ಕೈ ಮಗ್ಗ ಉಳಿದರೆ ದೇಶ ಉಳಿದಂತೆ, ಅದನ್ನು ಉಳಿಸಲು ಕರೆ ನೀಡಿದರೆ ಜೆನ್ ಜೀಗಳೇಕೆ ಪ್ರೈಮ್ ಇನ್‌ಫ್ಲುಯನ್ಸರ್ ಅನ್ನೋದು?
PM Narendra Modi ನೇತೃತ್ದನ ಎನ್‌ಡಿಎ ಸರಕಾರದಲ್ಲಿ ಕೇಂದ್ರ ಜವಳಿ ಸಚಿವೆಯಾಗಿದ್ದ ಸ್ಮೃತಿ ಇರಾನಿ ರಾಷ್ಟ್ರೀಯ ಕೈ ಮಗ್ಗ ದಿನದ ಮೌಲ್ಯ ಹೆಚ್ಚಿಸಿದರು. ಅವರು ನಮ್ಮ ದೇಶದ ವಿವಿಧ ರಾಜ್ಯಗಳ ಕೈ ಮಗ್ಗ ಸೀರೆ ಪ್ರಚಾರಕ್ಕೆ ತಮ್ಮದೇ ಶೈಲಿ ಬಳಸಿಕೊಂಡಿದ್ದರು. ಅಷ್ಟೇ ಅಲ್ಲ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರೂ ಪ್ರತೀ ವರ್ಷ ಬಜೆಟ್ ಮಂಡಿಸುವಾಗಲೂ ಭಾರತದ ವಿವಿಧ ರಾಜ್ಯಗಳ ವಿಶೇಷ ಸೀರೆಗಳನ್ನೇ ತೊಟ್ಟು, ತಮ್ಮ ದೇಶದ ಕೈ ಮಗ್ಗ ಪ್ರಚಾರವನ್ನು ಪರೋಕ್ಷವಾಗಿ ಮಾಡುತ್ತಿದ್ದಾರೆ. ಇದೀಗ ಮೋದಿಯೂ ಅದೇ ಕೆಲಸ ಮಾಡಿದ್ದಾರೆ. ನಮ್ಮ ದೇಶದ ಖಾದಿ ಹಾಗೂ ಕೈ ಮಗ್ಗಕ್ಕೆ ತನ್ನದೇ ಆದ ಮೌಲ್ಯವಿದ್ದು, ಭಾರತದ ಸ್ವಾತಂತ್ರ್ಯ ಹೋರಾಟದೊಂದಿಗೂ ಬೆಸೆದುಕೊಂಡಿದೆ. ಅಲ್ಲದೇ ಇಂದಿಗೂ ಅದನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಕುಟುಂಬಗಳಿವೆ ನಮ್ಮ ಭಾರತದಲ್ಲಿ.

ಪ್ರಧಾನಿ ನರೇಂದ್ರ ಮೋದಿ (Indian PM Narendra Modi) ಕೈ ಮಗ್ಗದ ವಿಶೇಷತೆ ಬಗ್ಗೆ ಮಾತನಾಡಿ, ತಮ್ಮಲ್ಲಿರುವ ಕೈ ಮಗ್ಗದ ವಸ್ತ್ರಗಳನ್ನು ತೋರಿಸಿ, ಬಳಸಿ, ಶುದ್ಧ ಕೈ ಮಗ್ಗದ ಬಗ್ಗೆ ಮಾತನಾಡಿದರೆ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮೋದಿಯೊಬ್ಬ ಪ್ರೈಮ್ ಇನ್‌ಫ್ಲುಯನ್ಸರ್ ಅಂತ ಹೇಳಿದ್ದು ತಪ್ಪಲ್ವಾ? ಇದು ನಮ್ಮ ಭಾರತದ ಮೌಲ್ಯವನ್ನು ಎಲ್ಲೆಡೆ ಎತ್ತಿ ಹಿಡಿಯುವ ಕೈ ಮಗ್ಗ ನೇಕಾರರಿಗೆ ಮಾಡುವ ಅವಮಾನವಲ್ಲವೇ? ದೇಶ, ಸಮಾಜದ ಬಗ್ಗೆ ತಮಗಿರುವ ಕಳಕಳಿಯನ್ನು ಸಾಬೀತು ಪಡಿಸಲು ದೀಪ್ಕೆ ಮತ್ತು ತಂಡಕ್ಕೆ ಮತ್ತೊಂದು ಅವಕಾಶ ಸಿಕ್ಕಿತ್ತು. ನಾವೂ ಕೈ ಮಗ್ಗದ ವಸ್ತ್ರ ಸೇರಿ ಇತರೆ ಸ್ವದೇಶಿ ಉತ್ಪನ್ನಗಳನ್ನು ಬಳಸುತ್ತೇವೆಂದು ಹೇಳಿದ್ದರೂ ಸಾಕಾಗಿತ್ತು. ಸಂಕಷ್ಟದಲ್ಲಿರುವ ಕೈ ಮಗ್ಗ ನೇಕಾರರ ಕತ್ತಲ ಬದುಕಿಗೆ ಬೆಳಕು ಸಿಕ್ಕಂತಾಗುತ್ತಿತ್ತು.
ಆರೋಗ್ಯ, ಪರಿಸರ ಸ್ನೇಹಿ ಕೈ ಮಗ್ಗ
ಆರೋಗ್ಯ, ಪರಿಸರ ಸ್ನೇಹಿ ಆಗಿರುವ ಖಾದಿ ಹಾಗೂ ಕೈ ಮಗ್ಗ ಉತ್ಪನ್ನಗಳು ಆಧುನೀಕತೆಗೆ ತಕ್ಕಂತೆ ತನ್ನದೇ ಮಾರ್ಪಾಡು ಮಾಡಿಕೊಡು, ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ಬಹುತೇಕ ಆ ಉತ್ಪನ್ನಗಳು ನೈಜ ಕೈಮಗ್ಗದ ಉತ್ಪನ್ನಗಳಲ್ಲ. ನಿಜ ಹೇಳ ಬೇಕೆಂದರೆ ಕೈ ಮಗ್ಗವನ್ನು ಉಳಿಸಲು ಪ್ರಧಾನಿಯಿಂದ ಹಿಡಿದು ಪ್ರತಿಯೊಬ್ಬರೂ ಭಾಷಣ ಮಾಡುತ್ತಿದ್ದರೂ, ಜನರಿಗೆ ಈ ಉತ್ಪನ್ನಗಳನ್ನು ಬಳಸಲು ಕರೆ ನೀಡುತ್ತಿದ್ದರೂ ಮಾರುಕಟ್ಟೆಯಲ್ಲಿ ಕೈ ಮಗ್ಗದ ಹೆಸರಲ್ಲಿ ಮಾರಾಟವಾಗುತ್ತಿರುವ ನಕಲಿ ವಸ್ತುಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಎಲ್ಲೀವರೆಗೆ ನೈಜ ಕೈಮಗ್ಗ ಉತ್ಪನ್ನಗಳಿಗೆ ತಕ್ಕ ಬೆಲೆ ಸಿಗುವುದಿಲ್ಲವೋ ಅಲ್ಲೀವರಿಗೂ ಈ ಕಾರ್ಮಿಕರ ಸಂಕಟ ಕೊನೆಯಾಗುವುದಿಲ್ಲ. ಅಸಂಘಟಿತವಾಗಿರುವ ಈ ಕ್ಷೇತ್ರ ಎಲ್ಲಡೆ ತಮ್ಮದೇ ಆದ ರೀತಿಯಲ್ಲಿ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಸೂಕ್ತ ಮಾರಕಟ್ಟೆ ಸಿಗದೇ ಸಂಕಷ್ಟದಲ್ಲಿದೆ. ಅವನ್ನು ಸರಿಯಾಗಿ ಪ್ರಚಾರ ಮಾಡಿ, ಎಲ್ಲರೂ ಬಳಸುವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು.
ಭಾರತದ ಹಲವು ಹಳ್ಳಿಗಳಲ್ಲಿ ನೂಲು ತಯಾರಾಗುವುದೇ ನಿಂತು ಹೋಗಿದೆ. ಚರಕಗಳು ಸ್ತಬ್ಧವಾಗಿವೆ. ಅಂದರೆ ನೇಕಾರರ ಬದುಕೂ ಮಂಕಾಗುತ್ತಿದೆ. ಇವೆರಲ್ಲರ ಬಾಳು ಹಸನಾಗಲು, ಮತ್ತೊಮ್ಮೆ ದೇಶದಲ್ಲಿ ಕೈ ಮಗ್ಗ ಉತ್ಪನ್ನಗಳನ್ನು ಬಳಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿದೆ. 'ಕೈ ಮಗ್ಗ ಎಂದರೆ ಕೇವಲ ವಸ್ತ್ರವಲ್ಲ. ಅದೊಂದು ಜೀವನ ವ್ಯವಸ್ಥೆ. ಹತ್ತಿ ತೆಗೆಯುವವರಿಂದ ಆರಂಭವಾಗಿ ನೂಲು ತೆಗೆಯುವವರು, ನೈಸರ್ಗಿಕ ಬಣ್ಣ ತಯಾರಿಸುವವರು, ಗಂಜಿ ಬಳಿಯುವವರು, ನೇಕಾರರು, ಕಸೂತಿ ಕಲಾವಿದರು, ಟೈಲರ್ಸ್ ಮತ್ತು ಅವನ್ನು ಮಾರುಕಟ್ಟೆಗೆ ತಂದು ಮಾರುವವರು...ಇಷ್ಟು ಜನರಿಗೆ ಕೆಲಸ ಕೊಡುತ್ತದೆ. ಕೈ ಮಗ್ಗ ಉಳಿದವರೆ ಒಂದು ಸಮುದಾಯವೇ ಉಳಿದಂತೆ,' ಎಂದು ಚರಕ ಸಂಸ್ಥೆಯ ಪ್ರಸನ್ನ ಅವರು ತಮ್ಮ ಒಂದು ಲೇಖನದಲ್ಲಿ ಉಲ್ಲೇಖಿಸಿದ್ದರು. ಭಾರತದ ಬೆನ್ನೆಲುಬಾಗಿರುವ ಕೃಷಿಕರನ್ನೂ ಸೇರಿಸಿ, ಇಷ್ಟು ಜನರಿಗೆ ಕೆಲಸ ಕೊಡುವ ಕೈ ಮಗ್ಗ ಉತ್ಪನ್ನಗಳ ಬಗ್ಗೆ ಮೋದಿ ಮಾತನಾಡಿದರೆ, ಜೆನ್ ಜೀ ನಾಯಕ ದೀಪ್ಕೆ ಇನ್‌ಫ್ಲುಯೆನ್ಸರ್ ಎಂದು ಕರೆದಿರುವುದು ಉಡಾಫೆಯಲ್ಲದೇ ಮತ್ತಿನ್ನೇನು? ನಮ್ಮ ದೇಶದ ಮೌಲ್ಯಗಳ ಬಗ್ಗೆ ಈ ಜನಾಂಗಕ್ಕೆ ಅರಿವು ಇರುವ ಬಗ್ಗೆ ಮತ್ತೊಮ್ಮೆ ಅನುಮಾನಗಳು ಮೂಡುವ ಹಾಗೆ ಮಾಡಿದೆ.
ಬ್ರಾಂಡೆಂಡ್ ಬಟ್ಟೆ ಗುಟ್ಟು ಮೊದಲು ತಿಳ್ಕೊಳ್ಳಿ:
ಸಾವಿರಾರು ರುಪಾಯಿ ಕೊಟ್ಟು ಬ್ರಾಂಡೆಂಡ್ ಬಟ್ಟೆಗಳನ್ನು ಕೊಳ್ಳುವ ಮಂದಿಗೆ, ಅದನ್ನು ಉತ್ಪಾದಿಸಲು ಅದೆಷ್ಟು ಕಾಡ ನಾಶವಾಗುತ್ತಿದೆ ಎಂಬ ಅರಿವಾದರೂ ಇದೆಯಾ? ಜಾಗತಿಕ ತಾಪಮಾನಕ್ಕೆ ನಾವು ತೊಡುವ ಬಟ್ಟೆ ಹಾಗೂ ತಿನ್ನುವ ಆಹಾರವೂ ಕಾರಣವಾಗಬಲ್ಲದು ಎಂಬ ಸಣ್ಣದೊಂದು ಅರಿವು ಪ್ರತಿಯೊಬ್ಬರಿಗೂ ಇರಬೇಕಲ್ವಾ? ನೈಸರ್ಗಿಕವಾಗಿ ಬೆಳೆದು, ನೈಸರ್ಗಿಕ ಬಣ್ಣಗಳನ್ನೇ ಬಳಸುವ ಕೈ ಮಗ್ಗ ಉತ್ಪನ್ನಗಳು ನಮ್ಮ ಆರೋಗ್ಯಕ್ಕೂ ಹಿತ, ಪರಿಸರದ ಉಳಿವಿಗೂ ಅಗತ್ಯ ಎಂಬ ಸಾಮಾನ್ಯ ಜ್ಞಾನ ಇಂದಿನ ಅಗತ್ಯವಲ್ಲವೇ?
ಎಲ್ಲೆಡೆ ಕೆಲಸಗಳು ಸೃಷ್ಟಿಯಾಗುತ್ತಿಲ್ಲ. ಸರಕಾರಿ ನೌಕರಿಯಂತೂ ಕನಸಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಕುಲ ಕಸುಬುಗಳನ್ನೇ ವೃತ್ತಪರ ಉದ್ಯೋಗವನ್ನಾಗಿ ಮಾರ್ಪಾಡಿಸಿ, ಅದಕ್ಕೊಂದು ಘನತೆ, ಗೌರವ ತರುವ ಕಾರ್ಯವನ್ನಾಗಿ ಬದಲಾಯಿಸೋದು ಜೆನ್ ಜೀಗಳ ಮುಂದಿರುವ ಸವಾಲು. ಯಾವುದೋ ಊರಲ್ಲಿ ತಯಾರಾಗುವ ಕೈ ಮಗ್ಗ ಉತ್ಫನ್ನಗಳನ್ನು ಬಳಸಿ, ಅದರ ಮಾರುಕಟ್ಟೆ ಮಾಡಲು ಅನುವು ಮಾಡಿ ಕೊಟ್ಟು, ಆತ್ಮನಿರ್ಭರ ಭಾರತದತ್ತ ಹೆಜ್ಜೆ ಹಾಕೋದು ನಮ್ಮೆಲ್ಲರ ಕರ್ತವ್ಯವಲ್ಲವೇ?
ಭಾರತೀಯ ಸಂಸ್ಕೃತಿಗೆ ಮೊದಲು ಬೆಲೆ ಕೊಡಲಿ
ನೀ್ಟ್ ಅಕ್ರಮ ವಿರೋಧಿಸಿ ಹೋರಾಡಿದ್ದು ಸರಿ. ಹಠ ಮಾಡಿ ಅದಕ್ಕೆ ಕಾರಣವಾದವರ ರಾಜೀನಾಮೆ ಪಡೆದಿದ್ದೂ ಸಂತೋಷ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದಂತೆ ತಮ್ಮ ಹಕ್ಕಿಗಾಗಿ ಪ್ರತಿಭಟಿಸಿದವರನ್ನು ಖಂಡಿತಾ ದೇಶ ದ್ರೋಹಿಗಳೆಂದು ಹೇಳಲು ಆಗುವುದಿಲ್ಲ. ಅವರು ಪ್ರಾಮಾಣಿಕರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಅವರು ಮಾಡಿದ್ದು, ಹೇಳಿದ್ದೆಲ್ಲವೂ ಸರಿ ಎಂದರೆ ಹೇಗೆ? ನಮ್ಮ ದೇಶದ ಮೌಲ್ಯಗಳಿಗೆ ಮೊದಲು ಬೆಲೆ ಕೊಡುವುದನ್ನು ಕಲಿಯಬೇಕಲ್ಲವೇ? ಬೇರುಗಳನ್ನೇ ಕಡಿದು, ಮರ ಏರಲು ಯತ್ನಿಸಿದರೆ ಏನು ಫಲ?
ಯಾರು ಏನೇ ಹೇಳಲಿ, ಕೂಗಲಿ ಭಾರತೀಯ ಸಂಸ್ಕೃತಿ, ಪದ್ಧತಿ, ವಸ್ತುಗಳು ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಇಲ್ಲಿ ಯೋಗ, ಧ್ಯಾನ ಯಾವ ಆಧುನಿಕ ಸ್ಟ್ರೆಸ್ ಮ್ಯಾನೇಜ್‌ಮೆಂಟ್‌ಗೂ ಸಮವಾಗಲು ಸಾಧ್ಯವೇ ಇಲ್ಲ. ನಮ್ಮಲ್ಲಿರುವ ಎಲ್ಲವೂ ಕೆಟ್ಟದ್ದು ಎಂಬ ಮನಸ್ಥಿತಿಯನ್ನು ಹೊಗಲಾಡಿಸಿಕೊಂಡು, ಒಳ್ಳೇಯದನ್ನು ಆರಿಸಿಕೊಂಡು, ಹೊಸ ವಿಚಾರಧಾರೆಗಳೊಂದಿಗೆ ಹೆಜ್ಜೆ ಹಾಕುವುದ ಬಿಟ್ಟು, ನಮ್ಮ ಸನಾತನ ಮೌಲ್ಯಗಳನ್ನು ಆಡಿಕೊಂಡು, ತಮ್ಮ ಕಾಲ ಕೆಳಗಿನ ಮ್ಯಾಟ್ ಮಾಡಿಕೊಳ್ಳಲು ಹೊರಟರೆ ಜೆನ್ ಜೀಗಳ ಭವಿಷ್ಯ ಮಸುಕಾಗುವುದೇ ಹೊರತು, ತಾವು ಅಂದು ಕೊಂಡಂತೆ ದೇಶವನ್ನು ಬದಲಾಯಿಸೋದು ಕಷ್ಟ. ಆರೋಗ್ಯ, ಪರಿಸರ ಉಳಿದರೆ ಮಾತ್ರ ನಾವು. ಮೊದಲು ಆ ಕಡೆ ಗಮನ ಹರಿಸೋದು ಮುಖ್ಯ. ನಂತರ ಉಳಿದದ್ದು ಎಲ್ಲವೂ ಕಾರ್ಯಗತಗೊಳ್ಳುತ್ತದೆ ಅಲ್ಲವೇ?


Click it and Unblock the Notifications
