Operation Sindoor: ಸೇನೆ ಮತ್ತೆ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದೆ: ಸಂಪೂರ್ಣ ವಿವರ ಹಂಚಿಕೊಂಡ ಭಾರತ
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ ಪಾಕಿಸ್ತಾನ ಮತ್ತೆ ಮತ್ತೆ ಭಾರತದ ಮೇಲೆ ಪ್ರತಾಪ ತೋರಲು ಬಂದು ಮುಖಭಂಗಕ್ಕೆ ಒಳಗಾಗುತ್ತಿದೆ. ನಿನ್ನೆ ರಾತ್ರಿ ಭಾರತದ ಹಲವು ಕಡೆ ದಾಳಿ ಯತ್ನ ನಡೆಸಿದ್ದ ಪಾಕ್‌ಗೆ ಇಂದು ಮುಂಜಾನೆ ಭಾರತ ಕೂಡ ಪ್ರತ್ಯುತ್ತರ ನೀಡಿದೆ. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಪಾಕ್ ಸೃಷ್ಟಿಸಿರುವ ಸುಳ್ಳಿನ ಕಥೆಯನ್ನೂ ಬಯಲು ಮಾಡಿದ್ದಾರೆ.
ಪಾಕಿಸ್ತಾನವು ಭಾರತದ 26 ಸ್ಥಳಗಳ ಮೇಲೆ ಮಿಸೈಲ್ ದಾಳಿಗೆ ಯತ್ನಿಸಿತು. ಅದಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿದೆ. ಎಲ್‌ಒಸಿಯಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಆಸ್ಪತ್ರೆ, ಶಾಲೆ ಗುರಿಯಾಗಿಸಿ ದಾಳಿ ನಡೆಸಿದರು. ಅದಕ್ಕೆ ಭಾರತ ಪ್ರತ್ಯುತ್ತರ ನೀಡಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ಮಾಡುತ್ತಿದೆ ಎಂದು ವಿವರಿಸಿದ್ದಾರೆ.

ಪಂಜಾಬ್‌ನ ವಾಯುನೆಲೆ ಮೇಲೆ ದಾಳಿ ಯತ್ನ
ಪಾಕಿಸ್ತಾನ 26ಕ್ಕೂ ಹೆಚ್ಚು ಸ್ಥಳಗಳಲ್ಲಿ ವಾಯುದಳದ ಮೂಲಕ ನುಸುಳಲು ಪ್ರಯತ್ನಿಸಿತು. ಉಧಮ್‌ಪುರ, ಭುಜ್, ಪಠಾಣ್‌ಕೋಟ್, ಬಟಿಂಡಾದಲ್ಲಿನ ವಾಯುಪಡೆಯ ನೆಲೆಗಳಲ್ಲಿ ನಮ್ಮ ಉಪಕರಣಗಳು ಮತ್ತು ಸಿಬ್ಬಂದಿಯನ್ನು ಹಾನಿಗೊಳಿಸಿದರು. ಅಲ್ಲದೆ ಪಂಜಾಬ್‌ನ ವಾಯುನೆಲೆಯನ್ನು ಗುರಿಯಾಗಿಸಲು ಇಂದು ಬೆಳಗಿನ ಜಾವ 1:40ಕ್ಕೆ ಅತಿ ವೇಗದ ಕ್ಷಿಪಣಿಗಳನ್ನು ಬಳಸಿದರು. ಆಸ್ಪತ್ರೆ, ಶಾಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರು ಎಂದು ಕರ್ನಲ್ ಸೋಫಿಯಾ ಖುರೇಷಿ ವಿವರಿಸಿದ್ದಾರೆ.
ಪಾಕಿಸ್ತಾನಿ ಸೇನೆಯು ಪಶ್ಚಿಮ ಗಡಿಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಭಾರತದ ಮಿಲಿಟರಿ ತಾಣಗಳ ಮೇಲೆ ದಾಳಿ ಮಾಡಲು ಡ್ರೋನ್‌ಗಳು, ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳು, ಯುದ್ಧಸಾಮಗ್ರಿಗಳು ಮತ್ತು ಫೈಟರ್ ಜೆಟ್‌ಗಳನ್ನು ಬಳಸಿದೆ. ಆದರೆ ಭಾರತವು ಪಾಕ್‌ನ ಎಲ್ಲ ಪ್ರಯತ್ನಗಳನ್ನು ತಟಸ್ಥಗೊಳಿಸಿತು ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದ್ದಾರೆ.
ಪಾಕ್ ಹೇಳಿದ್ದೆಲ್ಲ ಸುಳ್ಳು
ಭಾರತೀಯ ಸಶಸ್ತ್ರ ಪಡೆಗಳು ಗುರುತಿಸಲಾದ ಮಿಲಿಟರಿ ಗುರಿಗಳ ಮೇಲೆ ಮಾತ್ರ ನಿಖರವಾದ ದಾಳಿ ನಡೆಸಿವೆ. ಭಾರತೀಯ S-400 ವ್ಯವಸ್ಥೆಯ ನಾಶ, ಸೂರತ್ ಮತ್ತು ಸಿರ್ಸಾದಲ್ಲಿನ ವಾಯುನೆಲೆಗಳ ನಾಶ ಸೇರಿದಂತೆ ಪಾಕಿಸ್ತಾನವು ನಿರಂತರ ದುರುದ್ದೇಶಪೂರಿತ ಸುಳ್ಳು ಮಾಹಿತಿ ಹರಡುತ್ತಿದೆ. ಪಾಕಿಸ್ತಾನ ಹರಡುತ್ತಿರುವ ಈ ಸುಳ್ಳು ಹೇಳಿಕೆಗಳನ್ನು ಭಾರತ ತಿರಸ್ಕರಿಸುತ್ತದೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಕ್ರಮಗಳು ಪ್ರಚೋದನೆ ಮತ್ತು ಉಲ್ಬಣಕ್ಕೆ ಕಾರಣವಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಕಡೆಯಿಂದ ಈ ಪ್ರಚೋದನೆ ಮತ್ತು ಉಲ್ಬಣಗಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದೆ. ಇಂದು ಬೆಳಿಗ್ಗೆಯೂ ಪಾಕಿಸ್ತಾನದ ಈ ಪ್ರಚೋದನಕಾರಿ ನಡೆ ಪುನರಾವರ್ತನೆಗೊಂಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮಾಹಿತಿ ನೀಡಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ಸಂಪೂರ್ಣವಾಗಿ ಕ್ಷುಲ್ಲಕ ಆರೋಪವನ್ನು ಮಾಡಿದ್ದಾರೆ ಎಂಬ ಸಂಪೂರ್ಣ ಹಾಸ್ಯಾಸ್ಪದ ಹೇಳಿಕೆ ಮತ್ತೊಮ್ಮೆ ಕೇಳಿಬರುತ್ತಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಅಫ್ಘಾನಿಸ್ತಾನದ ನಾಗರಿಕ ಜನಸಂಖ್ಯೆ ಮತ್ತು ನಾಗರಿಕ ಮೂಲಸೌಕರ್ಯವನ್ನು ಹಲವಾರು ಬಾರಿ ಗುರಿಯಾಗಿಸಿಕೊಂಡಿರುವ ದೇಶ ಯಾವುದು ಎಂಬುದನ್ನು ಅಫ್ಘಾನ್ ಜನರಿಗೆ ನೆನಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications