ಸರ್ಕಸ್ ಕಂಪನಿಗೆ ಮಾರಾಟವಾಗಬೇಕಿದ್ದ 3 ಅಡಿ ಎತ್ತರದ ಬಾಲಕ ಈಗ ವೈದ್ಯ: ಇದು ಡಾಕ್ಟರ್‌ ಗಣೇಶ್ ಬರೈಯಾ ಸಾಧನೆ

ಜೀವನದಲ್ಲಿ ಎನ್ನನ್ನಾದರೂ ಸಾಧಿಸಬೇಕು ಎನ್ನುವ ಛಲವಿದ್ದರೆ ಬಡತನ, ಅಂಗವೈಕಲ್ಯ, ಮೂಲಸೌಕರ್ಯ ಕೊರತೆಯಂತಹ ಸಮಸ್ಯೆಗಳು ಎಂದಿಗೂ ಅಡ್ಡಿಯಾಗಲಾರದು ಎಂಬುದಕ್ಕೆ ಗುಜರಾತ್‌ನ ಡಾ. ಗಣೇಶ್ ಬರೈಯಾ ಅವರ ಬದುಕೇ ಒಂದು ಒಳ್ಳೆಯ ಹಾಗೂ ಉತ್ತಮ ಉದಾಹರಣೆ. ಕೇವಲ 3 ಅಡಿ ಎತ್ತರವಿರುವ, ಶೇ.72ರಷ್ಟು ಚಲನವಲನ ವೈಕಲ್ಯ (locomotor disability) ಹೊಂದಿರುವ ಇವರು, ಇಂದು ದೇಶವೇ ಹೆಮ್ಮೆಪಡುವಂತಹ ವೈದ್ಯರಾಗಿ ಹೊರಹೊಮ್ಮಿದ್ದಾರೆ.

ಹೌದು, ತಮ್ಮ ದೈಹಿಕ ನ್ಯೂನತೆಯನ್ನೇ ನೆಪವಾಗಿಟ್ಟುಕೊಂಡು ವೈದ್ಯಕೀಯ ಪ್ರವೇಶ ನಿರಾಕರಿಸಿದ ವ್ಯವಸ್ಥೆಯ ವಿರುದ್ಧ ಸುಪ್ರೀಂ ಕೋರ್ಟ್‌ವರೆಗೆ ಹೋರಾಡಿ ಗೆದ್ದ ಇವರ ಯಶೋಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿ ಎನ್ನಬಹುದು.

Doctor Ganesh Baraiya

ಸರ್ಕಸ್ ಕಂಪನಿ ನೀಡಿದ್ದ 5 ಲಕ್ಷ ರೂ. ಆಫರ್ ತಿರಸ್ಕರಿಸಿದ ತಂದೆ

ಗುಜರಾತ್‌ನ ಭಾವನಗರ ಜಿಲ್ಲೆಯ ಗೋರ್ಖಿ ಎಂಬ ಸಣ್ಣ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಗಣೇಶ್, ಎಂಟು ಮಕ್ಕಳಲ್ಲಿ ಒಬ್ಬರು. ಗಣೇಶ್ ಪ್ರಾಥಮಿಕ ಶಾಲೆಯಲ್ಲಿದ್ದಾಗ, ಅವರ ದೈಹಿಕ ಕುಳ್ಳನೆಯ ಆಕಾರವನ್ನ ನೋಡಿದ ಸರ್ಕಸ್ ಕಂಪನಿಯವರು ಮನೆಗೆ ಬಂದು, ಬರೋಬ್ಬರಿ 5 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿದ್ದರಂತೆ.

ಈ ಬಡ ಕುಟುಂಬಕ್ಕೆ ಇದು ಜೀವನವನ್ನೇ ಬದಲಾಯಿಸುವ ಮೊತ್ತವಾಗಿತ್ತು. ಆದರೆ, ಗಣೇಶ್ ಅವರ ತಂದೆ ಈ ಆಫರ್ ಅನ್ನ ಹಿಂದೆ ಮುಂದೆ ನೋಡದೆ ತಿರಸ್ಕರಿಸಿದರು. "ನನ್ನ ತಂದೆ ಹಣಕ್ಕಿಂತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು" ಎಂದು ಗಣೇಶ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತಂದೆಯ ಆ ಒಂದು ದಿಟ್ಟ ನಿರ್ಧಾರ ಗಣೇಶ್ ಅವರ ಭವಿಷ್ಯಕ್ಕೆ ಒಂದು ಒಳ್ಳೆಯ ಅಡಿಪಾಯ ಹಾಕಿಕೊಟ್ಟಿತು.

ನೀಟ್ ಪರೀಕ್ಷೆ ಪಾಸ್ ಆದರೂ ಮೆಡಿಕಲ್ ಕೌನ್ಸಿಲ್‌ನಿಂದ ನಿರಾಕರಣೆ

ಮೊದಲಿನಿಂದಲೂ ಡಾಕ್ಟರ್‌ ಆಗಬೇಕೆಂಬ ಕನಸು ಕಂಡಿದ್ದ ಗಣೇಶ್, ಛಲ ಬಿಡದೆ ಓದಿದರು. 12ನೇ ತರಗತಿಯಲ್ಲಿ ಶೇ.87ರಷ್ಟು ಅಂಕ ಪಡೆದು, 2018ರಲ್ಲಿ ನಡೆದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 233ನೇ ರ‍್ಯಾಂಕ್ ಗಳಿಸಿ ತೇರ್ಗಡೆಯಾದರು. ಆದರೆ, ಅವರ ಕನಸಿಗೆ ಭಾರತೀಯ ವೈದ್ಯಕೀಯ ಮಂಡಳಿ ತಣ್ಣೀರು ಎರಚಿತು.

ಕೇವಲ ಮೂರು ಅಡಿ ಎತ್ತರವಿರುವ ಕಾರಣ, ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನ ನಿಭಾಯಿಸಲು ಇವರಿಗೆ ಕಷ್ಟವಾಗಬಹುದು ಎಂಬ ಕಾರಣ ನೀಡಿ ಎಂಬಿಬಿಎಸ್ ಪ್ರವೇಶವನ್ನ ರದ್ದುಪಡಿಸಿತು. ವ್ಯವಸ್ಥೆಯ ಈ ನಡೆ ಗಣೇಶ್ ಅವರನ್ನ ತೀವ್ರವಾಗಿ ಕುಗ್ಗಿಸಿತು. ಆದರೂ ಕೂಡ ಅವರಲ್ಲಿದ್ದ ಛಲದಿಂದ ಅವರು ಸೋಲೊಪ್ಪಿಕೊಳ್ಳಲಿಲ್ಲ.

ಸುಪ್ರೀಂ ಕೋರ್ಟ್‌ನಲ್ಲಿ ಐತಿಹಾಸಿಕ ಜಯ

ಮೆಡಿಕಲ್ ಕೌನ್ಸಿಲ್‌ನ ನಿರ್ಧಾರವನ್ನ ಪ್ರಶ್ನಿಸಿ ಗಣೇಶ್‌ ಮೊದಲು ಗುಜರಾತ್ ಹೈಕೋರ್ಟ್ ಮೊರೆ ಹೋದರು. ಅಲ್ಲಿ ಅವರಿಗೆ ಹಿನ್ನಡೆಯಾಯಿತು. ಆದರೂ ಹಿಂಜರಿಯದ ಅವರು, ನೇರವಾಗಿ ಭಾರತದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸುದೀರ್ಘ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, 2018ರ ಅಕ್ಟೋಬರ್ 22ರಂದು ಐತಿಹಾಸಿಕ ತೀರ್ಪು ನೀಡಿತು. 'ವಿಕಲಚೇತನರ ಹಕ್ಕುಗಳ ಕಾಯ್ದೆ 2016'ರ ಅಡಿಯಲ್ಲಿ ಕೇವಲ ಎತ್ತರದ ಕೊರತೆಯ ಕಾರಣ ನೀಡಿ ವೈದ್ಯಕೀಯ ಶಿಕ್ಷಣದಿಂದ ಯಾರನ್ನೂ ವಂಚಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ ಕೋರ್ಟ್, ಗಣೇಶ್ ಪರವಾಗಿ ತೀರ್ಪು ನೀಡಿತು.

ಕೇವಲ 20 ಕೆ.ಜಿ ತೂಕದ ಡಾಕ್ಟರ್

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ, ತಾವು ಬೆಳೆದ ಜಿಲ್ಲೆಯ ಭಾವನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದ ಗಣೇಶ್, ಈಗ ಅಧಿಕೃತವಾಗಿ ಡಾಕ್ಟರ್ ನೋಡಿ. ನವೆಂಬರ್ 27, 2025ರಂದು ಅವರು ಭಾವನಗರದ ಸರ್ ತಖ್ತಾಸಿನ್ಹಜಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ತಮ್ಮ ಮೊದಲ ಹುದ್ದೆಯನ್ನ ಅಲಂಕರಿಸಿದ್ದಾರೆ. ಕೇವಲ 20 ಕೆ.ಜಿ ತೂಕ ಹಾಗೂ ಮೂರು ಅಡಿ ಎತ್ತರವಿರುವ ಡಾ. ಗಣೇಶ್ ಬರೈಯಾ ಇಂದು ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದಾರೆ.

"ನನ್ನ ಮಹತ್ವಾಕಾಂಕ್ಷೆ ಏನು ಎಂದು ಯಾರಾದರೂ ಕೇಳಿದಾಗಲೆಲ್ಲಾ, ನಾನು ವೈದ್ಯನಾಗಬೇಕು ಎಂದೇ ಹೇಳುತ್ತಿದ್ದೆ. ಇಂದು ಆ ಕನಸು ನನಸಾಗಿದೆ" ಎನ್ನುತ್ತಾರೆ ಡಾ. ಗಣೇಶ್. ವ್ಯವಸ್ಥೆ ಸೃಷ್ಟಿಸಿದ ಅಡೆತಡೆಗಳಿಗಿಂತ, ಒಬ್ಬ ವ್ಯಕ್ತಿಯ ಅರ್ಹತೆ ಮತ್ತು ಪರಿಶ್ರಮವೇ ಅಂತಿಮವಾಗಿ ಗೆಲ್ಲುತ್ತದೆ ಎಂಬುದಕ್ಕೆ ಡಾ. ಗಣೇಶ್ ಅವರ ಈ ಸಾಧನೆಯೇ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+