ-3ಯಲ್ಲಿ ಎರಡು ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆಗೊಳಿಸಲಾಗುತ್ತದೆ. ಒಂದು ಬಾರಿ ಬಾಹ್ಯಾಕಾಶಕ್ಕೆ ತಲುಪಿದ ಬಳಿಕ, ಅವೆರಡು ಉಪಗ್ರಹಗಳು ಪ್ರತ್ಯೇಕಗೊಂಡು, ಅತ್ಯಂತ ನಿಖರವಾದ ಸಂರಚನಾ ಹಾರಾಟವನ್ನು ನಡೆಸಿ, ಜೊತೆಯಾಗಿ ಕಾರ್ಯಾಚರಣೆ ನಡೆಸಲಿವೆ. ಅವುಗಳ ಹಾರಾಟ ವಿನ್ಯಾಸ ಎಷ್ಟು ನಿಖರವಾಗಿರಲಿದೆ ಎಂದರೆ, ಅವುಗಳು ತಮ್ಮ ಸ್ಥಾನದಿಂದ ಒಂದು ಮಿಲಿಮೀಟರ್ ಸಹ ಆಚೀಚೆ ತೆರಳುವುದಿಲ್ಲ. ಇಂತಹ ಉನ್ನತ ಮಟ್ಟದ ನಿಖರತೆಯ ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಪ್ರದರ್ಶಿಸಿ, ಭವಿಷ್ಯದ ಯೋಜನೆಗಳಿಗೆ ಹೊಸ ಹಾದಿ ತೋರಲಿದೆ.
ಪ್ರೋಬಾ-3 ಯೋಜನೆಯನ್ನು ಅದರ ಸಾಮರ್ಥ್ಯಗಳನ್ನು ಪರಿಶೀಲಿಸುವ ಸಲುವಾಗಿ ವಿಶೇಷ ವೈಜ್ಞಾನಿಕ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರೋಬಾ-3ರ ಎರಡು ಉಪಗ್ರಹಗಳು ಬಾಹ್ಯಾಕಾಶದಲ್ಲಿ ಪರಸ್ಪರ ಕೇವಲ 150 ಮೀಟರ್ ದೂರದಲ್ಲಿದ್ದು, ಸೂರ್ಯನಿಗೆ ಸರಿಯಾಗಿ ಹೊಂದಿಕೊಂಡಿರುತ್ತವೆ. ಒಂದು ಉಪಗ್ರಹ ಸೂರ್ಯನ ಪ್ರಖರ ಬೆಳಕನ್ನು ಅಡ್ಡಗಟ್ಟಿ, ಇನ್ನೊಂದು ಉಪಗ್ರಹದ ಮೇಲೆ ಅತ್ಯಂತ ಜಾಗರೂಕವಾಗಿ ನಿಯಂತ್ರಿಸಲ್ಪಡುವ ನೆರಳನ್ನು ಉಂಟುಮಾಡುತ್ತದೆ. ಈ ವ್ಯವಸ್ಥೆ ವಿಜ್ಞಾನಿಗಳಿಗೆ ಸೂರ್ಯನ ಹೊರಮೈಯ ವಾತಾವರಣವನ್ನು ಜಾಗರೂಕವಾಗಿ ಅಧ್ಯಯನ ನಡೆಸಿ, ಆಧುನಿಕ ತಂತ್ರಜ್ಞಾನದಲ್ಲಿ ಪ್ರೋಬಾ-3ರ ಸಾಮರ್ಥ್ಯವನ್ನು ಪ್ರದರ್ಶಿಸಲು ನೆರವಾಗುತ್ತದೆ.
ಪ್ರೋಬಾ-3ರ ಒಕಲ್ಟರ್ ಉಪಗ್ರಹ ಸೂರ್ಯನ ಪ್ರಖರ ಮೇಲ್ಮೈಯನ್ನು ತಡೆಗಟ್ಟುತ್ತದೆ. ಇದು ಭೂಮಿಯ ಮೇಲೆ ಸಂಪೂರ್ಣ ಸೂರ್ಯ ಗ್ರಹಣದ ಸಂದರ್ಭದ ಚಿತ್ರಣದಂತೆ ತೋರುತ್ತದೆ. ಇದು ವಿಜ್ಞಾನಿಗಳಿಗೆ ಕೊರೋನಾ ಎಂದು ಕರೆಯಲ್ಪಡುವ, ಸೂರ್ಯನ ದೃಗ್ಗೋಚರ ಪ್ರದೇಶದಿಂದ ಮಿಲಿಯನ್ ಪಟ್ಟು ಮಬ್ಬಾಗಿರುವ ಸೂರ್ಯನ ಮಸುಕಾದ ಹೊರ ವಾತಾವರಣವನ್ನು ನೋಡಿ, ಅಧ್ಯಯನ ಮಾಡಲು ಅವಕಾಶ ನೀಡುತ್ತದೆ. ಈ ವಿಶೇಷ ವ್ಯವಸ್ಥೆ, ಸಾಮಾನ್ಯವಾಗಿ ಸೂರ್ಯನ ಪ್ರಖರ ಬೆಳಕಿನಿಂದಾಗಿ ಬಚ್ಚಿಟ್ಟುಕೊಂಡಿರುವ ಕೊರೋನಾವನ್ನು ವಿಸ್ತೃತವಾಗಿ ಗಮನಿಸಲು ನೆರವಾಗುತ್ತದೆ.

ಪ್ರೋಬಾ-3ರ ಎರಡನೇ ಉಪಗ್ರಹವಾದ 'ಕೊರೋನಾಗ್ರಾಫ್' ಒಂದು ವಿಶೇಷ ವೈಜ್ಞಾನಿಕ ದೂರದರ್ಶಕವನ್ನು (ಟೆಲಿಸ್ಕೋಪ್) ಹೊಂದಿರುತ್ತದೆ. ಈ ದೂರದರ್ಶಕ ಸೂರ್ಯನ ಹೊರ ವಾತಾವರಣವಾದ ಕೊರೋನಾವನ್ನು ಅಧ್ಯಯನ ನಡೆಸಲಿದೆ. ಭೂಮಿಯಲ್ಲಿ ಸಾಮಾನ್ಯವಾಗಿ ಸಂಪೂರ್ಣ ಸೂರ್ಯ ಗ್ರಹಣಗಳು ಅಂದಾಜು 18 ತಿಂಗಳುಗಳಿಗೊಮ್ಮೆ ನಡೆಯುತ್ತದೆ. ಈ ಗ್ರಹಣಗಳು ಕೇವಲ ಕೆಲವು ನಿಮಿಷಗಳ ಕಾಲ ಮಾತ್ರವೇ ಕಾಣಿಸಿಕೊಳ್ಳುತ್ತವೆ.
ಪ್ರೋಬಾ-3 ವಿಜ್ಞಾನಿಗಳಿಗೆ ಸೂರ್ಯನ ಹೊರಮೈ ವಾತಾವರಣವಾದ ಕೊರೋನಾವನ್ನು ಸೂರ್ಯನ ಅಂಚಿನಿಂದ 1.1 ಸೌರ ತ್ರಿಜ್ಯದಷ್ಟು ಬಹಳಷ್ಟು ಹತ್ತಿರದಿಂದ ಅಧ್ಯಯನ ಮಾಡಲು ಸಾಧ್ಯವಾಗಿಸುತ್ತದೆ.
ಸರಳವಾಗಿ ಹೇಳುವುದಾದರೆ, ಸೂರ್ಯನ ತ್ರಿಜ್ಯ ಎನ್ನುವುದು ಸೂರ್ಯನ ಕೇಂದ್ರದಿಂದ ಸೂರ್ಯನ ಮೇಲ್ಮೈಗೆ ಇರುವ ಅಂತರವಾಗಿದೆ. ಉದಾಹರಣೆಗೆ, ಸೂರ್ಯನ ತ್ರಿಜ್ಯವನ್ನು 'x' ಎಂದು ಗುರುತಿಸಿದರೆ, 1.1 ಸೌರ ತ್ರಿಜ್ಯದಿಂದ ವೀಕ್ಷಿಸುವುದು ಎಂದರೆ, ಪ್ರೋಬಾ-3 ಕೊರೋನಾವನ್ನು ಸೂರ್ಯನ ಕೇಂದ್ರದಿಂದ 1.1x ದೂರದಿಂದ ವೀಕ್ಷಿಸುತ್ತದೆ. ಇದು ಸೂರ್ಯನ ಮೇಲ್ಮೈಯಿಂದ ಕೇವಲ 10% ದೂರದಲ್ಲಿದ್ದು, ವಿಜ್ಞಾನಿಗಳಿಗೆ ಸೂರ್ಯನ ಹೊರಗಿನ ಮಬ್ಬು ವಾತಾವರಣವಾದ ಕೊರೋನಾವನ್ನು ಹಿಂದೆಂದಿಗಿಂತಲೂ ಹೆಚ್ಚು ವಿಷದವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ.

ಹಿಂದೆಂದೂ ಭೂಮಿಯಿಂದ ಅಥವಾ ಬಾಹ್ಯಾಕಾಶದಿಂದ, ಯಾವುದೇ ದೂರದರ್ಶಕ ಅಥವಾ ವೈಜ್ಞಾನಿಕ ಉಪಕರಣಗಳು ವೀಕ್ಷಿಸಿರದಷ್ಟು ಹತ್ತಿರದಿಂದ ಸೂರ್ಯನ ಹೊರಮೈಯಾದ ಕೊರೋನಾವನ್ನು ವೀಕ್ಷಿಸಲು ಪ್ರೋಬಾ-3ಗೆ ಸಾಧ್ಯವಾಗುತ್ತದೆ.
ಪ್ರೋಬಾ-3 ಯೋಜನೆ ಭೂಮಿಯ ಸುತ್ತಲಿನ ಪ್ರತಿಯೊಂದು ಪ್ರದಕ್ಷಿಣೆಯ ಸಂದರ್ಭದಲ್ಲಿ ಆರು ಗಂಟೆಗಳ ಅವಧಿಯ ಕೃತಕ ಸೂರ್ಯ ಗ್ರಹಣವನ್ನು ಸೃಷ್ಟಿಸುತ್ತದೆ. ಭೂಮಿಯ ಸುತ್ತಲೂ ಒಂದು ಪರಿಭ್ರಮಣೆ ನಡೆಸಲು ಪ್ರೋಬಾ-3 19 ಗಂಟೆ 36 ನಿಮಿಷ ತೆಗೆದುಕೊಳ್ಳುತ್ತದೆ.
ಪ್ರೋಬಾ-3 ಎರಡು ಉಪಗ್ರಹಗಳನ್ನು ಸನಿಹಕ್ಕೆ ಒಯ್ಯುವುದು, ದೂರಕ್ಕೆ ಕೊಂಡೊಯ್ಯುವುದು, ಅವುಗಳ ಅಂತರವನ್ನು ಬದಲಾಯಿಸುವುದು, ಅಥವಾ ಅವುಗಳ ದಿಕ್ಕನ್ನು ಸರಿಹೊಂದಿಸುವುದು ಸೇರಿದಂತೆ, ವಿವಿಧ ರೀತಿಯ ಸಂರಚನಾ ಹಾರಾಟ ವಿನ್ಯಾಸಗಳನ್ನು ನಡೆಸಲಿದೆ. ಅದರೊಡನೆ, ಇದು ಬಾಹ್ಯಾಕಾಶದಲ್ಲಿ ಎರಡು ಬಾಹ್ಯಾಕಾಶ ನೌಕೆಗಳನ್ನು ಅತ್ಯಂತ ಸನಿಹಕ್ಕೆ ತರುವ ತಂತ್ರಗಳನ್ನೂ ಪರೀಕ್ಷಿಸಲಿದೆ. ಈ ಪ್ರಯೋಗಗಳು ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಆಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ನೆರವಾಗಲಿವೆ.
ಪ್ರೋಬಾ-3 ಯೋಜನೆ ಇವೆರಡು ಉಪಗ್ರಹಗಳನ್ನು ಅತ್ಯಂತ ನಿಖರವಾಗಿ, ಒಂದಕ್ಕೊಂದು ಬಹಳ ಸನಿಹಕ್ಕೆ ತಂದು, ಅವೆರಡನ್ನೂ 150 ಮೀಟರ್ ಅಗಲವಿರುವ ಒಂದೇ ಬಾಹ್ಯಾಕಾಶ ನೌಕೆಯಂತೆ ಕಾರ್ಯಾಚರಿಸುವ ಉದ್ದೇಶ ಹೊಂದಿದೆ. ಇದು ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳಲು ಒಂದು ಹೊಸ ಮಾರ್ಗವನ್ನು ಪ್ರದರ್ಶಿಸಲಿದೆ. ಅಂದರೆ, ಬೇರೆ ಬೇರೆ ಉಪಕರಣಗಳು, ಬಿಡಿಭಾಗಗಳು ಕೇವಲ ಒಂದೇ ಉಪಗ್ರಹದಲ್ಲಿ ಇರುವಂತೆ ತುಂಬಿಸುವ ಬದಲು, ವಿವಿಧ ಉಪಗ್ರಹಗಳಲ್ಲಿ ಬಾಹ್ಯಾಕಾಶದಾದ್ಯಂತ ಹರಡಿಕೊಳ್ಳುವಂತೆ ಮಾಡುವುದು ಈ ವಿಧಾನವಾಗಿದೆ. ಈ ವಿಧಾನ ಭವಿಷ್ಯದ ಯೋಜನೆಗಳು ಹೆಚ್ಚು ಪರಿಣಾಮಕಾರಿ ಮತ್ತು ಸಮರ್ಥವಾಗುವಂತೆ ಮಾಡಬಲ್ಲದು.
ಈ ಯೋಜನೆಗಾಗಿ ಭಾರತದ ನಾಲ್ಕು ಹಂತಗಳ ಪಿಎಸ್ಎಲ್‌ವಿ-ಎಕ್ಸ್ಎಲ್ ರಾಕೆಟ್ ಅನ್ನು ಆಯ್ಕೆ ಮಾಡಲಾಗಿದೆ. ಏಕೆಂದರೆ, ಈ ರಾಕೆಟ್ ಕಡಿಮೆ ಬೆಲೆಗೆ ಹೆಚ್ಚು ಉತ್ತಮವಾದ ಉಡಾವಣಾ ಸೇವೆಯನ್ನು ಒದಗಿಸುತ್ತದೆ. ಆದ್ದರಿಂದ, ಕಡಿಮೆ ಬಜೆಟ್ ಹೊಂದಿರುವ ಬಾಹ್ಯಾಕಾಶ ತಂತ್ರಜ್ಞಾನ ಪರೀಕ್ಷಾ ಯೋಜನೆಗಳಿಗೆ ಈ ರಾಕೆಟ್ ಉತ್ತಮ ಆಯ್ಕೆಯಾಗಿದೆ.
ಪ್ರೋಬಾ-3 ಯೋಜನೆ ಅತ್ಯಂತ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಭೂಮಿಯ ಸುತ್ತಲೂ ಪರಿಭ್ರಮಣೆ ನಡೆಸಲಿದೆ. ಈ ಕಕ್ಷೆಯ ಭೂಮಿಯಿಂದ ಅತ್ಯಂತ ದೂರದ ಬಿಂದು (ಅಪೊಜೀ) 60,530 ಕಿಲೋಮೀಟರ್‌ಗೂ ಹೆಚ್ಚು ದೂರದಲ್ಲಿದ್ದು, ಭೂಮಿಗೆ ಅತ್ಯಂತ ಸನಿಹದ ಬಿಂದು (ಪೆರಿಜೀ) 600 ಕಿಲೋಮೀಟರ್ ದೂರದಲ್ಲಿದೆ. ಇದು ಭೂಮಿಯೆಡೆಗೆ 59 ಡಿಗ್ರಿ ವಾಲಿಕೊಂಡಿದೆ. ಮುಖ್ಯವಾದ ಸಂರಚನಾ ಹಾರಾಟಗಳು ಭೂಮಿಯಿಂದ ಅತ್ಯಂತ ದೂರದಲ್ಲಿರುವ ಬಿಂದುವಿನಲ್ಲಿ ನಡೆಯಲಿವೆ. ಯಾಕೆಂದರೆ, ಇಷ್ಟೊಂದು ದೂರದಲ್ಲಿ, ಭೂಮಿಯ ಗುರುತ್ವಾಕರ್ಷಣೆಯ ಪರಿಣಾಮಗಳು ದುರ್ಬಲವಾಗಿದ್ದು, ಇದು ಉಪಗ್ರಹಗಳ ಸ್ಥಾನವನ್ನು ಹೊಂದಿಸಲು ಸುಲಭವೂ, ಇಂಧನ ದಕ್ಷವೂ ಆಗಿದೆ. ಈ ವ್ಯವಸ್ಥೆ ಇಂಧನ ಉಳಿತಾಯ ಮಾಡಿ, ಯೋಜನೆ ಸುಲಭವಾಗಿ ಕಾರ್ಯಾಚರಿಸುವಂತೆ ಮಾಡುತ್ತದೆ.
ಈ ಯೋಜನೆಯ ಮೂಲಕ, ಇಎಸ್ಎ ಕಳೆದ 20ಕ್ಕೂ ಹೆಚ್ಚು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಪಗ್ರಹ ಉಡಾವಣೆಗೆ ಇಸ್ರೋದ ರಾಕೆಟ್ ಅನ್ನು ಬಳಸಿಕೊಳ್ಳುತ್ತಿದೆ. ಈ ಹಿಂದೆ, 2001ರಲ್ಲಿ ಇಎಸ್ಎಯ ಪ್ರೋಬಾ-1 ಉಪಗ್ರಹವನ್ನು (ಪ್ರಾಜೆಕ್ಟ್ ಫಾರ್ ಆನ್ ಬೋರ್ಡ್ ಅಟಾನಮಿ ಎಂಬುದರ ಹೃಸ್ವರೂಪ) ಇಸ್ರೋದ ಪಿಎಸ್ಎಲ್‌ವಿ ರಾಕೆಟ್ ಬಳಸಿ ಉಡಾವಣೆಗೊಳಿಸಲಾಗಿತ್ತು. ಪ್ರೋಬಾ-1 ಎನ್ನುವುದು ಒಂದು ಭೂ ವೀಕ್ಷಣಾ ಯೋಜನೆಯಾಗಿದ್ದು, ಹೊಸ ಬಾಹ್ಯಾಕಾಶ ತಂತ್ರಜ್ಞಾನವನ್ನು ಪರೀಕ್ಷಿಸಲು ವಿನ್ಯಾಸಗೊಂಡಿತ್ತು. ಪ್ರೋಬಾ-3ರ ಉಡಾವಣೆ ಆಧುನಿಕ ಬಾಹ್ಯಾಕಾಶ ಯೋಜನೆಗಳ ಜಾರಿಯಲ್ಲಿ ಇಎಸ್ಎ ಮತ್ತು ಇಸ್ರೋಗಳ ಜಂಟಿ ಸಹಯೋಗ ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿದೆ.
ಪ್ರೋಬಾ ಯೋಜನೆಗಳು ಬಾಹ್ಯಾಕಾಶ ಪ್ರಾಯೋಗಿಕ ಯೋಜನಾ ಸರಣಿಯಾಗಿದೆ. 'ಪ್ರೋಬಾ' ಎಂಬ ಹೆಸರು ಲ್ಯಾಟಿನ್ ಭಾಷೆಯಿಂದ ಬಂದಿದ್ದು, 'ನಾವು ಪ್ರಯತ್ನ ಪಡೋಣ' ಎಂಬ ಅರ್ಥ ಹೊಂದಿದೆ. ಈ ಸರಣಿ ಪ್ರೋಬಾ-1ರಿಂದ ಆರಂಭಗೊಂಡಿದ್ದು, ಆ ಬಳಿಕ 2009ರಲ್ಲಿ ಸೂರ್ಯನ ಅಧ್ಯಯನ ನಡೆಸಲು ಗಮನ ಹರಿಸಿದ್ದ ಪ್ರೋಬಾ-2 ಉಡಾವಣೆಗೊಂಡಿತು. ಬಳಿಕ 2013ರಲ್ಲಿ ಪ್ರೋಬಾ-ವಿ (ವಿ ಎಂದರೆ ವೆಜಿಟೇಷನ್ ಎಂಬುದರ ಹೃಸ್ವರೂಪ) ಅನ್ನು ಭೂಮಿಯನ್ನು ವೀಕ್ಷಿಸಲು ಮತ್ತು ವಿಶಾಲ ಪ್ರದೇಶಗಳಲ್ಲಿ ಸಸ್ಯಗಳ ಬೆಳವಣಿಗೆಯನ್ನು ಗಮನಿಸಲು ಉಡಾವಣೆಗೊಳಿಸಲಾಗಿತ್ತು. ಪ್ರೋಬಾ ಸರಣಿಯ ಪ್ರತಿಯೊಂದು ಯೋಜನೆಯನ್ನೂ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಲು ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ನೆರವು ನೀಡಲು ಕೈಗೊಳ್ಳಲಾಗಿತ್ತು.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications