ಬಿಸ್ಕತ್, ನಿಂಬೆಹಣ್ಣಿನ ಶರಬತ್ತು ಮಾರಿ 15 ಸಾವಿರ ಬಡ ಮಕ್ಕಳಿಗೆ ಪುಸ್ತಕಗಳನ್ನ ದಾನ ಮಾಡಿದ ಅಣ್ಣ-ತಂಗಿ

ಒಳ್ಳೆಯ ಕೆಲಸಗಳನ್ನ ಮಾಡಲು ವಯಸ್ಸು ಅಥವಾ ಸಂಪತ್ತಿನ ಅಗತ್ಯವಿಲ್ಲ, ಬದಲಾಗಿ ಇತರರಿಗೆ ಸಹಾಯ ಮಾಡಬೇಕೆಂಬ ಶುದ್ಧ ಮನಸ್ಸಿದ್ದರೆ ಸಾಕು. ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಅಣ್ಣ-ತಂಗಿ ಜೋಡಿಯಾದ ರೋಹನ್ ಸತೀಜಾ ಹಾಗೂ ಅನ್ಯಾ ಸತೀಜಾ ಈ ಮಾತನ್ನ ಅಕ್ಷರಶಃ ಸಾಬೀತುಪಡಿಸಿದ್ದಾರೆ.

2018ರಲ್ಲಿ ಕೇವಲ ನಿಂಬೆಹಣ್ಣಿನ ಶರಬತ್ತು ಹಾಗೂ ಬಿಸ್ಕತ್ ಮಾರಿ ಹಣ ಸಂಗ್ರಹಿಸುವ ಮೂಲಕ ಬಡ ಮಕ್ಕಳಿಗೆ ಪುಸ್ತಕಗಳನ್ನ ಕೊಡಿಸುವ ಸಣ್ಣ ಪ್ರಯತ್ನವನ್ನು ಆರಂಭಿಸಿದ ಈ ಮಕ್ಕಳು, ಇಂದು ಲೆಟ್ಸ್ ಲರ್ನ್ ಫೌಂಡೇಶನ್' ಎಂಬ ಸಂಸ್ಥೆಯನ್ನ ಕಟ್ಟಿ ಬೆಳೆಸಿದ್ದಾರೆ.

Indian Origin Siblings Rohan amp amp Anya Satija Donate 100 000 Books Through Their Let s Learn Foundation In Texas

ಈ ಸಂಸ್ಥೆಯ ಮೂಲಕ ಟೆಕ್ಸಾಸ್‌ನಾದ್ಯಂತ ಇದುವರೆಗೆ 1 ಲಕ್ಷ ಪುಸ್ತಕಗಳು, 1.25 ಲಕ್ಷ ಕಲಿಕಾ ಸಾಮಗ್ರಿಗಳು ಹಾಗೂ ಮಾನಸಿಕ ಆರೋಗ್ಯ ಕಿಟ್‌ಗಳನ್ನ ವಿತರಿಸುವ ಮೂಲಕ ಬರೋಬ್ಬರಿ 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕಾಗಿದ್ದಾರೆ.

ವೈಯಕ್ತಿಕ ಹೋರಾಟವೇ ಸಮಾಜ ಸೇವೆಗೆ ಪ್ರೇರಣೆ

ರೋಹನ್ ಮತ್ತು ಅವರ ಕುಟುಂಬ 2018ರಲ್ಲಿ ನ್ಯೂಜಿಲೆಂಡ್‌ನಿಂದ ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್‌ಗೆ ವಲಸೆ ಬಂದಿತ್ತು. ಹೊಸ ಪರಿಸರ, ಹೊಸ ಸಂಸ್ಕೃತಿಗೆ ಹೊಂದಿಕೊಳ್ಳಲು ರೋಹನ್ ಆರಂಭದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದರು. ಈ ಬದಲಾವಣೆಗಳಿಂದಾಗಿ ಅವರು ತೀವ್ರ ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್‌ನಂತಹ ಮಾನಸಿಕ ಸಮಸ್ಯೆಗಳನ್ನ ಸಹ ಎದುರಿಸಿದ್ದರು. ಆ ಸಮಯದಲ್ಲಿ ಅವರಿಗೆ ಅತಿ ಹೆಚ್ಚು ಸಾಂತ್ವನ ನೀಡಿದ್ದು ಹಾಗೂ ಹೊಸ ಪರಿಸರವನ್ನ ಅರ್ಥಮಾಡಿಕೊಳ್ಳಲು ನೆರವಾಗಿದ್ದು ಪುಸ್ತಕಗಳು.

ಬಳಿಕ ಶಾಲೆಯ ಪ್ರಾಜೆಕ್ಟ್ ಒಂದರ ಮೂಲಕ ಟೆಕ್ಸಾಸ್‌ನಲ್ಲಿರುವ 'ಬುಕ್ ಡೆಸರ್ಟ್ಸ್' ಅಂದರೆ, ಮಕ್ಕಳಿಗೆ ಓದಲು ಪುಸ್ತಕಗಳೇ ಸಿಗದ ಹಿಂದುಳಿದ ಪ್ರದೇಶಗಳ ಬಗ್ಗೆ ರೋಹನ್ ಅರಿತುಕೊಂಡರು. ತಮಗೆ ಸಾಂತ್ವನ ನೀಡಿದ ಪುಸ್ತಕಗಳು ಇತರೆ ಮಕ್ಕಳಿಗೂ ಸಿಗಬೇಕು ಎಂದು ನಿರ್ಧರಿಸಿದ 10 ವರ್ಷದ ರೋಹನ್, ತನಗಿಂತ 2 ವರ್ಷ ಚಿಕ್ಕವಳಾದ ತಂಗಿ ಅನ್ಯಾ ಜೊತೆ ಸೇರಿ ಈ ಅಭಿಯಾನ ಆರಂಭಿಸಿದರು.

ತಮ್ಮ ನೆರೆಹೊರೆಯಲ್ಲಿ ಕುಕೀಸ್ ಮತ್ತು ಲೆಮನೇಡ್ ಮಾರಿ ಬಂದ ಹಣದಲ್ಲಿ ಪುಸ್ತಕಗಳನ್ನ ಖರೀದಿಸಿ ದಾನ ಮಾಡಲು ಶುರುಮಾಡಿದರು. ಕೇವಲ 9 ತಿಂಗಳಲ್ಲಿ ಅವರ ಈ ಸಣ್ಣ ಪ್ರಯತ್ನ 'ಲೆಟ್ಸ್ ಲರ್ನ್ ಫೌಂಡೇಶನ್' ಎಂಬ ಲಾಭರಹಿತ ಸಂಸ್ಥೆಯಾಗಿ ರೂಪುಗೊಂಡಿತು.

ಮಾನಸಿಕ ಆರೋಗ್ಯ ಬೆಂಬಲ

ಕಳೆದ ಆರು ವರ್ಷಗಳಲ್ಲಿ ಈ ಅಣ್ಣ-ತಂಗಿಯ ಸಂಸ್ಥೆಯು ಕೇವಲ ಪುಸ್ತಕ ದಾನಕ್ಕೆ ಮಾತ್ರ ಸೀಮಿತವಾಗಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೂ, ಅವರ ಮಾನಸಿಕ ಆರೋಗ್ಯಕ್ಕೂ ನೇರ ಸಂಬಂಧವಿದೆ ಎಂಬುದನ್ನು ಅರಿತ ಅವರು, ಶಾಲೆಗಳಿಗೆ ಮಾನಸಿಕ ಆರೋಗ್ಯ ಕಿಟ್‌ಗಳನ್ನ ಒದಗಿಸಲು ಮುಂದಾದರು. ಇದರ ಜೊತೆಗೆ ಹೇಯ್ಸ್ ಕೌಂಟಿ ಜುವೆನೈಲ್ ಸೆಂಟರ್‌ನಲ್ಲಿ (ಬಾಲಾಪರಾಧಿಗಳ ಕೇಂದ್ರ) 'ವೈಬ್ರೆಂಟ್ ವಾಯ್ಸಸ್ ಪ್ರಾಜೆಕ್ಟ್' ಎಂಬ ಸೃಜನಶೀಲ ಬರವಣಿಗೆ ಮತ್ತು ರಂಗಭೂಮಿ ಕಾರ್ಯಕ್ರಮವನ್ನ ಸಹ ಆರಂಭಿಸಿದ್ದಾರೆ.

ಈ ಮೂಲಕ ತೊಂದರೆಯಲ್ಲಿರುವ ಮಕ್ಕಳು ತಮ್ಮ ಭಾವನೆಗಳನ್ನ ಕಥೆಗಳ ಮೂಲಕ ವ್ಯಕ್ತಪಡಿಸಲು ಹಾಗೂ ಮಾನಸಿಕ ಸ್ಥೈರ್ಯ ತುಂಬಲು ಸಹಾಯ ಮಾಡುತ್ತಿದ್ದಾರೆ.

ಪ್ರಮುಖ ಸಂಸ್ಥೆಗಳೊಂದಿಗೆ ಪಾಲುದಾರಿಕೆ

ಈ ಮಕ್ಕಳ ನಿಸ್ವಾರ್ಥ ಸೇವೆಯನ್ನ ಗುರುತಿಸಿದ ಹಲವು ರಾಷ್ಟ್ರೀಯ ಸಂಸ್ಥೆಗಳು ಇವರ ಬೆಂಬಲಕ್ಕೆ ನಿಂತಿವೆ. ಖ್ಯಾತ ಪ್ರಕಾಶನ ಸಂಸ್ಥೆ ಸ್ಕೊಲಾಸ್ಟಿಕ್ ಹಾಗೂ ಜನಪ್ರಿಯ ಗಾಯಕಿ ಲೇಡಿ ಗಾಗಾ ಅವರ 'ಬಾರ್ನ್ ದಿಸ್ ವೇ ಫೌಂಡೇಶನ್' ಇವರ ಫೌಂಡೇಶನ್‌ಗೆ ಆರ್ಥಿಕ ನೆರವು ಹಾಗೂ ಪುಸ್ತಕಗಳನ್ನ ಒದಗಿಸಿವೆ. ಡೆಲ್ ಚಿಲ್ಡ್ರನ್ಸ್ ಆಸ್ಪತ್ರೆಯಂತಹ ಸ್ಥಳೀಯ ಸಂಸ್ಥೆಗಳೊಂದಿಗೂ ಇವರು ಕೈಜೋಡಿಸಿದ್ದಾರೆ.

ಇಷ್ಟೆಲ್ಲಾ ಸಾಧನೆ ಮಾಡಿರುವ ರೋಹನ್, ಟೆಕ್ಸಾಸ್ ಚಿಲ್ಡ್ರನ್ ಅಂಡ್ ಯೂತ್ ಬಿಹೇವಿಯರಲ್ ಹೆಲ್ತ್ ಉಪಸಮಿತಿಯ ಅತ್ಯಂತ ಕಿರಿಯ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟೆಲ್ಲಾ ಜವಾಬ್ದಾರಿಗಳು, ಶಾಲೆಯ ಓದಿನ ನಡುವೆಯೂ ಈ ಅಣ್ಣ-ತಂಗಿ ತಾವೇ ಖುದ್ದಾಗಿ ಪುಸ್ತಕಗಳನ್ನ ಪ್ಯಾಕ್ ಮಾಡಿ ಶಾಲೆಗಳಿಗೆ ತಲುಪಿಸುತ್ತಿದ್ದಾರೆ.

"ಮಕ್ಕಳು ತಮ್ಮ ಮೊದಲ ಪುಸ್ತಕವನ್ನ ಕೈಗೆತ್ತಿಕೊಂಡಾಗ ಅವರ ಮುಖದಲ್ಲಿ ಮೂಡುವ ಖುಷಿಯೇ ನಮಗೆ ಅತಿ ದೊಡ್ಡ ಬಹುಮಾನ" ಎನ್ನುವ ರೋಹನ್ ಹಾಗೂ ಅನ್ಯಾ ಸತೀಜಾ ಅವರ ಮುಂದಿನ ಗುರಿ, ಗ್ರಾಮೀಣ ಹಾಗೂ ಬಡತನವಿರುವ ನಗರ ಪ್ರದೇಶಗಳ ಪ್ರತಿಯೊಂದು ಮಗುವಿಗೂ ಪುಸ್ತಕಗಳು ಸಿಗುವಂತೆ ಮಾಡುವುದಾಗಿದೆ. ಕೇವಲ ಓದುವುದಷ್ಟೇ ಅಲ್ಲ, ಇತರರ ಓದಿಗೂ ನೆರವಾಗುತ್ತಿರುವ ಈ ಮಕ್ಕಳ ಕಾರ್ಯ ನಿಜಕ್ಕೂ ಇಡೀ ವಿಶ್ವಕ್ಕೇ ಮಾದರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+