ವಾಯುಗಡಿ ಮುಚ್ಚಿದ ಇರಾನ್, ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯ
ಇರಾನ್ ಮತ್ತು ಅಮೆರಿಕ ನಡುವೆ ತಿಕ್ಕಾಟ ಜೋರಾಗಿದ್ದು, ಯಾವುದೇ ಕ್ಷಣದಲ್ಲಿ ಎರಡೂ ದೇಶಗಳ ನಡುವೆ ಯುದ್ಧ ಆರಂಭ ಆಗುವ ಭೀತಿ ಆವರಿಸಿದೆ. ಇದೇ ಕಾರಣಕ್ಕೆ ಇರಾನ್ ಈಗಾಗಲೇ ವಾಯು ಗಡಿ ಬಂದ್ ಮಾಡಿದ್ದು, ಇದರ ಪರಿಣಾಮ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಭಾರತ ಸೇರಿದಂತೆ ನೂರಾರು ರಾಷ್ಟ್ರಗಳು ಅಂತಾರಾಷ್ಟ್ರೀಯ ವಿಮಾನ ಸೇವೆಗೆ ಇದೇ ಇರಾನ್ ವಾಯು ಗಡಿ ಬಳಕೆ ಮಾಡುತ್ತಿದ್ದವು. ಆದರೆ ದಿಢೀರ್ ಇರಾನ್ ಈ ರೀತಿಯ ನಿರ್ಧಾರ ಕೈಗೊಂಡಿದ್ದು ಆಘಾತವನ್ನೇ ನೀಡಿದೆ.
ಇರಾನ್ ವಾಯುಪ್ರದೇಶ ಬಂದ್ ಮಾಡಿ ಆದೇಶ ಹೊರಡಿಸಿದ್ದು, ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ. ಗುರುವಾರ ಏರ್ ಇಂಡಿಯಾ ಅಮೆರಿಕಗೆ ತೆರಳಬೇಕಿದ್ದ ಒಟ್ಟು ಮೂರು ವಿಮಾನಗಳ ಹಾರಾಟ ರದ್ದುಗೊಳಿಸಿದೆ. ಹಾಗೂ ಇರಾನ್ ವಾಯುಪ್ರದೇಶ ಮುಚ್ಚಿರುವುದರಿಂದ ಕೆಲವು ಯುರೋಪ್ ವಿಮಾನ ಸೇವೆಗಳು ವಿಳಂಬವಾಗುವ ನಿರೀಕ್ಷೆ ಇದೆ ಎಂದು ಪಿಟಿಐ ವರದಿ ಮಾಡಿದೆ. ವಿಮಾನ ಹಾರಾಟ ರದ್ದು ಮಾಡಿರುವ ಮಾರ್ಗಗಳ ಪೈಕಿ ದೆಹಲಿಯಿಂದ ನ್ಯೂಯಾರ್ಕ್‌ಗೆ ಎರಡು ವಿಮಾನಗಳು ಸೇರಿದಂತೆ, ಮುಂಬೈನಿಂದ ನ್ಯೂಯಾರ್ಕ್‌ಗೆ ಒಂದು ವಿಮಾನ ಕೂಡ ಕ್ಯಾನ್ಸಲ್ ಆಗಿದೆ.

ಬದಲಿ ಮಾರ್ಗ ಹುಡುಕುವ ಅನಿವಾರ್ಯತೆ
ಸಾಮಾನ್ಯವಾಗಿ ಏರ್ ಇಂಡಿಯಾ ಸಂಸ್ಥೆಯು ಅಮೆರಿಕ ಮತ್ತು ಯುರೋಪ್ ದೇಶಗಳಿಗೆ ತನ್ನ ವಿಮಾನ ಸೇವೆ ನೀಡಲು ಇರಾನ್ ವಾಯು ಪ್ರದೇಶ ಬಳಸುತ್ತದೆ. ಪರ್ಯಾಯವೆಂದರೆ ಇರಾಕ್ ಮೇಲೆ ಮಾರ್ಗ ಬದಲಾಯಿಸಬೇಕಿದೆ. ಆದರೆ ಇರಾಕ್ ಮೂಲಕ ವಿಮಾನ ಹಾರಾಟ ಹೆಚ್ಚು ಸಮಯ ತೆಗೆದುಕೊಳ್ಳುವ ಹಿನ್ನೆಲೆ ನಷ್ಟದ ಭೀತಿ ಕೂಡ ಇದೆ. ವಿಮಾನ ಇಂಧನ ಸೇರಿದಂತೆ ಹಲವು ವಿಚಾರದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಮತ್ತೊಂದು ಕಡೆ ಪಾಕಿಸ್ತಾನದ ವಾಯುಪ್ರದೇಶ ಈಗಾಗಲೇ ಮುಚ್ಚಿರುವ ಪರಿಣಾಮ ಪಶ್ಚಿಮ ಭಾಗಕ್ಕೆ ಹೋಗಲು ಏರ್ ಇಂಡಿಯಾ ಸಂಸ್ಥೆ ಈಗ ಬದಲಿ ಮಾರ್ಗ ಹುಡುಕಬೇಕಿದೆ.
ಇಂಡಿಗೋ ಸೇವೆಯಲ್ಲಿ ಕೂಡ ಸಮಸ್ಯೆ
ಏರ್ ಇಂಡಿಯಾ ಮಾತ್ರವಲ್ಲದೆ ಇಂಡಿಗೋ ಸಂಸ್ಥೆ ಕೂಡ ಸಾಕಷ್ಟು ಸಮಸ್ಯೆ ಎದುರಿಸಿದ್ದು, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಕೂಡ ಇರಾನ್ ನಿರ್ಧಾರದ ನಂತರ ಕಂಗಾಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಮೂಲಕ ತೆರಳುವ ಅಂತಾರಾಷ್ಟ್ರೀಯ ವಿಮಾನಗಳ ಸೇವೆಯಲ್ಲಿ ವ್ಯತ್ಯಾಸ ಆಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಯಾವುದೇ ಕ್ಷಣದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಆರಂಭ ಆಗುವ ಸಾಧ್ಯತೆ ಇರುವ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಕೂಡ ಆತಂಕದ ವಾತಾವರಣ ನಿರ್ಮಾಣ ಆಗಿದೆ.
2,000ಕ್ಕೂ ಹೆಚ್ಚು ಜನ ಬಲಿ
ಅಕಸ್ಮಾತ್ ಇರಾನ್ ನೆಲದ ಮೇಲೆ ಅಮೆರಿಕ ಸೇನೆಯಿಂದ ದಾಳಿ ನಡೆದರೆ ಅದನ್ನು ಎದುರಿಸುವ & ದಾಳಿಗೆ ಉತ್ತರ ಕೊಡುವ ಬಗ್ಗೆ ಇರಾನ್ ಈಗಾಗಲೇ ಸಿದ್ಧತೆ ಆರಂಭ ಮಾಡಿದೆ. ಯಾವುದೇ ಕ್ಷಣದಲ್ಲಿ ದಾಳಿ ನಡೆಯಬಹುದು ಎಂಬ ಆತಂಕದಲ್ಲೇ ಇರಾನ್ ಇದ್ದು, ಕಳೆದ ವರ್ಷ ಇಸ್ರೇಲ್ ಜೊತೆ ಮತ್ತು ಅಮೆರಿಕದ ಜೊತೆಗೂ ಇರಾನ್ ಬಡಿದಾಡಿತ್ತು. ಆ ಯುದ್ಧದ ನಂತರ ಇದೀಗ ಮತ್ತೊಮ್ಮೆ ಯುದ್ಧಕ್ಕೆ ಸಜ್ಜಾಗಬೇಕಾದ ಅನಿವಾರ್ಯತೆ ಇದೆ. ಇರಾನ್ ಹಿಂಸಾಚಾರಕ್ಕೆ ಈವರೆಗೂ 2,000ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.












Click it and Unblock the Notifications