ISRO: 16 ಉಪಗ್ರಹಗಳನ್ನು ಹೊತ್ತೊಯ್ದ ಪಿಎಸ್ಎಲ್ವಿ-ಸಿ62 ರಾಕೆಟ್ ನಾಪತ್ತೆ: ಇಸ್ರೋ ಅಧ್ಯಕ್ಷ ಹೇಳಿದ್ದೇನು?
ISRO: ಶ್ರೀಹರಿಕೋಟಾದಿಂದ ಇಂದು (ಜನವರಿ 12) ಅದ್ಭುತ ಉಡಾವಣೆಯೊಂದಿಗೆ ಹೊರಟಿದ್ದ ಇಸ್ರೋದ ಪಿಎಸ್‌ಎಲ್‌ವಿ-ಸಿ62 ಮಿಷನ್ ವಿಫಲವಾಗಿದೆ. ಪಿಎಸ್‌ಎಲ್‌ವಿ-ಸಿ62 ಮಿಷನ್ ಇಸ್ರೋ ಶ್ರೀಹರಿಕೋಟಾದಿಂದ ಉಡಾವಣೆಗೊಂಡಿತು. ಆದರೆ, ಕೊನೆಯ ಹಂತದಲ್ಲಿ ಸಮಸ್ಯೆಗಳು ಕಂಡುಬಂದಿದ್ದು, ರಾಕೆಟ್ ನಾಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇಸ್ರೋ ಅಧ್ಯಕ್ಷ ಅಧ್ಯಕ್ಷರಾದ ವಿ.ನಾರಾಯಣನ್ ಅವರು ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಅವರು ಏನೆಲ್ಲಾ ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಸ್ರೋ ಅಧ್ಯಕ್ಷರಾದ ವಿ. ನಾರಾಯಣನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಪಿಎಸ್‌ಎಲ್‌ವಿ-ಸಿ62 ಅನ್ನು ನಿಗದಿತ ಸಮಯಕ್ಕೆ ಉಡಾವಣೆ ಮಾಡಲಾಯಿತು. ಮೂರನೇ ಹಂತದ ವಿಭಜನೆವರೆಗೆ ಎಲ್ಲವೂ ಅಂದುಕೊಂಡಂತೆ ನಡೆಯಿತು. ಆದರೆ, ಮೂರನೇ ಹಂತದ ಅಂತ್ಯದಲ್ಲಿ ಸಮಸ್ಯೆಗಳು ಕಂಡುಬಂದವು. ಹಾರಾಟದ ಮಾರ್ಗದಲ್ಲಿ ವ್ಯತ್ಯಯ ಉಂಟಾಗಿದ್ದು, ರಾಕೆಟ್ ನಾಪತ್ತೆಯಾಗಿದೆ. ಡೇಟಾವನ್ನು ವಿಶ್ಲೇಷಿಸಲಾಗುತ್ತಿದೆ," ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ವೇದಿಕೆಯಿಂದ ಬೆಳಗ್ಗೆ 10:18ಕ್ಕೆ ರಾಕೆಟ್ ಉಡಾವಣೆಯಾಯಿತು. ಇದು 2026ನೇ ವರ್ಷದ ಮೊದಲ ಉಪಗ್ರಹ ಉಡಾವಣೆ ಆಗಿದ್ದು, ಪಿಎಸ್‌ಎಲ್‌ವಿ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುವ ಉದ್ದೇಶವನ್ನು ಇಸ್ರೋ ಹೊಂದಿತ್ತು. ಆದರೆ, ಕೊನೇ ಹಂತದಲ್ಲಿ 16 ಉಪಗ್ರಹಗಳು ನಾಪತ್ತೆ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
2025ರ ಮೇ ನಲ್ಲಿ ನಡೆದ PSLV-C61 ಮಿಷನ್ ಕೂಡ ಮೂರನೇ ಹಂತದಲ್ಲಿ ತಾಂತ್ರಿಕ ದೋಷವನ್ನು ಎದುರಿಸಿತ್ತು. ಇನ್ನೂ ಉಡಾವಣೆಗೆ ಮುನ್ನ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು ಶನಿವಾರ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದರು. PSLV-C62 ರಾಕೆಟ್‌ನಲ್ಲಿ EOS-N1 ಎಂಬ ಉನ್ನತ ಭೂಪರಿವೀಕ್ಷಣಾ ಉಪಗ್ರಹ ಇದ್ದು, ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಉಪಗ್ರಹವು ರಕ್ಷಣಾತ್ಮಕ ಉದ್ದೇಶಗಳ ಜೊತೆಗೆ ಕೃಷಿ, ನಗರ ಯೋಜನೆ ಮತ್ತು ಪರಿಸರ ಮೇಲ್ವಿಚಾರಣೆ ಸೇರಿದಂತೆ ನಾಗರಿಕ ಬಳಕೆಗೆ ಸಹ ಉಪಯುಕ್ತ ಆಗಿದೆ.
ಎಷ್ಟನೇ ಬಾರಿ ಹಾರಾಟ?: C62 ಮಿಷನ್ ಪಿಎಸ್‌ಎಲ್‌ವಿಯ 64ನೇ ಹಾರಾಟ ಆಗಿದ್ದು, PSLV-DL ರೂಪಾಂತರದ ಐದನೇ ಮಿಷನ್ ಆಗಿತ್ತು. ಅಲ್ಲದೆ, ಇಸ್ರೋ ತನ್ನ 101ನೇ ಕಕ್ಷಾ ಉಡಾವಣೆಯನ್ನು ಈ ಮೂಲಕ ಸಂಭ್ರಮಿಸುವ ಗುರಿಯನ್ನೂ ಹೊಂದಿತ್ತು. ರಾಕೆಟ್ 260 ಟನ್ ತೂಕ ಇದ್ದು, 44.4 ಮೀಟರ್ ಎತ್ತರ ಹೊಂದಿತ್ತು. ಇದು 505.291 ಕಿಲೋ ಮೀಟರ್ ಎತ್ತರದ ಕಕ್ಷೆ ತಲುಪಬೇಕಿತ್ತು.
EOS-N1 ಜೊತೆಗೆ, ದೇಶಿ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಸಂಸ್ಥೆಗಳ 15 ಸಹ-ಪ್ರಯಾಣಿಕ ಉಪಗ್ರಹಗಳು ಮಿಷನ್‌ನಲ್ಲಿ ಸೇರಿದ್ದವು. ಇದರಲ್ಲಿ ಸ್ಪೇನ್‌ನ ಸ್ಟಾರ್ಟ್‌ಅಪ್ ಸಂಸ್ಥೆಯ Kestrel Initial Technology Demonstrator ಸಹ ಸೇರಿದೆ. ಈ ಕ್ಯಾಪ್ಸುಲ್ ಅನ್ನು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಜಲಾವತರಣಗೊಳಿಸುವ ಯೋಜನೆ ರೂಪಿಸಲಾಗಿತ್ತು.
ಮಿಷನ್ ಯೋಜನೆಯ ಪ್ರಕಾರ, EOS-N1 ಮತ್ತು 14 ಉಪಗ್ರಹಗಳನ್ನು ಸೂರ್ಯ-ಸಮಸಮಯ ಕಕ್ಷೆಯಲ್ಲಿ ಸ್ಥಾಪಿಸಬೇಕಿತ್ತು. ನಾಲ್ಕನೇ ಹಂತವು KID ಕ್ಯಾಪ್ಸುಲ್ ಅನ್ನು ಮರುಪ್ರವೇಶ ಪಥಕ್ಕೆ ತಳ್ಳಬೇಕಾಗಿತ್ತು. ಇನ್ನೂ ಚಂದ್ರಯಾನ-1, ಮಂಗಳಯಾನ, ಆದಿತ್ಯ-L1, ಆಸ್ಟ್ರೋಸಾಟ್ ಸೇರಿದಂತೆ ಹಲವು ಯಶಸ್ವಿ ಮಿಷನ್‌ಗಳನ್ನು ನೆರವೇರಿಸಿರುವ ಪಿಎಸ್‌ಎಲ್‌ವಿ, 2017ರಲ್ಲಿ ಒಂದೇ ಮಿಷನ್‌ನಲ್ಲಿ 104 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವದಾಖಲೆ ಬರೆದ ಇತಿಹಾಸವನ್ನು ಹೊಂದಿದೆ.












Click it and Unblock the Notifications