ಪತ್ರಕರ್ತರಿಗೆ ಭಾರತದಲ್ಲಿ ಪಾಕಿಸ್ತಾನಕ್ಕಿಂತ ಕೆಟ್ಟ ಪರಿಸ್ಥಿತಿ?
ನವದೆಹಲಿ: ಕರ್ನಾಟಕ ಚುನಾವಣೆಗೆ 7 ದಿನ ಬಾಕಿ ಉಳಿದಿದೆ. ಈ ಹೊತ್ತಲ್ಲಿ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಮಾಹಿತಿ ಹೊರಬಿದ್ದಿದ್ದು, ಭಾರತ ಪತ್ರಕರ್ತರ ಸ್ವಾತಂತ್ರ್ಯದ ವಿಚಾರದಲ್ಲಿ ತೀರಾ ಹಿಂದುಳಿದಿದೆ ಎಂಬಂತೆ 161ನೇ ರ‍್ಯಾಂಕ್ ನೀಡಲಾಗಿದೆ. ಹಾಗಾದರೆ ಭಾರತದಲ್ಲಿ ನಿಜವಾಗೂ ಪತ್ರಿಕಾ ಸ್ವಾತಂತ್ರ್ಯ ಇಲ್ವಾ? ಪತ್ರಿಕಾ ಸ್ವಾತಂತ್ರ್ಯದಲ್ಲಿ ಪಾಕಿಸ್ತಾನಕ್ಕಿಂತ ಭಾರತ ಹಿಂದೆ ಉಳಿದಿದೆಯಾ? ಮುಂದೆ ಓದಿ.
'ಗಡಿ ಇಲ್ಲದ ವರದಿಗಾರರು' ಅಥವಾ Reporters Without Borders ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಪ್ರತಿ ವರ್ಷ ಪತ್ರಿಕಾ ಸ್ವಾತಂತ್ರ್ಯದ ಅಂಕಿ-ಅಂಶ ನೀಡುತ್ತದೆ. ಅದೇ ರೀತಿ ಈ ಬಾರಿ 'ರಿಪೋಟರ್ಸ್ ವಿಥೌಟ್ ಬಾರ್ಡರ್ಸ್' ಸಂಸ್ಥೆ ಮಾಹಿತಿ ನೀಡಿದೆ. ಆ ಪ್ರಕಾರ ಭಾರತಕ್ಕೆ 180 ರಾಷ್ಟ್ರಗಳ ಪೈಕಿ 161ನೇ ಸ್ಥಾನ ನೀಡಲಾಗಿದೆ. ಈ ವಿಚಾರ ಸಂಚಲನ ಸೃಷ್ಟಿಮಾಡಿದ್ದು, ವರದಿ ಬಗ್ಗೆ ಆಕ್ಷೇಪ ಕೂಡ ವ್ಯಕ್ತವಾಗುತ್ತಿದೆ. ಆದರೆ ಇದೇ ಹೊತ್ತಲ್ಲಿ ಸಂಘರ್ಷ ಪೀಡಿತ ಶ್ರೀಲಂಕಾ 135ನೇ ಸ್ಥಾನ ಗಳಿಸಿ ಭಾರತಕ್ಕಿಂತ ಮುಂದೆ ಇದೆ. ಹಾಗಾದರೆ ಪಾಕಿಸ್ತಾನಕ್ಕೆ ಎಷ್ಟನೇ ಸ್ಥಾನ ಸಿಕ್ಕಿದೆ ಗೊತ್ತಾ?

7 ಸ್ಥಾನ ಜಿಗಿದ ಪಾಕಿಸ್ತಾನ!
ಮಾತೆತ್ತಿದರೆ ಹಿಂಸೆ, ಪ್ರತಿಭಟನೆ, ಗಲಭೆಗಳಿಂದಲೇ ತುಂಬಿ ತುಳುಕುವ ಪಾಕಿಸ್ತಾನದಲ್ಲಿ ಪತ್ರಿಕಾ ಸ್ವಾತಂತ್ರ್ಯ ತುಂಬಾ ಚೆನ್ನಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಭಾರತ 161ನೇ ಸ್ಥಾನ ಪಡೆದಿದ್ದರೆ, ಇದೇ ಸಮಯದಲ್ಲಿ ಪಾಕಿಸ್ತಾನ 157ನೇ ಸ್ಥಾನದಿಂದ 150ನೇ ಸ್ಥಾನಕ್ಕೆ ಜಂಪ್ ಆಗಿದೆ. ಈ ಮೂಲಕ ಭಾರತ ಕುಸಿತ ಕಂಡರೆ ಪಾಕಿಸ್ತಾನದಲ್ಲಿ ಪತ್ರಕರ್ತರ ಸ್ಥಿತಿ ಸುಧಾರಿಸಿದೆ ಎಂದು Reporters Without Borders ಸಂಸ್ಥೆ ಹೇಳಿದೆ. ಈ ವಿಚಾರ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಮತ್ತು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಮೊದಲ ಸ್ಥಾನದಲ್ಲಿ ಯಾವ ದೇಶ?
ಭಾರತಕ್ಕೆ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ವಿಚಾರದಲ್ಲಿ 161ನೇ ಸ್ಥಾನ ಸಿಕ್ಕಿದೆ. ಹಾಗಾದರೆ ಮಿಕ್ಕ ದೇಶಗಳು ಯಾವ ಸ್ಥಾನದಲ್ಲಿವೆ? ಮೊದಲ ಸ್ಥಾನದಲ್ಲಿರುವ ದೇಶ ಯಾವುದು ಎಂಬುದನ್ನ ತಿಳಿಯೋಣ. ಪತ್ರಕರ್ತರು, ಪತ್ರಿಕೋದ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ನಾರ್ವೆಗೆ 1ನೇ ರ‍್ಯಾಂಕ್. 2ನೇ ರ‍್ಯಾಂಕ್ ಐರ್ಲ್ಯಾಂಡ್, 3ನೇ ರ‍್ಯಾಂಕ್ ಡೆನ್ಮಾರ್ಕ್, 4ನೇ ರ‍್ಯಾಂಕ್ ಸ್ವೀಡನ್, 5ನೇ ರ‍್ಯಾಂಕ್ ಫಿನ್‌ಲ್ಯಾಂಡ್, 6ನೇ ರ‍್ಯಾಂಕ್ ನೆದರ್ಲ್ಯಾಂಡ್, 7ನೇ ರ‍್ಯಾಂಕ್ ಲಿಥುವೇನಿಯಾ, 8ನೇ ರ‍್ಯಾಂಕ್ ಎಸ್ಟೋನಿಯಾ, 9ನೇ ರ‍್ಯಾಂಕ್ ಪೋರ್ಚುಗಲ್, 10ನೇ ರ‍್ಯಾಂಕ್ ಪೂರ್ವ ತೈಮೂರ್ ಪಡೆದುಕೊಂಡಿದೆ.
ಚೀನಾಗೆ ಎಷ್ಟನೇ ಸ್ಥಾನ ಸಿಕ್ಕಿದೆ ಗೊತ್ತಾ?
ಇದೆಲ್ಲದರ ಜೊತೆ ಪತ್ರಿಕೋದ್ಯಮ ಸ್ವಾತಂತ್ರ್ಯ ವಿಚಾರದಲ್ಲಿ ತೀರಾ ಹಿಂದುಳಿದ ಬೇರೆ ಬೇರೆ ದೇಶಗಳನ್ನ ನೋಡೋಣ. ಪಟ್ಟಿಯಲ್ಲಿ 171ನೇ ಸ್ಥಾನ ಬಹ್ರೇನ್ ಪಡೆದರೆ, 172ನೇ ಸ್ಥಾನದಲ್ಲಿ ಕ್ಯೂಬಾ, 173ನೇ ಸ್ಥಾನದಲ್ಲಿ ಮ್ಯಾನ್ಮಾರ್, 174ನೇ ಸ್ಥಾನದಲ್ಲಿ ಎರಿಟ್ರಿಯಾ, 175ನೇ ಸ್ಥಾನದಲ್ಲಿ ಸಿರಿಯಾ, 176ನೇ ಸ್ಥಾನದಲ್ಲಿ ತುರ್ಕ್‌ಮೇನಿಸ್ತಾನ್, 177ನೇ ಸ್ಥಾನದಲ್ಲಿ ಇರಾನ್, 178ನೇ ಸ್ಥಾನದಲ್ಲಿ ವಿಯೆಟ್ನಾಂ ಇದೆ. ಹಾಗಾದ್ರೆ ಕೊನೇ 2 ಸ್ಥಾನ ಪಡೆದಿರುವ ಆ ದೇಶಗಳ ಹೆಸರು ಕೇಳಿದ್ರೆ ನೀವು ಶಾಕ್ ಆಗೋದು ಪಕ್ಕಾ.
ಉತ್ತರ ಕೊರಿಯಾಗೆ ಕೊನೆಯ ಸ್ಥಾನ!
'ಗಡಿ ಇಲ್ಲದ ವರದಿಗಾರರು' ಅಥವಾ Reporters Without Borders ಅಂತಾರಾಷ್ಟ್ರೀಯ ಸಂಸ್ಥೆ ಪ್ರಕಟಿಸಿರುವ 2023ರ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಪಟ್ಟಿಯಲ್ಲಿ ಚೀನಾ 179ನೇ ರ‍್ಯಾಂಕ್ ಪಡೆದುಕೊಂಡಿದೆ. ಕೊನೇ ಸ್ಥಾನದಲ್ಲಿ ಕಿಮ್ ಜಾಂಗ್ ಉನ್ ನಾಡು, ಸರ್ವಾಧಿಕಾರಿಯ ಬೀಡು ಉತ್ತರ ಕೊರಿಯಾ ನಳನಳಿಸುತ್ತಿದೆ. ಈ ಮೂಲಕ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಪಟ್ಟಿ ಕೊನೆಗೊಳ್ಳುತ್ತದೆ. ಉ.ಕೊರಿಯಾಗೆ ಕೊನೇ ಸ್ಥಾನ ನೀಡಿದ ಬಗ್ಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಸರ್ವಾಧಿಕಾರಿ, ಆದರೆ ಹೊಸ ಮಿಸೈಲ್ ಮೂಲಕ ಉತ್ತರ ನೀಡಬಹುದೇನೋ ಗೊತ್ತಿಲ್ಲ!
ಒಟ್ನಲ್ಲಿ 2023ರ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಪಟ್ಟಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಪಾಕಿಸ್ತಾನಕ್ಕೆ 150ನೇ ಸ್ಥಾನ ನೀಡಿರುವುದು ಚರ್ಚೆಗೆ ಹೊಸ ವೇದಿಕೆ ಒದಗಿಸಿದೆ. ಚೀನಾ ಮತ್ತು ಉತ್ತರ ಕೊರಿಯಾಗೆ ಕೊನೆಯ 2 ಸ್ಥಾನ ನೀಡಿರುವ ಬಗ್ಗೆ ಚೀನಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಉತ್ತರ ಕೊರಿಯಾದಿಂದ ಸ್ಟ್ರಾಂಗ್ ರಿಯಾಕ್ಷನ್ ಬರುವ ನಿರೀಕ್ಷೆ ಕೂಡ ಇದೆ.












Click it and Unblock the Notifications