ಪುಣೆ ಒಡಿಐ : ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ
ಪುಣೆ, ಅ.13 : ಏಕೈಕ ಟಿ-20 ಪಂದ್ಯವನ್ನು ಗೆದ್ದು ಬೀಗುತ್ತಿರುವ ಭಾರತ, ಭಾನುವಾರ ಪುಣೆಯಲ್ಲಿ ನಡೆಯಲಿರುವ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಟಿ-20 ಪಂದ್ಯ ಗೆದ್ದಿರುವ ಧೋನಿ ಪಡೆ ಏಕದಿನ ಸರಣಿ ಗೆಲ್ಲುವ ಉತ್ಸಾಹದಲ್ಲಿದೆ.
ತೆಂಡುಲ್ಕರ್, ಸೆಹವಾಗ್, ಗಂಭೀರ್ ಜಮಾನಾದ ಬಳಿಕ ಭಾರತ ತಂಡವೀಗ ಸಂಪೂರ್ಣ ನ್ಯೂ ಲುಕ್ ಪಡೆದಿದ್ದು, ಇವರ ಸ್ಥಾನಕ್ಕೆ ಆಗಮಿಸಿರುವ ಶಿಖರ್ ಧವನ್, ರೋಹಿತ್ ಶರ್ಮ ಮುಂತಾದವರು ತಮ್ಮ ಆಟವನ್ನು ಪ್ರವಾಸಿಗರಿಗೆ ತೋರಿಸಲು ಸಜ್ಜಾಗಿದ್ದಾರೆ.

ವಿರಾಟ್ ಕೊಹ್ಲಿ, ಸುರೇಶ್ ರೈನಾ, ಟಿ20ಯಲ್ಲಿ ಗ್ರೇಟ್ ಕಮ್‌ಬ್ಯಾಕ್ ಮಾಡಿರುವ ಯುವರಾಜ್ ಸಿಂಗ್ ಏಕದಿನ ಸರಣಿಯ ಪ್ರಮುಖ ಆರ್ಕರ್ಷಣೆಯಾಗಿದ್ದಾರೆ. ನಾಯಕ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ಸಹ ಪ್ರವಾಸಿಗರನ್ನು ಎದುರಿಸಲು ಸಿದ್ಧವಾಗಿದ್ದಾರೆ.
4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋತು ಸುಣ್ಣವಾಗಿರುವ ಆಸ್ಟ್ರೇಲಿಯಾ, ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳಲು ರಣತಂತ್ರ ರೂಪಿಸಿದೆ. ತಂಡಕ್ಕೆ ಸ್ಫೂರ್ತಿ ತುಂಬಬಲ್ಲ ನಾಯಕ ಮೈಕಲ್ ಕ್ಲಾರ್ಕ್ ಗೈರು ಕೂಡ ಪ್ರವಾಸಿಗರ ಪಾಲಿಗೆ ಹಿನ್ನಡೆ ಉಂಟುಮಾಡಿದೆ.
ಭಾರತವನ್ನು ಏಕದಿನ ಸರಣಿಯಲ್ಲಿ ಮಣಿಸಿದರೆ ಆಸ್ಟ್ರೇಲಿಯಾ ವಿಶ್ವ ಏಕದಿನ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿಯಲಿದೆ. ಏಳು ಸರಣಿಯ ಪಂದ್ಯದಲ್ಲಿ ಕನಿಷ್ಠ ಆರು ಪಂದ್ಯಗಳನ್ನು ಇದಕ್ಕಾಗಿ ಗೆಲ್ಲಬೇಕು. ಅದು ಅಷ್ಟು ಸುಲಭದ ಮಾತಲ್ಲ.
ಭಾನುವಾರ ಮಧ್ಯಾಹ್ನ ನೂತನವಾಗಿ ನಿರ್ಮಿಸಲಾದ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸುಬಾರ್ಥರಾಯ್ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಒಟ್ಟು 36,416 ಜನರು ಈ ಮೈದಾನದಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ. ಮಧ್ಯಾಹ್ನ 1.30ಕ್ಕೆ ಪಂದ್ಯ ಪ್ರಾರಂಭವಾಗಲಿದೆ.
ಈ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯವೆಂಬ ಹೆಗ್ಗಳಿಕೆಯೂ ಇದೆ. ಸ್ಟಾರ್ ಕ್ರಿಕೆಟ್ ಮತ್ತು ಡಿಡಿವಾಹಿನಿಯಲ್ಲಿ ಪಂದ್ಯದ ನೇರ ಪ್ರಸಾರ ಲಭ್ಯವಿದೆ. ಆಯುಧ ಪೂಜೆ ಮುಗಿಸಿ, ಊಟ ಮಾಡಿ, ಕ್ರಿಕೆಟ್ ಪಂದ್ಯ ವೀಕ್ಷಿಸಲು ಯಾವುದೇ ಅಡ್ಡಿಯಿಲ್ಲ. ಕ್ಷಣ-ಕ್ಷಣದ ಮಾಹಿತಿಗಾಗಿ ಕನ್ನಡ ದಟ್ಸ್ ಕ್ರಿಕೆಟ್ ನೋಡಿ.
ತಂಡಗಳು : ಭಾರತದ ತಂಡ ಮಹೇಂದ್ರ ಸಿಂಗ್ ಧೋನಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಆಂಬಟಿ ರಾಯುಡು, ರವೀಂದ್ರ ಜಡೇಜ, ಆರ್. ಅಶ್ವಿನ್, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಆರ್. ವಿನಯ್ ಕುಮಾರ್, ಅಮಿತ್ ಮಿಶ್ರಾ, ಜೈದೇವ್ ಉನದ್ಕತ್, ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ: ಜಾರ್ಜ್ ಬೈಲಿ (ನಾಯಕ), ಏರಾನ್ ಫಿಂಚ್, ನಿಕ್ ಮ್ಯಾಡಿನ್ಸನ್, ಶೇನ್ ವ್ಯಾಟ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಫಿಲಿಪ್ ಹ್ಯೂಸ್, ಆ್ಯಡಂ ವೋಗ್ಸ್, ಬ್ರಾಡ್ ಹ್ಯಾಡಿನ್, ಮೊಸಸ್ ಹೆನ್ರಿಕ್ಸ್, ನಥನ್ ಕೌಲ್ಟರ್ ನೈಲ್, ಜೇಮ್ಸ್ ಫಾಕ್ನರ್, ಮಿಚೆಲ್ ಜಾನ್ಸನ್, ಕ್ಲಿಂಟ್ ಮೆಕಾಯ್.












Click it and Unblock the Notifications