Chandrayaan-3: ಭಾರತದ ಇಸ್ರೋ ಮತ್ತೊಂದು ಉಡಾವಣೆಯಲ್ಲಿ ಯಶಸ್ವಿ!
ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ್ದೇ ಪವರ್ ಭಾರತದ್ದೇ ಖದರ್. ಅದ್ರಲ್ಲೂ 'ಚಂದ್ರಯಾನ-3' ಯಶಸ್ವಿ ಉಡಾವಣೆ ಬಳಿಕ ಇಸ್ರೋ ಹಾಗೂ ಭಾರತದ ಹೆಸರು ಇಡೀ ಬಾಹ್ಯಾಕಾಶ ಕ್ಷೇತ್ರದಲ್ಲಿ ರಾರಾಜಿಸಿದೆ. ಈ ಸಮಯದಲ್ಲೇ 'ಇಸ್ರೋ' ಸಂಸ್ಥೆ ಮತ್ತೊಂದು ಉಡಾವಣೆಯಲ್ಲೂ ಯಶಸ್ವಿಯಾಗಿದ್ದು, ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಹೌದು, 'ಚಂದ್ರಯಾನ-3' ಬಳಿಕ ಮತ್ತೊಂದು ಮಹತ್ವದ ಪ್ರಾಜೆಕ್ಟ್‌ಗೆ ಇಸ್ರೋ ಸಂಸ್ಥೆಯು ಸಿದ್ಧತೆ ಆರಂಭಿಸಿದೆ. ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮ 'ಗಗನಯಾನ'ದ 'ಸರ್ವೀಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್' ಅಂದ್ರೆ ಎಸ್‌ಎಂಪಿಎಸ್ ಕಾರ್ಯಕ್ಷಮತೆ ಮತ್ತೆ ಸನ್ನದ್ಧತೆ ಕುರಿತಾಗಿ ನಡೆದ ಎರಡು ಪರೀಕ್ಷೆಗಳಲ್ಲಿ ಸಕ್ಸಸ್ ಆಗಿದೆ ಇಸ್ರೋ. ಈ ಮೂಲಕ ಹಾಟ್ ಟೆಸ್ಟ್ ಪಾಸ್ ಆಗಿರುವ ಈ ಯೋಜನೆ ಮುಂದಿನ ಹಂತಕ್ಕೆ ಲಗ್ಗೆ ಇಡುತ್ತಿದೆ. 'ಚಂದ್ರಯಾನ-3' ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಮಹತ್ವದ ಕಾರ್ಯದಲ್ಲಿ ದೊಡ್ಡ ಯಶಸ್ಸನ್ನು ಕಂಡಿದೆ ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆ.

ರಿಯಲ್ ಗೇಮ್ ಈಗ ಶುರು!
ಅಷ್ಟಕ್ಕೂ ಇಸ್ರೋ ಈ ಮಹತ್ವದ ಪರೀಕ್ಷೆ ನಡೆಸಲು ಆರಿಸಿಕೊಂಡಿದ್ದು ನೆರೆ ರಾಜ್ಯವನ್ನು. ಹೌದು, ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮಹೇಂದ್ರಗಿರಿಯ ಪ್ರೊಪಲ್ಷನ್ ಕೇಂದ್ರದಲ್ಲಿ 2 ಮತ್ತು 3ನೇ 'ಹಾಟ್ ಟೆಸ್ಟ್'ಗಳನ್ನು ನಡೆಸಲಾಯಿತು ಎಂದು ಇಸ್ರೋ ತಿಳಿಸಿದೆ. ಮೊದಲನೇ ಪರೀಕ್ಷೆಯನ್ನ ಜುಲೈ 19ರಂದು ನಡೆಸಲಾಗಿತ್ತು. ಹಾಗೇ ಗಗನಯಾನಕ್ಕೆ ಸಂಬಂಧಿಸಿದ ಇನ್ನೂ ಮೂರು ಪರೀಕ್ಷೆಗಳನ್ನು ನಿಗದಿತ ದಿನಗಳಂದು ನಡೆಸಲಾಗುವುದು ಎಂದೂ ಇಸ್ರೋ ಮಾಹಿತಿ ನೀಡಿದೆ. ಹೀಗೆ ಮತ್ತೊಂದು ಮಹತ್ವದ ಯೋಜನೆಗೆ ಭಾರತ ಸಜ್ಜಾಗಿದೆ. ಹೀಗೆ ಭಾರತದ ಯೋಜನೆ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.
ಯಶಸ್ವಿಯಾಗಿ ಮುನ್ನುಗ್ಗುತ್ತಿದೆ 'ಚಂದ್ರಯಾನ-3'!
'ಚಂದ್ರಯಾನ-3' ಬಾಹ್ಯಾಕಾಶ ನೌಕೆ 1,27,609 ಕಿಮೀ x 228 ಕಿಮೀ ಕಕ್ಷೆಗೆ ತಲುಪಿದೆ. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ರಾಕೆಟ್ ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ. ಕೆಲ ದಿನಗಳ ಹಿಂದಷ್ಟೇ ಬಾಹ್ಯಾಕಾಶ ನೌಕೆಯ ಕಕ್ಷೆ ಏರಿಸುವ ಕಾರ್ಯ ಬಹುತೇಕ ಯಶಸ್ವಿಯಾಗಿದೆ. ಮುಂದಿನ ಫೈರಿಂಗ್, ಟ್ರಾನ್ಸ್‌ಲೂನಾರ್ ಇಂಜೆಕ್ಷನ್ ಆಗಸ್ಟ್ 1 ರಂದು ಮಧ್ಯರಾತ್ರಿ 12 ಹಾಗೂ ಬೆಳಗ್ಗೆ 1 ಗಂಟೆ ನಡುವೆ ನಡೆಸಲು ಯೋಜಿಸಲಾಗಿದೆ. ಇದೇ ವೇಳೆ ಮತ್ತೊಂದು ಕಾರ್ಯದಲ್ಲೂ ಇಸ್ರೋ ಯಶಸ್ಸು ಕಂಡಿದೆ.
ದಕ್ಷಿಣ ಧ್ರುವ ಪ್ರದೇಶದ ಅಧ್ಯಯನಕ್ಕೆ ಸಿದ್ಧತೆ
ಚಂದ್ರನ ಸೂಕ್ಷ್ಮ ಅಧ್ಯಯನ ನಡೆಸಲು ಭಾರತ ಹಲವು ಯೋಜನೆ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ತಲುಪುವುದು ಇಸ್ರೋ ಮೊದಲ ಗುರಿ, ಹೀಗಾಗಿ ಚಂದ್ರನ ದಕ್ಷಿಣ ಧ್ರುವ ತಲುಪೋದಕ್ಕೆ ಬಾಹ್ಯಾಕಾಶ ನೌಕೆಗೆ ಅಗತ್ಯವಿರುವ ನೂಕುಬಲ ನೀಡಲಾಗುತ್ತಿದೆ. ಹಾಗೇ ಪ್ರತಿ ಪ್ರಕ್ರಿಯೆಗಳಲ್ಲೂ ಇಸ್ರೋ ಯಶಸ್ವಿಯಾಗಿದೆ. ಇದಕ್ಕಿಂತ ಮಹತ್ವದ ಕೆಲಸ ಏನೆಂದರೆ ಚಂದ್ರನ ಮೇಲೆ ನೀರು ಹುಡುಕುವ ಕೆಲಸ. ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರ ಚಂದ್ರ. ಇದೇ ಕಾರಣಕ್ಕೆ ಮಹತ್ವದ ಯೋಜನೆ ಕೈಗೆತ್ತಿಕೊಂಡಿತ್ತು ಭಾರತ.
ಒಟ್ನಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಬಲಿಷ್ಠವಾಗಿ ಬೆಳೆಯುತ್ತಿದೆ. ಇದೀಗ ತನ್ನ ಯೋಜನೆಯ ಅಂತಿಮ ಘಟ್ಟದಲ್ಲಿ ಭಾರತ ಇದ್ದು, ಆಗಸ್ಟ್ 23ರಂದು ಚಂದ್ರನ ಮೇಲೆ ರೋವರ್ ಇಳಿಸಲಿದೆ. ಮೊನ್ನೆ ಮೊನ್ನೆಯಷ್ಟೇ ಪೋಲೆಂಡ್‌ನ ಅತ್ಯಾಧುನಿಕ ದೂರದರ್ಶಕದ ಸಹಾಯದಿಂದ ಚಂದ್ರಯಾನ-3 ನೌಕೆಯ ಸಂಚಾರವನ್ನು ಸೆರೆ ಹಿಡಿಯಲಾಗಿತ್ತು.












Click it and Unblock the Notifications