India vs Canada: ಹಿಂದೂಗಳೇ, ಕೆನಡಾ ಬಿಟ್ಟು ತೊಲಗಿ- ಕ್ಯಾಂಪೇನ್ ಶುರು ಮಾಡಿದ ಖಲಿಸ್ತಾನಿಗಳು, ದಟ್ಟಗೊಳ್ಳುತ್ತಿರುವ ಆತಂಕ
ಒಟ್ಟಾವಾ, ಸೆಪ್ಟೆಂಬರ್ 20: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಇದು ಭಾರತ ಹಾಗೂ ಕೆನಡಾ ಸಂಬಂಧವನ್ನು ಹದಗೆಡಿಸುತ್ತಿದೆ. 'ಹಿಂದೂಗಳೇ, ಕೆನಡಾ ಬಿಟ್ಟು ತೊಲಗಿ' ಎಂಬ ಅಭಿಯಾನವನ್ನು ಸಿಖ್ಸ್ ಫಾರ್ ಜಸ್ಟೀಸ್ ( ಎಸ್‌ಎಫ್‌ಐ ) ಸಂಘಟನೆ ಆರಂಭಿಸಿದೆ. ಈ ಸಂಘಟನೆಯನ್ನು 2019 ರಲ್ಲಿ ಭಾರತದಲ್ಲಿ ನಿಷೇಧಿಸಲಾಗಿದೆ.
ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಯು ಖಲಿಸ್ತಾನ ಪರವಾದ ಸಂಘಟನೆಯಾಗಿದ್ದು, ಕೆನಡಾದಲ್ಲಿರುವ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದೆ. ಅದರಲ್ಲೂ ಭಾರತ ಮೂಲದ ಹಿಂದೂಗಳನ್ನು ಗುರಿಯಾಗಿಸಿ ಅಭಿಯಾನ ನಡೆಸುತ್ತಿದೆ.

'ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯನ್ನು ಆಚರಿಸುವ ಮೂಲಕ ಹಿಂದೂಗಳು ಭಾರತವನ್ನು ಬೆಂಬಲಿಸಿದ್ದಾರೆ. ಕೆನಡಾದಲ್ಲಿ ಹಿಂಸಾಚಾರವನ್ನು ಉತ್ತೇಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಮೂಲದ ಹಿಂದೂಗಳು ಕೆನಡಾವನ್ನು ತೊರೆಯಬೇಕು' ಎಂದು ಸಂಘಟನೆ ಬೆದರಿಕೆಯೊಡ್ಡಿದೆ.
'ಇಂಡೋ-ಹಿಂದೂ ಕೆನಡಾ ತೊರೆಯಿರಿ. ಭಾರತಕ್ಕೆ ಹೋಗಿ. ನೀವು ಭಾರತವನ್ನು ಬೆಂಬಲಿಸುತ್ತೀರಿ. ಖಲಿಸ್ತಾನ್ ಪರ ಸಿಖ್ಖರ ಭಾಷಣ ಮತ್ತು ಅಭಿವ್ಯಕ್ತಿಯನ್ನು ಹತ್ತಿಕ್ಕಿತ್ತೀರಿ' ಎಂದು ಎಸ್‌ಎಫ್‌ಜೆಯ ಕಾನೂನು ಸಲಹೆಗಾರ ಗುರುಪತ್‌ವಂತ್ ಪನ್ನೂನ್ ವಿಡಿಯೊದಲ್ಲಿ ಹೇಳಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪನ್ನೂನ್‌ನನ್ನು ಭಾರತದಲ್ಲಿ ಭಯೋತ್ಪಾದಕ ಎಂದು ಪರಿಗಣಿಸಲಾಗಿದೆ.
ಪನ್ನುನ್ ಬೆದರಿಕೆಯ ಬಗ್ಗೆ ಕೆನಡಾ ಹಿಂದೂಪರ ವಕ್ತಾರ ವಿಜಯ್ ಜೈನ್ ಕಳವಳ ವ್ಯಕ್ತಪಡಿಸಿದ್ದಾರೆ. 'ನಾವು ಈಗ ಪೂರ್ಣ ಪ್ರಮಾಣದ ಹಿಂದೂಫೋಬಿಯಾವನ್ನು ಕೆನಡದಾದ್ಯಂತ ನೋಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಜೂನ್‌ನಲ್ಲಿ ನಡೆದ ನಿಜ್ಜರ್ ಹತ್ಯೆ ಜೊತೆ ಭಾರತೀಯ ಸರ್ಕಾರಿ ಏಜೆಂಟರ ನಂಟಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸೋಮವಾರ ಹೇಳಿದ್ದಾರೆ. ಇದು ಎರಡೂ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.
ಎರಡೂ ದೇಶಗಳು ಹಿರಿಯ ರಾಜತಾಂತ್ರಿಕರ ಉಚ್ಚಾಟನೆ ಮಾಡಿವೆ. ಟ್ರುಡೊ ಹೇಳಿಕೆಯನ್ನು ಖಂಡಿಸಿರುವ ಭಾರತ ಇದೊಂದು ಅಸಂಬದ್ಧ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಆರೋಪಿಸಿದ ಬೆನ್ನಲ್ಲೇ, ತೀವ್ರ ಕಳವಳ ವ್ಯಕ್ತಪಡಿಸಿರುವುದಾಗಿ ಅಮೆರಿಕ ಹೇಳಿದೆ.

'ಪ್ರಧಾನಿ ಜಸ್ಟಿನ್ ಟ್ರುಡೊ ಬಹಿರಂಗಪಡಿಸಿದ ಆರೋಪಗಳ ಬಗ್ಗೆ ಯುಎಸ್ ತೀವ್ರ ಕಳವಳ ವ್ಯಕ್ತಪಡಿಸಿದೆ' ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
'ಕೆನಡಾ ತನಿಖೆಯನ್ನು ಮುಂದುವರಿಸಬೇಕು. ಅಪರಾಧಿಗಳನ್ನು ಪತ್ತೆ ಮಾಡಬೇಕು. ಅವರಿಗೆ ನ್ಯಾಯಯುತ ಶಿಕ್ಷೆಯಾಗಬೇಕು' ಎಂದು ವ್ಯಾಟ್ಸನ್ ಹೇಳಿದ್ದಾರೆ.
ಕೆನಡಾ ಮೂಲದ ನಿಜ್ಜರ್‌ನನ್ನು ಭಾರತವು 'ಭಯೋತ್ಪಾದಕ' ಎಂದು ಗುರುತಿಸಿದೆ. ಜೂನ್‌ನಲ್ಲಿ ಸರ್ರೆಯ ಗುರುದ್ವಾರದ ಬಳಿ ಅಪರಿಚಿತ ದಾಳಿಕೋರರು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ, 'ಕೆನಡಾದಲ್ಲಿ ಭಾರತ ವಿರೋಧಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚುತ್ತಿವೆ. ಇದು ಕಳವಳಕಾರಿಯಾಗಿದೆ' ಎಂದು ತಿಳಿಸಿದ್ದರು.












Click it and Unblock the Notifications