ರೆಕ್ಕೆಗಳಲ್ಲಿ ಶಕ್ತಿ, ಎದೆಯಲ್ಲಿ ದೇಶಭಕ್ತಿ: ಭಾರತೀಯ ವಾಯುಪಡೆಗೆ 94ರ ಸ್ಫೂರ್ತಿ
- ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
Indian Air Force Day: ಭಾರತೀಯ ಆಗಸಗಳಲ್ಲಿ ಹಾರಾಡುವ ಪ್ರತಿಯೊಂದೂ ಯುದ್ಧ ವಿಮಾನವೂ ಕೇವಲ ಇಂಧನ ಮತ್ತು ಶಕ್ತಿಯನ್ನು ಮಾತ್ರವೇ ಹೊತ್ತು ಸಾಗುವುದಲ್ಲ. ಈ ವಿಮಾನಗಳು ಬೆಳಗಾಗುವ ಮುನ್ನವೇ ಅವುಗಳ ಪ್ರತೀ ಬೋಲ್ಟನ್ನೂ ಪರಿಶೀಲಿಸುವ ತಂತ್ರಜ್ಞನ ಶ್ರಮ, ಆತನ ಅನುಭವದ ಮೇಲೆ ತನ್ನ ಪ್ರಾಣವನ್ನೇ ಒತ್ತೆ ಇಟ್ಟು, ಚಲಾಯಿಸುವ ಪೈಲಟ್, ಮತ್ತು ಮನೆಯಲ್ಲೂ ಅವನಿಗಾಗಿಯೇ ನಿರೀಕ್ಷಿಸುತ್ತಿರುವ ಕುಟುಂಬ...ಎಲ್ಲವನ್ನೂ ಹೊತ್ತು ಚಲಿಸುತ್ತದೆ. ಅಕ್ಟೋಬರ್ 8, 2026ರಂದು ಭಾರತೀಯ ವಾಯು ಸೇನೆ 94 ವರ್ಷಗಳ ಸೇವೆಯನ್ನು ಪೂರ್ಣಗೊಳಿಸುವ ಸಂದರ್ಭದಲ್ಲಿ ಸಮಸ್ತ ದೇಶವೇ ವಾಯುಪಡೆಗೆ ಗೌರವ ಸಲ್ಲಿಸುತ್ತಿದೆ.

ಬ್ರಿಟಿಷರ ಆಡಳಿತದಲ್ಲಿದ್ದಾಗಲೇ ಶುರುವಾಯಿತು ವಾಯು ಪಡೆ ಜರ್ನ
ಭಾರತವಿನ್ನೂ (india) ಬ್ರಿಟಿಷ್ ಆಡಳಿತದಲ್ಲಿದ್ದಾಗ, ಅಕ್ಟೋಬರ್ 8, 1932ರಂದು ವಾಯುಪಡೆಯ ಕಥೆ ಆರಂಭಗೊಂಡಿತ್ತು. ಆಗ ನಮ್ಮ ಯುವ ವಾಯುಪಡೆ ಬ್ರಿಟನ್ನಿನ ರಾಯಲ್ ಏರ್ ಫೋರ್ಸ್ಗೆ ನೆರವು ನೀಡುವ ಉದ್ದೇಶದಿಂದಷ್ಟೇ ರೂಪುಗೊಂಡಿತ್ತು. ಇದರ ಮೊದಲ ಕಾರ್ಯಾಚರಣಾ ವಿಭಾಗವಾದ ನಂಬರ್ 1 ಸ್ಕ್ವಾಡ್ರನ್ 1933ರಲ್ಲಿ ರೂಪು ತಳೆಯಿತು. 1950ರಲ್ಲಿ ಭಾರತ ಗಣರಾಜ್ಯವಾದಾಗ, ವಾಯುಪಡೆಯ ಹೆಸರಿನಲ್ಲಿದ್ದ 'ರಾಯಲ್' ಪದವನ್ನು ಕೈ ಬಿಡಲಾಯಿತು. ಆ ಮೂಲಕ ವಾಯುಪಡೆ ಸಂಪೂರ್ಣವಾಗಿ ಭಾರತೀಯವಾಯಿತು. ಅಂದಿನಿಂದಲೂ ನಮ್ಮ ವಾಯುಪಡೆ ನಿರಂತರವಾಗಿ ಪರೀಕ್ಷೆಗಳನ್ನು ಎದುರಿಸುತ್ತಲೇ ಸಾಗಿ ಬಂದಿದೆ. 1947-48ರ ಜಮ್ಮು ಮತ್ತು ಕಾಶ್ಮೀರ ಕಾರ್ಯಾಚರಣೆಗಳು, 1965 ಮತ್ತು 1971ರ ಯುದ್ಧಗಳು, ಕಾರ್ಗಿಲ್ ಪರ್ವತಗಳ ಮೇಲಿನ ಕಾರ್ಯಾಚರಣೆ, ಮತ್ತು ಇತ್ತೀಚಿನ ಆಪರೇಷನ್ ಸಿಂದೂರ ಇದಕ್ಕೆ ಉದಾಹರಣೆಗಳಾಗಿವೆ. ಆದ್ದರಿಂದಲೇ ನಮಗೆ ಈ ದಿನ ಬಹಳ ಮುಖ್ಯ. ಪೈಲಟ್ಗಳಿಂದ ಹಿಡಿದು, ಭೂ, ಬೆಂಬಲ ಸಿಬ್ಬಂದಿ ತನಕ ನಮ್ಮ ವಾಯು ಪ್ರದೇಶವನ್ನು ಸುರಕ್ಷಿತವಾಗಿಡಲು ನೆರವಾಗುವ ನೀಲಿ ಸಮವಸ್ತ್ರದ ಪ್ರತಿಯೊಬ್ಬ ವಾಯು ಸೇನಾ ಸಿಬ್ಬಂದಿಯ ಧೈರ್ಯ, ಪರಾಕ್ರಮ, ಬದ್ಧತೆ, ಮತ್ತು ತ್ಯಾಗಗಳನ್ನು ವಾಯು ಸೇನಾ ದಿನ ಗೌರವಿಸುತ್ತದೆ.
ತೀರಾ ಸಾಮಾನ್ಯ ಮಟ್ಟದಲ್ಲಿ ಆರಂಭಗೊಂಡ ನಮ್ಮ ವಾಯುಪಡೆ ಇಂದು ಜಗತ್ತಿನ ಅತ್ಯಂತ ಪ್ರಬಲ ವಾಯು ಸೇನೆಗಳಲ್ಲೊಂದಾಗಿದೆ. 2026ರ ಗ್ಲೋಬಲ್ ಏರ್ ಪವರ್ ರ್ಯಾಕಿಂಗ್ ಪ್ರಕಾರ, ಭಾರತೀಯ ವಾಯು ಸೇನೆಗೆ ವಿಶ್ವದಲ್ಲಿ ಆರನೇ ಸ್ಥಾನವಿದೆ. ಈ ಪಟ್ಟಿ ಒಂದು ದೇಶದ ಇತರೆ ವೈಮಾನಿಕ ವಿಭಾಗಗಳನ್ನೂ ಪರಿಗಣಿಸಿದ್ದು, ಅಮೆರಿಕನ್ ನೌಕಾಪಡೆ ಮತ್ತು ಅಮೆರಿಕನ್ ಸೇನಾಪಡೆಗಳ ವೈಮಾನಿಕ ವಿಭಾಗಗಳನ್ನೂ ಒಳಗೊಂಡಿದೆ. ಈ ರ್ಯಾಂಕಿಂಗ್ನ ಮೊದಲ ಐದು ಪಡೆಗಳೆಂದರೆ ಅಮೆರಿಕನ್ ವಾಯುಪಡೆ (242.9 ಅಂಕಗಳು, 5,004 ಸಕ್ರಿಯ ಏರ್ಕ್ರಾಫ್ಟ್ಗಳು), ಅಮೆರಿಕನ್ ನೌಕಾಪಡೆ (142.4 ಅಂಕಗಳು, 2,504 ಏರ್ಕ್ರಾಫ್ಟ್ಗಳು), ರಷ್ಯನ್ ವಾಯು ಸೇನೆ (114.2 ಅಂಕಗಳು, 3,677 ಏರ್ಕ್ರಾಫ್ಟ್ಗಳು), ಅಮೆರಿಕನ್ ಭೂ ಸೇನೆಯ ವೈಮಾನಿಕ ವಿಭಾಗ (112.6 ಅಂಕಗಳು, 4,333 ಏರ್ಕ್ರಾಫ್ಟ್ಗಳು), ಮತ್ತು ಅಮೆರಿಕದ ಮರೀನ್ ಕಾರ್ಪ್ಸ್ ವೈಮಾನಿಕ ಪಡೆ (85.3 ಅಂಕಗಳು, 1,211 ಏರ್ಕ್ರಾಫ್ಟ್ಗಳು). ಕೇವಲ ಸ್ವತಂತ್ರ ವಾಯು ಸೇನೆಗಳನ್ನು ಮಾತ್ರವೇ ಪರಿಗಣಿಸಿದರೆ, ಭಾರತೀಯ ವಾಯು ಸೇನೆ ಅಮೆರಿಕನ್ ವಾಯುಪಡೆ ಮತ್ತು ರಷ್ಯನ್ ವಾಯುಪಡೆಗಳ ಆನಂತರ ಮೂರನೇ ಸ್ಥಾನದಲ್ಲಿದೆ.
ಟ್ರೂವ್ಯಾಲ್ಯೂ ರೇಟಿಂಗ್ ಅಥವಾ ಟಿವಿಆರ್ನಲ್ಲಿ ನಮ್ಮ ವಾಯುಪಡೆ (ಐಎಎಫ್) 69.4 ಅಂಕಗಳನ್ನು ಹೊಂದಿದ್ದು, 1,716 ಸಕ್ರಿಯ ಏರ್ಕ್ರಾಫ್ಟ್ಗಳನ್ನು ಹೊಂದಿದೆ. ಟಿವಿಆರ್ ಎನ್ನುವುದು ಒಂದು ವಾಯು ಸೇನೆಯ ಪ್ರಗತಿ ಪತ್ರ ಎಂದು ಪರಿಗಣಿಸಿ. ಅದು ಕೇವಲ ಯುದ್ಧ ವಿಮಾನಗಳ ಸಂಖ್ಯೆಯನ್ನು ಲೆಕ್ಕ ಹಾಕುವುದಿಲ್ಲ. ಬದಲಿಗೆ, ಒಂದು ಪಡೆ ಯಾವೆಲ್ಲ ರೀತಿಯ ಏರ್ಕ್ರಾಫ್ಟ್ಗಳನ್ನು ಹೊಂದಿದೆ ಮತ್ತು ಅವುಗಳ ಸಂಯೋಜನೆ ವಿಭಿನ್ನ ಕಾರ್ಯಗಳನ್ನು ಎಷ್ಟು ದಕ್ಷತೆಯಿಂದ ನಿರ್ವಹಿಸಬಲ್ಲದು ಎಂದೂ ಪರೀಕ್ಷಿಸುತ್ತದೆ.
Indian Air Force Day: ಈ ವರ್ಷದ ಥೀಮ್ ಏನು?
ಈ ವರ್ಷದ ವಾಯು ಸೇನಾ ದಿನಾಚರಣೆಯ ಥೀಮ್ ಆದ "ಭಾರತೀಯ ವಾಯುಪಡೆ - ಅಭೇದ್ಯ, ಅಚಲ ಮತ್ತು ನಿಖರ" ಎನ್ನುವುದು ನಮ್ಮ ವಾಯುಪಡೆಯ (indian air force) ಸತ್ವವನ್ನು ಮೂರು ಪದಗಳಲ್ಲಿ ಬಣ್ಣಿಸುತ್ತದೆ. ಅಭೇದ್ಯ ಎನ್ನುವುದು ನಾವು ಸದಾ ನಂಬಿಕೆ ಇಡಬಹುದಾಗಿದ್ದು, ಎಂದೂ ಚೆಂಡನ್ನು ಗೋಲ್ ಪೋಸ್ಟ್ ಒಳಗೆ ಸಾಗಲು ಬಿಡದ ಗೋಲ್ ಕೀಪರ್ನಂತೆ ಕಾರ್ಯಾಚರಿಸುತ್ತದೆ. ಭಾರತೀಯ ವಾಯುಪಡೆಗೆ ಹೀಗೆನ್ನುವುದು ಒಂದು ಪ್ರಮುಖ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದಾಗಿದೆ. ಇನ್ನು ಅಚಲ ಎಂದರೆ ನಮ್ಮ ರಕ್ಷಣೆ ಯಾವ ಅಪಾಯವೂ ತೊಂದರೆ ನೀಡದಂತೆ ಬಲವಾದ ರಕ್ಷಣೆಯನ್ನು ಸೂಚಿಸುತ್ತದೆ. ಜೋರಾದ ಮಳೆಯಲ್ಲೂ ನಮ್ಮನ್ನು ಕಾಪಾಡುವ ಉತ್ತಮ ರೇನ್ ಕೋಟ್ಗೆ ಇದನ್ನು ಹೋಲಿಸಬಹುದು. ಭಾರತೀಯ ವಾಯುಪಡೆಗೆ ಇದು ಶತ್ರುಗಳ ದಾಳಿಯ ವಿರುದ್ಧ ಹೊಂದುವ ರಕ್ಷಣೆಯನ್ನು ಸೂಚಿಸುತ್ತದೆ. ಇನ್ನು ನಿಖರ ಎನ್ನುವುದು ಸರಿಯಾದ ಗುರಿಯ ಮೇಲಿನ ದಾಳಿಯನ್ನು ಸೂಚಿಸುತ್ತದೆ. ಹೇಗೆ ಓರ್ವ ಬಿಲ್ಲುಗಾರ ತನ್ನ ಮುಂದಿರುವ ಗುರಿಯ ಕೇಂದ್ರಕ್ಕೆ ಬಾಣ ಹೊಡೆಯುತ್ತಾನೋ, ಹಾಗೇ ನಮ್ಮ ವಿಮಾನಗಳೂ ನಿಖರ ದಾಳಿ ನಡೆಸುತ್ತವೆ. ಕಳೆದ ವರ್ಷದ ಥೀಮ್ ಆಗಿದ್ದ 'ಸಕ್ಷಮ, ಸಶಕ್ತ, ಆತ್ಮನಿರ್ಭರ' ಎನ್ನುವುದು ತೇಜಸ್, ಎಎಂಸಿಎ, ಮತ್ತು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ನಂತಹ ಸ್ವಂತ ಏರ್ಕ್ರಾಫ್ಟ್ಗಳನ್ನು ನಿರ್ಮಿಸುವ ಭಾರತದ ಶ್ರಮವನ್ನು ಪ್ರತಿನಿಧಿಸಿತ್ತು.
ಈ ವರ್ಷದ ಏರ್ಫೋರ್ಸ್ ಆಚರಣೆ ಎಲ್ಲಿ?
ಈ ವರ್ಷದ ಪ್ರಮುಖ ಆಚರಣೆಗಳು ದೆಹಲಿಗೆ ಸಮೀಪದ, ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿರುವ ಹಿಂಡನ್ ವಾಯು ಸೇನಾ ನೆಲೆಯಲ್ಲಿ ನಡೆಯಲಿದ್ದು, ಈ ನೆಲೆ ಮೂರು ವರ್ಷಗಳ ಬಳಿಕ ಅಧಿಕೃತ ಪರೇಡನ್ನು ಆಯೋಜಿಸುತ್ತಿದೆ. ಇದಕ್ಕಾಗಿ ಸಂಪೂರ್ಣ ಅಭ್ಯಾಸ ಅಕ್ಟೋಬರ್ 6ರಂದು ಪೂರ್ಣಗೊಂಡಿತು. ಏರ್ ಚೀಫ್ ಮಾರ್ಷಲ್ ಎ. ಪಿ. ಸಿಂಗ್ ಅವರು ಪಥ ಸಂಚಲನವನ್ನು ಗಮನಿಸಲಿದ್ದು, ಆ ಬಳಿಕ ರಾಷ್ಟ್ರಪತಿಗಳ ಪುರಸ್ಕಾರಗಳನ್ನು ಹಸ್ತಾಂತರಿಸಲಾಗುತ್ತದೆ. ಎಂಐ-17 ಹೆಲಿಕಾಪ್ಟರ್ಗಳು ರಾಷ್ಟ್ರಧ್ವಜ, ಐಎಎಫ್ ಧ್ವಜ, ಮತ್ತು ಆಪರೇಷನ್ ಸಿಂದೂರ ಧ್ವಜಗಳನ್ನು ಹೊತ್ತು ಹಾರಲಿವೆ. ಆ ಬಳಿಕ, ರಫೇಲ್, ಸು-30ಎಂಕೆಐ, ಮಿಗ್-29, ಮತ್ತು ತೇಜಸ್ ಯುದ್ಧ ವಿಮಾನಗಳು, ಬೃಹತ್ ಸಿ-17 ಸಾಗಾಣಿಕಾ ವಿಮಾನ, ಮತ್ತು ಅಪಾಚೆ ಹೆಲಿಕಾಪ್ಟರ್ಗಳ ಅದ್ಧೂರಿ ಫ್ಲೈ ಪಾಸ್ಟ್ (ವೈಮಾನಿಕ ಪ್ರದರ್ಶನ) ನೆರವೇರಲಿದೆ. ವಾಯು ಸೇನಾ ಮುಖ್ಯಸ್ಥರು ಈ ದಿನ ಕಳೆದ ವರ್ಷದತ್ತ ಗಮನ ಹರಿಸಿ, ನಮ್ಮ ವಾಯುಪಡೆಯನ್ನು ಕಟ್ಟಿದ ಹಿರಿಯರಿಗೆ ಧನ್ಯವಾದ ಅರ್ಪಿಸುವ ದಿನವಿದು ಎಂದು ಬಣ್ಣಿಸಿದ್ದಾರೆ.
ಇದೇ ದಿನ, ಜೋಧ್ಪುರ್ ವಾಯು ಸೇನಾ ನೆಲೆ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ನೇತೃತ್ವದಲ್ಲಿ ಮಹತ್ವದ ವೈಮಾನಿಕ ಪ್ರದರ್ಶನ ಆಯೋಜಿಸಲಿದೆ. ಸೂರ್ಯಕಿರಣ್ ತಂಡದ ವಿಮಾನಗಳು ಜೊತೆಯಾಗಿ ಹಾರಾಟ ನಡೆಸಿ, ಜಾಗರೂಕತೆಯ ಚಿತ್ತಾಕರ್ಷಕ ಸಂಯೋಜನೆಗಳನ್ನು ಆಗಸದಲ್ಲಿ ರಚಿಸಲಿವೆ. ಎನ್ಸಿಸಿ ಕೆಡೆಟ್ಗಳೊಡನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕಾಶಿ ನಮೋ ಘಾಟ್ ಬಳಿಯೂ ಏರ್ ಶೋ
ಬಳಿಕ ಸಂಭ್ರಮಾಚರಣೆಗಳು ಕಾಶಿಯತ್ತ ತೆರಳಲಿವೆ. ಅಕ್ಟೋಬರ್ 24, 25, ಮತ್ತು 26ರಂದು ಗಂಗಾ ನದಿಯ ಮೇಲ್ಭಾಗದಲ್ಲಿ ಸಾರ್ವಜನಿಕ ವೈಮಾನಿಕ ಪ್ರದರ್ಶನ ಆಯೋಜಿಸಲಾಗುತ್ತದೆ. ಪ್ರಮುಖ ಪ್ರದರ್ಶನ ಅಕ್ಟೋಬರ್ 25ರಂದು ನಮೋ ಘಾಟ್ ಬಳಿ ನೆರವೇರಲಿದೆ. ಯುದ್ಧ ವಿಮಾನಗಳು, ಸಾಗಾಣಿಕಾ ವಿಮಾನಗಳು, ಏರೋಬ್ಯಾಟಿಕ್ ತಂಡಗಳು ಈ ಪ್ರದೇಶದ ಐತಿಹಾಸಿಕ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.
ಇವೆಲ್ಲವೂ ತರಂಗ್ ಶಕ್ತಿ 2026 ಎನ್ನುವ, ಸೆಪ್ಟೆಂಬರ್ 26ರಿಂದ ಅಕ್ಟೋಬರ್ 12ರ ತನಕ ನಡೆಯುವ ಅಂತಾರಾಷ್ಟ್ರೀಯ ವೈಮಾನಿಕ ಅಭ್ಯಾಸದ ಜೊತೆಗೆ ನಡೆಯಲಿದೆ.ತರಂಗ್ ಶಕ್ತಿಯಲ್ಲಿ ಭಾರತೀಯ ಸಿಬ್ಬಂದಿಗಳು ವಿದೇಶೀ ವಾಯು ಸೇನೆಗಳೊಡನೆ ಅಭ್ಯಾಸ ನಡೆಸಿ, ತಮ್ಮ ಸಂಯೋಜನೆಗಳನ್ನು ಇನ್ನಷ್ಟು ಬಲಪಡಿಸಿ, ಸಮರ್ಥ ವಿಧಾನಗಳನ್ನು ಹಂಚಿಕೊಳ್ಳಲಿದ್ದಾರೆ. ನವದೆಹಲಿಯಲ್ಲಿ, ನಿವೃತ್ತ ವಾಯು ಯೋಧರನ್ನು ವಿಶೇಷ ಸಭೆಗಳು ಮತ್ತು ವಾಯುಸೇನಾ ನೆಲೆಗಳ ವಾರ್ಷಿಕ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತದೆ.
ಇಂದು ಭಾರತೀಯ ವಾಯುಪಡೆ ಆಗಸವನ್ನು ರಕ್ಷಿಸಿ, ವಾಯು ಪಾರಮ್ಯಕ್ಕಾಗಿ ಸೆಣಸಿ, ಪಡೆಗಳು ಮತ್ತು ಪೂರೈಕೆಗಳನ್ನು ಒದಗಿಸಿ, ನಿರಂತರ ಕಣ್ಗಾವಲು ನಡೆಸುತ್ತದೆ. ಇದರೊಡನೆ, ನೈಸರ್ಗಿಕ ವಿಕೋಪದಲ್ಲಿ ಸಿಲುಕಿರುವ ಜನರನ್ನೂ ತಲುಪುತ್ತದೆ. 94 ವರ್ಷಗಳ ಬಳಿಕವೂ, ಸೇವೆ ಸಲ್ಲಿಸುವ ಯೋಧರು ವಾಯುಪಡೆಯ ಪ್ರಮುಖ ಶಕ್ತಿಯಾಗಿದ್ದಾರೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])


Click it and Unblock the Notifications
