ಜಗನ್ನಾಥ ರಥಯಾತ್ರೆ, ಓಣಂಗೆ ರೈಲ್ವೆಯ ಬಿಗ್ ಗಿಫ್ಟ್! 400ಕ್ಕೂ ಹೆಚ್ಚು ವಿಶೇಷ ರೈಲುಗಳ ಘೋಷಣೆ
ಮುಂಬರುವ ಜಗನ್ನಾಥ ರಥಯಾತ್ರೆ ಹಾಗೂ ಓಣಂ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಮತ್ತು ಪ್ರಯಾಣಕ್ಕೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಇಲಾಖೆಯು 400ಕ್ಕೂ ಹೆಚ್ಚು ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ, ಹಬ್ಬದ ದಿನಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಭುವನೇಶ್ವರದ ರೈಲ್ ಸದನ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅನೇಕ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಹತ್ವದ 'ನಾಂದೇಡ್-ಮುಂಬೈ ಎಕ್ಸ್‌ಪ್ರೆಸ್' ಹಾಗೂ 'ತನಕ್‌ಪುರ-ನಾಂದೇಡ್ ಎಕ್ಸ್‌ಪ್ರೆಸ್' ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಾಯಿತು. ಇದರೊಂದಿಗೆ, ಪ್ರಯಾಣಿಕರ ಅನುಕೂಲಕ್ಕಾಗಿ ಸದ್ಯ ಚಾಲ್ತಿಯಲ್ಲಿರುವ ತನಕ್‌ಪುರ-ಪಿಲಿಭಿತ್ ರೈಲು ಸೇವೆಯನ್ನು ಶಾಹಜಹಾನ್‌ಪುರದವರೆಗೆ ವಿಸ್ತರಿಸುವ ಮಹತ್ವದ ಯೋಜನೆಯನ್ನೂ ಸಹ ಇದೇ ವೇಳೆ ಉದ್ಘಾಟನೆ ಮಾಡಲಾಗಿದೆ.

ಹಬ್ಬಗಳ ಸೀಸನ್: ಜಗನ್ನಾಥ ರಥಯಾತ್ರೆಗೆ 300ಕ್ಕೂ ಹೆಚ್ಚು ವಿಶೇಷ ರೈಲು
ಒಡಿಶಾದ ಪುರಿಯಲ್ಲಿ ಜರುಗುವ ಐತಿಹಾಸಿಕ ಜಗನ್ನಾಥ ರಥಯಾತ್ರೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 300ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಕಾರ್ಯಾಗತಗೊಳಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಕೇರಳದ ಪ್ರಸಿದ್ಧ ಓಣಂ ಹಬ್ಬದ ಪ್ರಯುಕ್ತವೂ ಸಹ ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ 100ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಪ್ರಕಟಿಸಿದರು.
"ಕಳೆದ ಬೇಸಿಗೆಯ ಅವಧಿಯಲ್ಲಿ, ಜೂನ್ 30ರವರೆಗೆ ದೇಶಾದ್ಯಂತ ದಾಖಲೆಯ 15 ಸಾವಿರ ವಿಶೇಷ ರೈಲುಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ. ಮುಂಬರುವ ಹಬ್ಬದ ದಿನಗಳಲ್ಲೂ ಸಹ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಸುರಕ್ಷಿತ, ಸುಲಭ ಮತ್ತು ಕೈಗೆಟುಕುವ ದರದಲ್ಲಿ ಅತ್ಯುತ್ತಮ ಸೇವೆ ಒದಗಿಸುವುದೇ ಭಾರತೀಯ ರೈಲ್ವೆಯ ಪ್ರಮುಖ ಗುರಿಯಾಗಿದೆ," ಎಂದು ಹೇಳಿದರು.
ಹೊಸ ರೈಲುಗಳ ಮೂಲಕ ಸಂಪರ್ಕ ಕ್ರಾಂತಿ: ಸಿಖ್ ಸಮುದಾಯದ ದಶಕಗಳ ಬೇಡಿಕೆ ಈಡೇರಿಕೆ
ನೂತನ ರೈಲು ಸೇವೆಗಳ ಆರಂಭದಿಂದ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಹಾರಾಷ್ಟ್ರದ ಹಲವು ಪ್ರಮುಖ ಪ್ರದೇಶಗಳ ನಡುವೆ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ ಎಂದು ರೈಲ್ವೆ ಸಚಿವರು ತಿಳಿಸಿದರು. ಈ ಕುರಿತು ಮಾತನಾಡಿದ ಅವರು, "ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ತರಾಯಿ ಭಾಗದ ಸಿಖ್ ಬಾಂಧವರಿಂದ ನಾಂದೇಡ್ ಸಾಹಿಬ್‌ಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಆಗಿತ್ತು. ಇದೀಗ ಆ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ. ಈ ಹೊಸ ರೈಲು ಸೇವೆಯು ಪಂಚ ತಖ್ತ್‌ಗಳ ದರ್ಶನ ಪಡೆಯಲು ಇಚ್ಚಿಸುವ ಭಕ್ತರ ಧಾರ್ಮಿಕ ಆಶಯಕ್ಕೆ ದೊಡ್ಡ ಬಲ ನೀಡಲಿದೆ," ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಯಾಣಿಕರ ಗಮನಕ್ಕೆ: ಖಟಿಮಾ ಮತ್ತು ಬನ್ಬಾಸಾ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಸಾರ್ವಜನಿಕರಿಂದ ಬಂದಿರುವ ಮನವಿಯನ್ನು ಇಲಾಖೆಯು ಸಕಾರಾತ್ಮಕವಾಗಿ ಸ್ವೀಕರಿಸಿದೆ. ಈ ಕುರಿತಾದ ಪ್ರಕ್ರಿಯೆಗಳು ಸದ್ಯ ಪರಿಶೀಲನಾ ಹಂತದಲ್ಲಿದ್ದು, ಎಲ್ಲವೂ ಸರಿಯಾಗಿದ್ದರೆ ಅತಿ ಶೀಘ್ರದಲ್ಲೇ ಇವೆರಡೂ ನಿಲ್ದಾಣಗಳಲ್ಲಿ ರೈಲು ನಿಲ್ಲಿಸಲು ಹಸಿರು ನಿಶಾನೆ ಸಿಗಲಿದೆ ಎಂದು ಭರವಸೆ ನೀಡಿದರು.
ಮಹಾರಾಷ್ಟ್ರಕ್ಕೂ ಹೊಸ ಅನುಕೂಲ
ಇದೇ ವೇಳೆ ರೈಲ್ವೆ ಇಲಾಖೆಯು ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ ಪ್ರದೇಶಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ನಾಂದೇಡ್-ಮುಂಬೈ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಿದೆ. ಇದರಿಂದ ವಾಶಿಂ, ಹಿಂಗೋಲಿ ಹಾಗೂ ಬಸ್ಮತ್ ನಿವಾಸಿಗಳ ಪ್ರಯಾಣ ಇನ್ಮುಂದೆ ಮತ್ತಷ್ಟು ಸುಗಮವಾಗಲಿದೆ. ಮತ್ತೊಂದೆಡೆ, ತನಕ್‌ಪುರ-ಪಿಲಿಭಿತ್ ರೈಲನ್ನು ಈಗ ಶಾಹಜಹಾನ್‌ಪುರದವರೆಗೂ ವಿಸ್ತರಿಸಲಾಗಿದ್ದು, ಈ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆ ಸಿಕ್ಕಂತಾಗಿದೆ. ಇದರ ಜೊತೆಗೆ, ಪ್ರವಾಸಿಗರಿಗೆ ನೆರವಾಗುತ್ತಿದ್ದ ತನಕ್‌ಪುರ-ಆಗ್ರಾ ವಿಶೇಷ ರೈಲನ್ನು ಇನ್ಮುಂದೆ ಪ್ರತಿದಿನ ಸಂಚರಿಸುವ ನಿಯಮಿತ ರೈಲನ್ನಾಗಿ ಪರಿವರ್ತಿಸಿ ರೈಲ್ವೆ ಇಲಾಖೆ ಆದೇಶಿಸಿದೆ.
ಭಾರತೀಯ ರೈಲ್ವೆಯಲ್ಲಿ ಅಭೂತಪೂರ್ವ ಕ್ರಾಂತಿ: ಸಚಿವ ಅಶ್ವಿನಿ ವೈಷ್ಣವ್
ಕಳೆದ 12 ವರ್ಷಗಳಲ್ಲಿ ಭಾರತೀಯ ರೈಲ್ವೆ ವಲಯದಲ್ಲಿ ಮಹತ್ತರ ಬದಲಾವಣೆಗಳಾಗಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಾದ್ಯಂತ ಬರೋಬ್ಬರಿ 37 ಸಾವಿರ ಕಿಲೋಮೀಟರ್‌ನಷ್ಟು ಹೊಸ ರೈಲು ಹಳಿಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಾದರಿಯಲ್ಲಿ ಶೇಕಡಾ 99.6ರಷ್ಟು ರೈಲ್ವೆ ವಿದ್ಯುದೀಕರಣ (Electrification) ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೈಲ್ವೆ ಇಲಾಖೆ ಅತ್ಯಂತ ವೇಗವಾಗಿ ಆಧುನೀಕರಣಗೊಳ್ಳುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.














Click it and Unblock the Notifications