Indian Railway: ಜುಲೈ 1ರಿಂದ ರೈಲ್ವೆ ಪ್ರಯಾಣ ದುಬಾರಿ, ಪರಿಷ್ಕೃತ ದರ ಎಷ್ಟು? ಮಹತ್ವದ ಅಪ್ಡೇಟ್ಸ್
Indian Railway Fare Hike: ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ರೈಲು ಸಾರಿಗೆ ಅವಲಂಬಿಸುವವರ ಸಂಖ್ಯೆ ಹೆಚ್ಚಾಗಿದೆ. ಸುಗಮ ಸಂಚಾರಕ್ಕಾಗಿ ಒಂದು ಹಳಿಯನ್ನು ದ್ವಿಪಥ ಮಾಡಿರುವ ರೈಲ್ವೆ ಇಲಾಖೆ, ಎಲ್ಲ ಮಾರ್ಗಗಳನ್ನು ವಿದ್ಯುದೀಕರಣಗೊಳಿಸಿದೆ. ಹೊಸ ರೈಲ್ವೆ ಯೋಜನೆಗಳನ್ನು ಘೋಷಿಸಿದೆ. ಇದೀಗ ರೈಲ್ವೆ ಪ್ರಯಾಣ ದರವನ್ನು ಏರಿಕೆ ಮಾಡಿದ್ದು, ಅದು ಜುಲೈ 01ರಿಂದೇ ಜಾರಿಗೆ ಬರುತ್ತಿದೆ. ಹಾಗಾದರೆ ಯಾವ ಪ್ರಯಾಣಿಕರಿಗೆ ಈ ಹೊಸ ದರ ಏರಿಕೆ ಅನ್ವಯವಾಗಲಿದೆ. ಉಪನಗರ ರೈಲು ಟಿಕೆಟ್ ದರವು ಏರಿಕೆ ಆಗುತ್ತಾ?..
ಭಾರತೀಯ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ. ಇದೇ ಜುಲೈ 1ರಿಂದ ಪ್ರಯಾಣಿಕರು ಪರಿಷ್ಕೃತ ಹೆಚ್ಚುವರಿ ದರ ಪಾವತಿಗೆ ಸಜ್ಜಾಗಬೇಕಿದೆ. ವರದಿಗಳ ಪ್ರಕಾರ ದೇಶವನ್ನೇ ಬೆಚ್ಚಿಬೀಳಿಸಿದ್ದ ಕೋವಿಡ್ 19 ಸಾಂಕ್ರಾಮಿಕ ರೋಗದ ಬಳಿಕ ಇದೇ ಮೊದಲ ಬಾರಿಗೆ ರೈಲ್ವೆ ಪ್ರಯಾಣ ದರ ಪರಿಷ್ಕರಿಸಲಾಗಿದೆ.

ಯಾರಿಗೆಲ್ಲ ರೈಲ್ವೆ ದರ ಏರಿಕೆ ಅನ್ವಯ
ರೈಲ್ವೆ ಮೂಲಕ ಪ್ರಯಾಣಿಸುವ ಎಲ್ಲ ವರ್ಗದ ಪ್ರಯಾಣಿಕರಿಗೆ ಈ ದರ ಏರಿಕೆ ಅನ್ವಯಿಸುವುದಿಲ್ಲ. ಬದಲಾಗಿ ಸಾಮಾನ್ಯ ಎರಡನೇ ದರ್ಜೆಯ, ಎಸಿ ಅಲ್ಲದ ರೈಲುಗಳಲ್ಲಿ (ಮೇಲ್ ಮತ್ತು ಎಕ್ಸ್‌ಪ್ರೆಸ್ ಸೇವೆಗಳು ಸೇರಿದಂತೆ) 500 ಕಿ.ಮೀ ಗಿಂತ ಹೆಚ್ಚು ಪ್ರಯಾಣಿಸುವ ಪ್ರಯಾಣಿಕರಿಗೆ ಪರಿಣಾಮ ಬೀರುತ್ತದೆ. ಎಸಿ ಕ್ಲಾಸ್ ನಲ್ಲಿ ಸಂಚರಿಸುವವರಿಗೆ ಪ್ರಯಾಣವು ದುಬಾರಿಯಾಗಲಿದೆ.
ಸೆಕೆಂಡ್ ಕ್ಲಾಸ್ ಸಾಮಾನ್ಯ ವರ್ಗದಲ್ಲಿ 500 ಕಿಲೋ ಮೀಟರ್ ಗೂ ಹೆಚ್ಚು ದೂರ ಕ್ರಮಿಸುವ ಪ್ರಯಾಣಿಕರಿಗೆ ಹೊಸ ದರ ಅನ್ವಯಿಸಲಿದೆ. ಅವರಿಗೆ ಪ್ರತಿ ಕಿಲೋ ಮೀಟರ್ ಅರ್ಧ ಪೈಸೆಯಷ್ಟು ಏರಿಕೆ ಆಗಲಿದೆ. 500 ಕಿ.ಮೀ ವರೆಗಿನ ಕ್ರಮಿಸುವ ಪ್ರಯಾಣಿಕರ ಟಿಕೆಟ್ ದರದಲ್ಲಿ ಹೆಚ್ಚಳ ಆಗುವುದಿಲ್ಲ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.
ಎಕ್ಸ್‌ಪ್ರೆಸ್ ರೈಲುಗಳಲ್ಲಿ (ನಾನ್ ಎಸಿ) ದರವು ಪ್ರತಿ ಕಿ.ಮೀ.ಗೆ 1 ಪೈಸೆಯಷ್ಟು ಏರಿಕೆ ಆಗಲಿದೆ. ಇನ್ನೂ ಎಸಿ ಕ್ಲಾಸ್ ಬೋಗಿಗಳಲ್ಲಿ ಓಡಾಡುವ ರೈಲ್ವೆ ಪ್ರಯಾಣಿಕರಿಗೆ, ದರವು ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಾಗುತ್ತದೆ. ಉಪನಗರ ರೈಲು ದರಗಳು ಅಥವಾ ಮಾಸಿಕ ಸೀಸನ್ ಟಿಕೆಟ್‌ಗಳಲ್ಲಿ ಯಾವುದೇ ಹೆಚ್ಚಳ ಆಗುವುದಿಲ್ಲ ಎಂದು ವರದಿಗಳು ಹೇಳುತ್ತವೆ.
ಜುಲೈ 1ರಿಂದ ತಾತ್ಕಾಲ್ ಟಿಕೆಟ್ ಬುಕ್ಕಿಂಗ್‌ನಲ್ಲಿ ಬದಲಾವಣೆ
ಈವರೆಗೆ ಪ್ರಯಾಣಿಕರು ರೈಲುಗಳ ಟಿಕೆಟ್‌ಗಳನ್ನು ತತ್ಕಾಲ್ ನಲ್ಲಿ ಬುಕ್ಕಿಂಗ್ ಮಾಡುತ್ತಿದ್ದರು. ಇದರಲ್ಲಿ ಪಾರದರ್ಶಕ ಕೊರತೆ ಹಾಗೂ ನೈಜ ಪ್ರಯಾಣಿಕರಿಗೆ ಟಿಕೆಟ್ ಸಿಗದೇ ಸಮಸ್ಯೆ ಆಗುತ್ತಿತ್ತು. ಈ ಕಾರಣದಿಂದಾಗಿ ರೈಲ್ವೆ ಇಲಾಖೆಯು ತತ್ಕಾಲ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವಾಗ ಪ್ರಯಾಣಿಕರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದೆ. ಈ ಬಗ್ಗೆ ಜೂನ್ 10ರಂದು ಆದೇಶ ಹೊರಡಿಸಲಾಗಿದ್ದು, ಜುಲೈ 1ರಿಂದ ಜಾರಿ ಬರಲಿದೆ.
ತಾತ್ಕಾಲ್‌ನಲ್ಲಿ ಬುಕಿಂಗ್ ಮಾಡುವ ಸಂದರ್ಭದಲ್ಲಿ ಏಜೆಂಟ್‌ಗಳಿಗೆ ನಿರ್ಬಂಧ ವಿಧಿಸಲಾಗಿದೆ. ತಾತ್ಕಾಲ್ ಬುಕ್ಕಿಂಗ್‌ನ 30 ನಿಮಿಷಗಳ ಅವಧಿಯಲ್ಲಿ ಎಸಿ ತರಗತಿಗಳಿಗೆ ಬೆಳಗ್ಗೆ 10 ಗಂಟೆಯಿಂದ 10:30 ರವರೆಗೆ ಹಾಗೂ ನಾನ್ ಎಸಿ ತರಗತಿಗಳಿಗೆ ಬೆಳಗ್ಗೆ 11ಗಂಟೆಯಿಂದ 11:30 ಗಂಟೆವರೆಗೆ ಬುಕ್ಕಿಂಗ್ ಏಜೆಂಟ್‌ಗಳಿಗೆ ಅವಕಾಶ ನಿಷೇಧಿಸಲಾಗಿದೆ. ಇದರಿಂದ ಏಜೆಂಟರುಗಳು ಟಿಕೆಟ್ ಖರೀದಿಗೆ ಅವಕಾಶ ಸಿಗದಂತಾಗುತ್ತದೆ. ಪಾದರ್ಶಕತೆ ಹೆಚ್ಚುತ್ತದೆ.












Click it and Unblock the Notifications