ಭಾರತದಲ್ಲಿ H3N2 ವೈರಸ್ ಭೀತಿ, IMA ತುರ್ತು ಸಭೆ, ಪ್ರತಿರೋಧಕ ಔಷಧ ಬಳಕೆ ಬಿಟ್ಟುಬಿಡಿ: ತಜ್ಞರು
ಭಾರತದ ಹಲವು ರಾಜ್ಯಗಳಲ್ಲಿ ಜ್ವರ, ಕೆಮ್ಮು, ಶೀತ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಎಚ್3ಎನ್2 ವೈರಸ್ ಹಾವಳಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘವು ಆದಷ್ಟು ಆ್ಯಂಟಿಬಯೋಟಿಕ್ಸ್ ಔಷಧ ಬಳಕೆ ಕಡಿಮೆ ಮಾಡುವುದು ಸೇರಿದಂತೆ ಹಲವು ಸಲಹೆ ನೀಡಿದೆ.
ಬೆಂಗಳೂರು, ಮಾರ್ಚ್ 06: ಭಾರತದ ಹಲವು ರಾಜ್ಯಗಳಲ್ಲಿ ಜ್ವರ, ಕೆಮ್ಮು, ಶೀತ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಎಚ್3ಎನ್2 ವೈರಸ್ ಹಾವಳಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘವು ಆದಷ್ಟು ಆ್ಯಂಟಿಬಯೋಟಿಕ್ಸ್ ಔಷಧ ಬಳಕೆ ಕಡಿಮೆ ಮಾಡುವುದು ಸೇರಿದಂತೆ ಹಲವು ಸಲಹೆ ನೀಡಿದೆ.
ವೈರಸ್ ಹಾವಳಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ವೈದ್ಯರು, ತಜ್ಞರ ಜೊತೆ ತುರ್ತು ಸಭೆ ನಡೆಸಿದರು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕರು ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಕಳೆದ ಎರಡು ಮೂರು ತಿಂಗಳಲ್ಲಿ ಜನರು ಅನಾರೋಗ್ಯಕ್ಕೆ ತುತ್ತಾಗುವುದು ಹೆಚ್ಚಾಗಿದೆ. ಇದರಲ್ಲಿ ಬಹುತೇಕ ಮಂದಿಗೆ ಎಚ್3ಎನ್2 ವೈರಸ್ ತಗುಲಿರುವುದು ಬೆಳಕಿಗೆ ಬಂದಿದೆ. ಈ ಕಾರಣಕ್ಕೆ ಸಂಘ ಸಭೆಯಲ್ಲಿ ಚರ್ಚಿಸಿ ಹಲವು ಸಲಹೆ ನೀಡಿದೆ.

ಅಕ್ಟೋಬರ್‌ನಿಂದ ಫೆಬ್ರವರಿವರೆಗೆ ಚಳಿಗಾಲ ಹಿನ್ನೆಲೆ ಈ ರೀತಿ ಅನಾರೋಗ್ಯ ಸಮಾನ್ಯ ಎನ್ನಬಹುದು. ಆದರೆ ಜನವರಿ ಬಳಿಕವು ನಿರಂತರವಾಗಿ ಜನರು ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಜ್ವರ ಕೇವಲ ಮೂರು ದಿನ ಕಂಡು ಬಂದರೆ, ಕೆಮ್ಮು ಮಾತ್ರ ಮುಂದುವರಿದೆ. ಏಳು ದಿನದ ಬಳಿಕವು ಕೆಮ್ಮು ಮುಂದುವರಿದೆ. ಇದು ವೈರಸ್ ಲಕ್ಷಣ ಅಂತಲೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಸಮಸ್ಯೆ ಹೆಚ್ಚಾಗಿ 60 ವರ್ಷ ಮೇಲ್ಪಟ್ಟವರು ಹಾಗೂ 15 ವರ್ಷಕ್ಕಿಂತ ಕೆಳಗಿನವರಲ್ಲಿ ಕಂಡು ಬರುತ್ತಿದೆ. ಆದ್ದರಿಂದ ವೈಯಕ್ತಿಕವಾಗಿ ಚಿಕಿತ್ಸೆ ಪಡೆಯುವುದು, ಹೆಚ್ಚು ಆ್ಯಂಟಿಬಯೋಟಿಕ್ಸ್ (ಅಜಿಥ್ರೋಮೈಸಿನ್, ಅಮೋಕ್ಸಿಕ್ಲೇವ್) ಸೇರಿದಂತೆ ಇನ್ನಿತರ ಪ್ರತಿರೋಧಕ ಶಕ್ತಿ ಹೊಂದಿರುವ ಔಷಧಿ ಬಳಕೆ ಬಗ್ಗೆ ಕಡಿಮೆ ಮಾಡುವಂತೆ ಹಾಗೂ ಚಿಕಿತ್ಸೆಗೆ, ವೈದ್ಯರ ಭೇಟಿಗೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ.

ಆಗಿನಮಟ್ಟಿಗೆ ಆ್ಯಂಟಿಬಯೋಟಿಕ್ಸ್ ಔಷಧಿ ಕೆಲಸ ಮಾಡಿದರೂ ಸಹ ಅವುಗಳ ಅತೀಯಾದ ಬಳಕೆಯಿಂದ ಅತಿಸಾರ, ಇನ್ನಿತರ ಆನಾರೋಗ್ಯ ಸಮಸ್ಯೆ ಉಂಟಾಗಬಹುದು ಎನ್ನಲಾಗಿದೆ. ಇನ್ನು ಅತಿಸಾರ ಸಮಸ್ಯೆ ನಿವಾರಣಗೆ ಅಮೊಕ್ಸಿಸಿಲಿನ್, ಒಫ್ಲೊಕ್ಸಾಸಿನ್ ಸೇರಿದಂತೆ ಇನ್ನಿತರ ಔಷಧಿ ಬಳಕೆ ಆಗುತ್ತದೆ. ಕೋವಿಡ್ ವೇಳೆ ಮಾತ್ರ ಅಜಿಥ್ರೋಮೈಸಿನ್, ಐವರ್‌ಮೆಕ್ಟಿನ್ ಅನ್ನು ಪ್ರತಿರೋಧಕ್ಕಾಗಿ ಬಳಸಲಾಗಿತ್ತು.
ಸದ್ಯ ಶೀತ, ಕೆಮ್ಮಿಗೆ ಪ್ರತಿರೋಧ ಔಷಧಿ ಬಳಸದೇ ವೈದ್ಯರನ್ನು ಸಂಪರ್ಕಿಸಿ,ಚಿಕಿತ್ಸೆ ಪಡೆಯಿರಿ. ಬಿಸಿಲಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಗುಂಪು ಸೇರುವುದು ಬಿಟ್ಟು ಬಿಡಿ. ಆದಷ್ಟು ಶುಚಿಯಾಗಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರ ಬಗ್ಗೆ ಎಚ್ಚರ ವಹಿಸುವಂತೆ ತಜ್ಞರು ತಿಳಿಸಿದ್ದಾರೆ.












Click it and Unblock the Notifications