ಎಸಿ ಇಲ್ಲದ ವಿಮಾನದಲ್ಲಿ ಬೆವರು ಒರೆಸಿಕೊಳ್ಳಲು ಟಿಶ್ಯೂ ಕೊಟ್ಟ ಇಂಡಿಗೋ ಸಿಬ್ಬಂದಿ: ಕಾಂಗ್ರೆಸ್ ನಾಯಕ ಕಿಡಿ
ಎಸಿ ಇಲ್ಲದ ಇಂಡಿಗೋ ವಿಮಾನದಲ್ಲಿ ಬೆವರು ಒರೆಸಿಕೊಳ್ಳಲು ಟಿಶ್ಯೂ ಕೊಡುತ್ತಿರುವ ಅವ್ಯವಸ್ಥೆಯ ಬಗ್ಗೆ ಪಂಜಾಬ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಶನಿವಾರ ಆಕ್ರೋಶಗೊಂಡಿದ್ದಾರೆ. ವಿಮಾನದಲ್ಲಿರುವ ಪ್ರಯಾಣಿಕರು ಗಾಳಿ ಬೀಸಿಕೊಳ್ಳುತ್ತಿರುವ ವಿಡಿಯೋವನ್ನು ಶೇರ್ ಮಾಡಿದ ಅವರು ವಿಮಾನ ಸಂಸ್ಥೆಯ ವಿರುದ್ಧ ಕಿಡಿ ಕಾರಿದ್ದಾರೆ.
ಶನಿವಾರ (ಆಗಸ್ಟ್ 5) ಚಂಡೀಗಢದಿಂದ ಜೈಪುರಕ್ಕೆ ಪ್ರಯಾಣಿಸುವಾಗ ಇಂಡಿಗೋ ವಿಮಾನ 6E7261 ನಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅತ್ಯಂತ ಭಯಾನಕ ಅನುಭವಗಳಲ್ಲಿ ಇದು ಒಂದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಹವಾನಿಯಂತ್ರಣವಿಲ್ಲದೆ ವಿಮಾನದೊಳಗೆ 90 ನಿಮಿಷಗಳ ಕಾಲ ಕುಳಿತುಕೊಳ್ಳುವಂತೆ ಮಾಡಿದ್ದರಿಂದ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಇದು ಭಯಾನಕ ಅನುಭವ ನೀಡಿದೆ ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ದೂರಿದ ಕಾಂಗ್ರೆಸ್ ಮುಖಂಡರು, ಮೊದಲು ಪ್ರಯಾಣಿಕರನ್ನು ಬಿಸಿಲಿನ ತಾಪದಲ್ಲಿ ಸುಮಾರು 10-15 ನಿಮಿಷಗಳ ಕಾಲ ಸರದಿಯಲ್ಲಿ ಕಾಯುವಂತೆ ಮಾಡಲಾಯಿತು. ನಂತರ ಎಸಿಗಳು ಆನ್ ಮಾಡದೆಯೇ ವಿಮಾನ ಟೇಕ್ ಆಫ್ ಆಯಿತು ಎಂದು ಹೇಳಿದರು.
"ಟೇಕ್‌ಆಫ್‌ನಿಂದ ಲ್ಯಾಂಡಿಂಗ್‌ವರೆಗೆ AC ಗಳು ಆಫ್ ಆಗಿದ್ದವು ಮತ್ತು ಎಲ್ಲಾ ಪ್ರಯಾಣಿಕರು ಪ್ರಯಾಣದ ಉದ್ದಕ್ಕೂ ತುಂಬಾ ಕಷ್ಟಪಟ್ಟರು. ಹಾರಾಟದ ಸಮಯದಲ್ಲಿ ಗಂಭೀರವಾಗಿ ಇದನ್ನು ಯಾರೂ ತೆಗೆದುಕೊಳ್ಳಲಿಲ್ಲ. ವಾಸ್ತವವಾಗಿ ಗಗನಸಖಿಯರು ತಮ್ಮ ಬೆವರು ಒರೆಸಲು 'ಉದಾರವಾಗಿ' ಟಿಶ್ಯೂ ಪೇಪರ್‌ಗಳನ್ನು ಪ್ರಯಾಣಿಕರಿಗೆ ವಿತರಿಸಿದರು, "ಎಂದು ಅವರು ಟ್ವೀಟ್ ಮಾಡಿದ್ದಾರೆ. ವಿಡಿಯೊದಲ್ಲಿ ಪ್ರಯಾಣಿಕರು ಟಿಶ್ಯೂಗಳು ಮತ್ತು ಪೇಪರ್‌ಗಳೊಂದಿಗೆ ಗಾಳಿ ಬೀಸಿಕೊಳ್ಳುತ್ತಿರುವುದನ್ನು ಕಾಣಬಹುದು.
ಅವರು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಅನ್ನು ಟ್ಯಾಗ್ ಮಾಡಿ ವಿಮಾನಯಾನ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇಂಡಿಗೋ ವಿಮಾನಗಳಲ್ಲಿ ಒಂದೇ ದಿನದಲ್ಲಿ ತಾಂತ್ರಿಕ ಅಡಚಣೆಯಾದ ಮೂರನೇ ಘಟನೆ ಇದಾಗಿದೆ. ದೆಹಲಿಗೆ ಹಾರುತ್ತಿದ್ದ ಇಂಡಿಗೋ ವಿಮಾನದ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡ ಕಾರಣ ಶುಕ್ರವಾರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ವಿಮಾನ ಟೇಕ್ ಆಫ್ ಆದ ಕೇವಲ ಮೂರು ನಿಮಿಷಗಳ ನಂತರ ಈ ಘಟನೆ ಸಂಭವಿಸಿದೆ. ಪಾಟ್ನಾದ ಜಯಪ್ರಕಾಶ್ ನಾರಾಯಣ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 9:11ರ ಸುಮಾರಿಗೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಮತ್ತೊಂದು ಘಟನೆಯಲ್ಲಿ, ರಾಂಚಿಗೆ ಹೊರಟಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ಒಂದು ಗಂಟೆಯೊಳಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿತು. ಇಂಡಿಗೋ ವಿಮಾನದ ಪೈಲಟ್ ವಿಮಾನದಲ್ಲಿ ತಾಂತ್ರಿಕ ದೋಷದ ಬಗ್ಗೆ ಘೋಷಿಸಿದರು. ಬಳಿಕ ವಿಮಾನ ಐಜಿಐ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದರು.












Click it and Unblock the Notifications