ಇಂಡಿಯಾ ಟುಡೇ ಸಮೀಕ್ಷೆ : ಯುಪಿಯಲ್ಲಿ ಎನ್‌ಡಿಎ ಮತಗಳಿಕೆ ಕಡಿಮೆ!
ಬೆಂಗಳೂರು, ಮೇ 25 : ಇಂಡಿಯಾ ಟುಡೇ 2019ರ ಚುನಾವಣೆ ಬಗ್ಗೆ ಉತ್ತರ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ದೇಶದ ಬಹುದೊಡ್ಡ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ ಕಡಿಮೆ ಮತಗಳನ್ನು ಪಡೆಯಲಿದೆ.
ಶುಕ್ರವಾರ ಇಂಡಿಯಾ ಟುಡೇ-ಸಿಎಸ್‌ಡಿಎಸ್-ಲೋಕನೀತಿ ನಡೆಸಿದ ಸಮೀಕ್ಷೆ ವರದಿ ಬಹಿರಂಗವಾಗಿದೆ. ದೇಶದ ಸುಮಾರು 60 ಸಾವಿರ ಜನರನ್ನು ಸಂದರ್ಶನ ಮಾಡಿ, ಈ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಲಾಗಿದೆ.
ದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಪ್ರಧಾನಿ ನರೇಂದ್ರ ಮೋದಿ ಅವರು 4 ವರ್ಷ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಈಗ ಚುನಾವಣೆ ನಡೆದರೆ ಹೇಗೆ? ಎಂಬ ಅಂಶದ ಮೇಲೆ ಸಮೀಕ್ಷೆಯನ್ನು ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ಎನ್‌ಡಿಯ ಮೈತ್ರಿಕೂಟ 2018ರಲ್ಲಿ ಶೇ 35ರಷ್ಟು ವೋಟ್ ಶೇರ್ ಪಡೆಯಲಿದೆ. 2014ರಲ್ಲಿ ಮೈತ್ರಿಕೂಟ 43ರಷ್ಟು ವೋಟ್ ಶೇರ್ ಪಡೆದಿತ್ತು. ಅದಕ್ಕೆ ಹೋಲಿಕೆ ಮಾಡಿದಲ್ಲಿ ಮತಗಳಿಕೆ ಪ್ರಮಾಣ ಕಡಿಮೆಯಾಗಲಿದೆ.
ಯುಪಿಎ ಮೈತ್ರಿಕೂಟ : ಯುಪಿಎ ಮೈತ್ರಿಕೂಟ 2018ರಲ್ಲಿ ಶೇ 12ರಷ್ಟು ಮತಗಳಿಕೆಯನ್ನು ಉತ್ತರ ಪ್ರದೇಶದಲ್ಲಿ ಪಡೆಯಲಿದೆ. 2014ರಲ್ಲಿ ಶೇ 8ರಷ್ಟು ಮತಗಳಿಕೆ ಇತ್ತು. 2014ಕ್ಕೆ ಹೋಲಿಕೆ ಮಾಡಿದಾಗ ಮತಗಳಿಗೆ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.
ಇತರೆ ಪಕ್ಷಗಳು : ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಸೇರಿದಂತೆ ಇತರ ಪಕ್ಷಗಳು 2018ರಲ್ಲಿ ಶೇ 53ರಷ್ಟು ಮತಗಳನ್ನು ಪಡೆಯಲಿವೆ. 2014ರಲ್ಲಿ 49ರಷ್ಟು ಮತಗಳು ಬಂದಿದ್ದವು. ಈ ಪಕ್ಷಗಳು ಯುಪಿಎ ಜೊತೆ ಚುನಾವಣೆ ಸಮಯದಲ್ಲಿ ಮೈತ್ರಿ ಮಾಡಿಕೊಳ್ಳುತ್ತವೆಯೇ? ಎಂದು ಕಾದು ನೋಡಬೇಕು.












Click it and Unblock the Notifications