ಉಗ್ರರಿಗೆ ಬೆಂಬಲ ಕೊಟ್ಟ ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆಕ್ರೋಶ
ಪಾಕಿಸ್ತಾನದ ಉಗ್ರರನ್ನು ಮಟ್ಟಹಾಕಲು ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಉಗ್ರವಾದವನ್ನು ಮಟ್ಟಹಾಕಲು ಭಾರತಕ್ಕೆ ಸಹಕಾರ ಕೊಡುವ ಬದಲು ಪಾಕಿಸ್ತಾನ ಭಾರತದ ಮೇಲೆ ಆಕ್ರಮಣ ಮಾಡುವ ಮೂರ್ಖತನ ಪ್ರದರ್ಶನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಶ್ಲಾಘಿಸಿದ ಅವರು, ಭಾರತದ ಸೈನ್ಯ, ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿದರು. ಭಯೋತ್ಪಾದನೆಯನ್ನು ಭಾರತ ಎಂದಿಗೂ ಸಹಿಸಲ್ಲ ಎಂದು ಹೇಳಿದ ಅವರು, ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಭಯೋತ್ಪಾದನೆಯನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡುವ ಬದಲು, ಪಾಕಿಸ್ತಾನವು ದೇಶದ ಮೇಲೆ ದಾಳಿ ಮಾಡಿದೆ ಎಂದು ಅಮಸಮಾಧಾನ ವ್ಯಕ್ತಪಡಿಸಿದರು.

ಮೇ 7 ರ ಮುಂಜಾನೆ ಭಾರತ ಪಾಕಿಸ್ತಾನದ ಉಗ್ರರ ತಾಣಗಳ ಮೇಲೆ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಮತ್ತು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿ ಸೇರಿದಂತೆ ಪಾಕಿಸ್ತಾನದಲ್ಲಿನ ಪ್ರಮುಖ ಭಯೋತ್ಪಾದಕ ಮೂಲಸೌಕರ್ಯ ನೆಲೆಗಳ ಮೇಲೆ ಭಾರತ ದಾಳಿ ಮಾಡಿದೆ ಎಂದರು. ಈ ಸ್ಥಳಗಳನ್ನು ಭಯೋತ್ಪಾದನೆಯ ಜಾಗತಿಕ ವಿಶ್ವವಿದ್ಯಾಲಯಗಳು ಎಂದು ಕರೆದಿದ್ದಾರೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು. ಭಾರತದ ವಿರುದ್ಧ ಪಿತೂರಿ ನಡೆಸುತ್ತಿದ್ದ ಅನೇಕ ಭಯೋತ್ಪಾದಕ ಮುಖ್ಯಸ್ಥರು ಪಾಕಿಸ್ತಾನದಲ್ಲಿ ಸುಮಾರು ಮೂರು ದಶಕಗಳಿಂದ ಮುಕ್ತವಾಗಿ ಸುತ್ತಾಡುತ್ತಿದ್ದರು ಮತ್ತು ಭಾರತ ಅವರನ್ನು ಒಂದೇ ಏಟಿನಲ್ಲಿ ಮುಗಿಸಿದೆ ಎಂದರು.
ಭಾರತದ ಕ್ರಮದ ಬಳಿಕ ಪಾಕಿಸ್ತಾನ ನಿರಾಶೆಗೊಂಡಿದ್ದು, ಅದು ಭಯಗೊಂಡಿದೆ ಎಂದರು. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡುವ ಬದಲು, ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದೆ ಎಂದು ಪ್ರಧಾನಿ ಹೇಳಿದರು.
ಪಾಕಿಸ್ತಾನವು ನಮ್ಮ ಶಾಲೆಗಳು, ಕಾಲೇಜುಗಳು, ಗುರುದ್ವಾರಗಳು, ಮಿಲಿಟರಿ ನೆಲೆಗಳುಮ ದೇವಾಲಯಗಳು ಮತ್ತು ನಾಗರಿಕರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಪಾಕಿಸ್ತಾನದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಒಣಹುಲ್ಲಿನಂತೆ ಚದುರಿಹೋಗಿರುವುದನ್ನು ಜಗತ್ತು ನೋಡಿದೆ. ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ಆಕಾಶದಲ್ಲಿ ನಾಶಪಡಿಸಿತು. ಪಾಕಿಸ್ತಾನ ತನ್ನ ಗಡಿಯಲ್ಲಿ ಭಾರತದ ಮೇಲೆ ದಾಳಿ ಮಾಡಲು ಸಿದ್ಧವಾಗಿತ್ತು, ಆದರೆ ಭಾರತ ಪಾಕಿಸ್ತಾನದ ಹೃದಯ ಭಾಗದ ಮೇಲೆ ದಾಳಿ ಮಾಡಿದೆ. ಭಾರತದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನವು ಹೆಮ್ಮೆಪಡುವ ವಾಯುನೆಲೆಗಳಿಗೆ ಹಾನಿ ಮಾಡಿವೆ ಎಂದರು.












Click it and Unblock the Notifications