ಸಮುದ್ರದ ಮೂಲಕ ಜಿಹಾದಿ ದಾಳಿ ಬಗ್ಗೆ ಎಚ್ಚರಿಸಿದ ನೌಕಾಪಡೆ
ನವದೆಹಲಿ, ಮಾರ್ಚ್ 05: ಸಮುದ್ರದ ಮೂಲಕ ಜಿಹಾದಿ ದಾಳಿ ಬಗ್ಗೆ ಸುಳಿವು ಸಿಕ್ಕಿದೆ. ಹೀಗಾಗಿ, ಭಾರತೀಯ ನೌಕಾ ಪಡೆ ಸದಾಕಾಲ ಹೈ ಅಲರ್ಟ್ ನಲ್ಲಿರಲಿದೆ.
ಜೈಷ್ ಎ ಮೊಹಮ್ಮದ್ ಅಥವಾ ಲಷ್ಕರ್ ಎ ತೋಯ್ಬಾ ಸಂಘಟನೆ ಉಗ್ರರು ವಿವಿಧ ರೀತಿ ದಾಳಿ ನಡೆಸಲು ತರಬೇತಿ ಪಡೆದುಕೊಂಡಿವೆ ಎಂಬ ಮಾಹಿತಿಯಿದೆ. ಹೀಗಾಗಿ, ಬಂದರುಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ ಎಂದು ನೌಕಾಪಡೆಯ ಚೀಫ್ ಅಡ್ಮಿರಲ್ ಸುನಿಲ್ ಲಂಬಾ ಮಂಗಳವಾರದಂದು ಹೇಳಿದ್ದಾರೆ. 26/11 ಮುಂಬೈ ದಾಳಿ ಮಾದರಿಯಲ್ಲೇ ಲಷ್ಕರ್-ಎ-ತೊಯ್ಬಾದ ಉಗ್ರರು ಸಮುದ್ರದ ಮೂಲಕ ಆಗಮಿಸಿ, ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಗಳು ಕಂಡು ಬಂದಿವೆ.
ಇಂಡೋ ಪೆಸಿಫಿಕ್ ರೀಜನಲ್ ಡೈಲಾಗ್ ನಲ್ಲಿ ಜಾಗತಿಕ ತಜ್ಞರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ ಸುನಿಲ್ ಲಂಬಾ, "ಜಗತ್ತಿನ ಈ ಭಾಗವು ವಿವಿಧ ರೀತಿಯ ಉಗ್ರವಾದವನ್ನು ಇತ್ತೀಚಿಗಿನ ವರ್ಷಗಳಲ್ಲಿ ಸಾಕ್ಷಿಯಾಗಿದೆ. ಈ ಪ್ರಾಂತ್ಯದ ಕೆಲವೇ ಕೆಲವು ದೇಶಗಳು ಮಾತ್ರ ಈ ಸಮಸ್ಯೆಯಿಂದ ಹೊರತಾಗಿವೆ'' ಎಂದರು.

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಿಂದ ಭಾರತವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಉಗ್ರರನ್ನು ಬೆಂಬಲಿಸುವ ದೇಶ ಇದನ್ನು ಮೊದಲು ತಿಳಿದು ಕೊಳ್ಳಬೇಕು ಎಂದರು.
ಭಾರತದ ವಿರುದ್ಧ ಸಮುಂದರಿ ಜಿಹಾದ್ ನಡೆಸಲು ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಗಳು ಯತ್ನಿಸುತ್ತಿವೆ. ಜಲಮಾರ್ಗ ಬಳಸಿ ಭಾರತದ ಗಡಿಯೊಳಗೆ ನುಸುಳುವುದು, ಸಮುದ್ರಯಾನದ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಬಳಕೆ, ಸಬ್ ಮೆರಿನ್ ಉಪಯೋಗದ ತನಕ ಎಲ್ಲವನ್ನು ಪಾಕ್ ಸೇನೆ ಮೂಲಕ ಉಗ್ರರು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications