ಭಾರತವನ್ನು ಅಣಕಿಸಿದ ಜರ್ಮನಿ: ಸರಿಯಾಗಿ ಬುದ್ಧಿ ಹೇಳಿದ ಜನ!
ನವದೆಹಲಿ: ಜನಸಂಖ್ಯೆ ವಿಚಾರದಲ್ಲಿ ಭಾರತ ಜಗತ್ತಿನಲ್ಲೇ ನಂ.1 ಸ್ಥಾನವನ್ನು ಅಲಂಕರಿಸುತ್ತಿದ್ದಂತೆ ವಿವಿಧ ದೇಶಗಳಿಗೆ ಒಳಗೆ ಉರಿ ಶುರುವಾದಂತೆ ಕಾಣುತ್ತಿದೆ. ಅದರಲ್ಲೂ ಜರ್ಮನಿ ಮೂಲದ ಮ್ಯಾಗಜಿನ್ ಪ್ರಕಟಿಸಿದ್ದ ವ್ಯಂಗ್ಯ ಚಿತ್ರ ಆಕ್ರೋಶಕ್ಕೆ ವೇದಿಕೆ ಒದಗಿಸಿದ್ದು, ಭಾರತೀಯರನ್ನ ಕಾರ್ಟೂನ್ ಮೂಲಕ ಅಣಕಿಸಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಭಾರತೀಯರು ಕೂಡ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ.
ಹೌದು, ದಿ ಸ್ಪೀಗೆಲ್ ಎಂಬ ಮ್ಯಾಗಜಿನ್ ಪ್ರಕಟಿಸಿರುವ ವ್ಯಂಗ್ಯ ಚಿತ್ರದಲ್ಲಿ ಚೀನಾ ಪ್ರಜೆಗಳು ಬುಲೆಟ್ ಟ್ರೈನಿನಲ್ಲಿ ಹೋಗುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಭಾರತೀಯರು ರೈಲಿನ ಮೇಲೆ ಕುಳಿತು ತ್ರಿವರ್ಣ ಧ್ವಜ ಹಿಡಿದು ಮುನ್ನುಗುತ್ತಿರುವುದು ಕಂಡು ಬರುತ್ತದೆ. ಇನ್ನು ಈ ಕಾರ್ಟೂನ್ ಕಂಡು ಭಾರತೀಯರು ಕೆಂಡವಾಗಿದ್ದರು. ಅಲ್ಲದೆ ವ್ಯಂಗ್ಯಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿತ್ತು. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಸಲಹೆಗಾರ ಕಾಂಚನ್ ಗುಪ್ತಾ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಚೀನಾ ಕೂಡ ಹೀಗೆ ಪ್ರತಿಕ್ರಿಯಿಸಿತ್ತು
ಭಾರತ ಮೂಲ ಸೌಕರ್ಯ ವ್ಯವಸ್ಥೆಯಲ್ಲಿ ಹಿಂದೆ ಉಳಿದಿದೆ ಹಾಗೂ ಚೀನಾ ತಾಂತ್ರಿಕವಾಗಿ ಪ್ರಗತಿ ಸಾಧಿಸಿದೆ ಎಂಬುದನ್ನ ಈ ವ್ಯಂಗ್ಯ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನ ದಿ ಸ್ಪೀಗೆಲ್ ಮ್ಯಾಗಜಿನ್ ಮಾಡಿತ್ತು. ಹೀಗೆ ಕಾರ್ಟೂನ್ ಮೂಲಕ ವ್ಯಂಗ್ಯ ಮಾಡಿ ವಿವಾದ ಸೃಷ್ಟಿಸಿದ್ದ ದಿ ಸ್ಪೀಗೆಲ್ ಮ್ಯಾಗಜಿನ್ ಬಗ್ಗೆ ಬೇಸರ ವ್ಯಕ್ತವಾಗಿತ್ತು. ದಿ ಸ್ಪೀಗೆಲ್ ಮ್ಯಾಗಜಿನ್ ಕಾರ್ಟೂನ್ ರಿಲೀಸ್ ಆಗುವ ಕೆಲದಿನದ ಹಿಂದೆ ಚೀನಾ ಕೂಡ ಭಾರತದ ವಿರುದ್ಧ ಇದೇ ರೀತಿ ಮಾತನಾಡಿದ್ದು ಅನುಮಾನ ಮೂಡಿಸಿತ್ತು.
ಜನಾಂಗೀಯ ನಿಂದನೆ ಆರೋಪ
ಇನ್ನು ದಿ ಸ್ಪೀಗೆಲ್ ಮ್ಯಾಗಜಿನ್ ವ್ಯಂಗ್ಯಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಸಲಹೆಗಾರ ಕಾಂಚನ್ ಗುಪ್ತಾ ಇದು ಜನಾಂಗೀಯ ನಿಂದನೆಯ ಪ್ರತೀಕ. ವಾಸ್ತವಾಂಶ ತಿರುಚಿ ಚೀನಾವನ್ನ ಭಾರತಕ್ಕಿಂತ ಮುಂದುವರಿದ ದೇಶ ಎಂದು ತೋರಿಸಲು ಯತ್ನಿಸಲಾಗಿದೆ. ನನ್ನ ಪ್ರಕಾರ ಇದು ಒಂದು ಕೆಟ್ಟ ವ್ಯಂಗ್ಯ ಚಿತ್ರವಾಗಿದ್ದು ಭಾರತ ಮಂಗಳಯಾನ ಕೈಗೊಂಡ ದೇಶ ಎಂಬ ವಿಚಾರ ನಿಮ್ಮ ನೆನಪಿನಲ್ಲಿ ಇರಲಿ ಎಂದು ತಿರುಗೇಟು ನೀಡಿದ್ದಾರೆ.
ನಮ್ಮಲ್ಲಿ ಗುಣಮಟ್ಟವಿದೆ ಎಂದ ಚೀನಾ!
ಭಾರತ ಜನಸಂಖ್ಯೆ ವಿಚಾರದಲ್ಲಿ ನಂ.1 ಆಗುತ್ತಿದ್ದಂತೆ ಚೀನಾ ಕೆಲದಿನಗಳ ಹಿಂದೆ ಪ್ರತಿಕ್ರಿಯಿಸಿತ್ತು. ನಮ್ಮ ಬಳಿ ಗುಣಮಟ್ಟವಿದೆ ಎಂದು ಹೇಳುವ ಮೂಲಕ ಚರ್ಚೆ ಹುಟ್ಟುಹಾಕಿತ್ತು ಚೀನಾ. 900 ಮಿಲಿಯನ್ ಗುಣಮಟ್ಟದ ಕಾರ್ಯಪಡೆ ನಮ್ಮಲ್ಲಿ ಇದೆ ಎಂದು ಚೀನಾ ಹೇಳಿತ್ತು. ಗುಣಮಟ್ಟದ ಕಾರ್ಯಪಡೆ ಅಭಿವೃದ್ಧಿಗೆ ಬಲವಾದ ಉತ್ತೇಜನ ನೀಡುತ್ತದೆ ಎನ್ನುವ ಮೂಲಕ ಚೀನಾ ವಿವಾದ ಸೃಷ್ಟಿ ಮಾಡಿತ್ತು. ಇದೀಗ ದಿ ಸ್ಪೀಗೆಲ್ ವ್ಯಂಗ್ಯಚಿತ್ರ ಕೂಡ ಇದೇ ರೀತಿ ಬೇಸರ ಸೃಷ್ಟಿಸುತ್ತಿದೆ. ಅಲ್ಲದೆ ಭಾರತೀಯರು ಕೂಡ ಭಾರತದ ಸಾಧನೆಗಳ ಪಟ್ಟಿ ಮುಂದಿಡುತ್ತಾ ತಿರುಗೇಟು ನೀಡುತ್ತಿದ್ದಾರೆ.

ಜನಸಂಖ್ಯೆ ವಿಚಾರದಲ್ಲಿ ಭಾರತ ನಂಬರ್ 1 ಆಗುತ್ತಿದ್ದಂತೆ ಚೀನಾಗೆ ಇರಿಸು ಮುರಿಸು ಶುರುವಾದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಚೀನಾ, ಮತ್ತೊಂದು ಕಡೆ ಜಗತ್ತಿಗೂ ಇದೇ ರೀತಿಯ ಸಂದೇಶ ನೀಡುತ್ತಿರುವಂತೆ ಭಾಸವಾಗುತ್ತಿದೆ. ಇನ್ನೊಂದು ಕಡೆ ಚೀನಿಯರ ನಾಡಲ್ಲಿ ಜನಸಂಖ್ಯೆ ಕುಸಿತ ಆತಂಕದ ವಾತಾವರಣ ಸೃಷ್ಟಿಮಾಡುತ್ತಿದೆ. ಜನನ ದರದಲ್ಲಿ ಭಾರಿ ಇಳಿಕೆ ಕಂಡಿರುವುದು ಕೂಡ ಚೀನಾಗೆ ಭಯ ಹುಟ್ಟಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಶ್ವಸಂಸ್ಥೆ ನೀಡಿರುವ ಲೆಕ್ಕಾಚಾರದ ಪ್ರಕಾರ ಈಗ ಭಾರತದಲ್ಲಿ ಒಟ್ಟು 1,428.6 ಮಿಲಿಯನ್ ಜನಸಂಖ್ಯೆ ಇದೆ. ಆದರೆ ಚೀನಾದಲ್ಲಿ ಜನಸಂಖ್ಯೆ 1,425.7 ಮಿಲಿಯನ್‌ಗೆ ಕುಸಿತ ಕಂಡಿದೆ. ಈ ಮೂಲಕ 2.9 ಮಿಲಿಯನ್ ಅಂದರೆ 29 ಲಕ್ಷ ಜನಸಂಖ್ಯೆ ವ್ಯತ್ಯಾಸದ ಆಧಾರದಲ್ಲಿ ಭಾರತವೇ ಜಗತ್ತಿನ ನಂಬರ್ 1 ದೇಶ ಎಂಬ ಪಟ್ಟ ಗಿಟ್ಟಿಸಿಕೊಂಡಿದೆ.












Click it and Unblock the Notifications