India Weather: ಮುಂಗಾರು ಮಧ್ಯೆ ಈ ರಾಜ್ಯಗಳಲ್ಲಿ ಕೊಲ್ಲುತಿದೆ 'ಶಾಖದ ಅಲೆ', ಮಳೆ ಮುನ್ಸೂಚನೆ ಏನಿದೆ?
ನವದೆಹಲಿ, ಜೂನ್ 01: ಭಾರತದ ಕೇಂದ್ರ ಮತ್ತು ವಾಯುವ್ಯ ಭಾಗದ ರಾಜ್ಯಗಳಲ್ಲಿ ಇಂದು ಶನಿವಾರ ವಿಪರೀತ ತಾಪಮಾನ ಕಂಡು ಬಂದಿದೆ. ಮುಂಗಾರು ಮಳೆ ಆರಂಭದ ಬೆನ್ನಲ್ಲೆ ಕೊಲ್ಲುವ ಶಾಖದ ಅಲೆ ಮುಂದುವರಿದಿದೆ. ಇನ್ನೂ ಹತ್ತು ರಾಜ್ಯಗಳಲ್ಲಿ ಇದೇ ಬಿಸಿಲು ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಭಾರತದ ಪಂಜಾಬ್ ರಾಜ್ಯದ ಕೆಲವೆಡೆ, ದೆಹಲಿ, ಉತ್ತರದ ಪೂರ್ವ ಮತ್ತು ಉತ್ತರದ ಪ್ರದೇಶ, ಹರಿಯಾಣ, ಬಿಹಾರ, ಜಾರ್ಖಂಡ್, ಚಂಡೀಗಢ, ವಿದರ್ಭ, ಮಧ್ಯಪ್ರದೇಶ, ಚತ್ತೀಸ್‌ಗಢ, ಒಡಿಶಾ, ಕರಾವಳಿ ಆಂಧ್ರಪ್ರದೇಶದ ಹಲವೆಡೆ ಇಂದು ಶಾಖದ ಅಲೆ ಹೆಚ್ಚಾಗಿದೆ. ಇನ್ನೂ ಕೆಲವು ದಿನ ಈ ವಾತಾವರಣ ಮುಂದುವರಿಯಲಿದೆ. ಇದರೊಂದಿಗೆ ಮುಂಗಾರು ಸಹ ಕ್ರಮೇಣ ಸಕ್ರಿಯಗೊಳ್ಳುವ ಸಾಧ್ಯತೆ ಇದೆ.

24 ಗಂಟೆಯ ಹಿಂದೆ ದೇಶದ ಒಡಿಶಾ, ತೆಲಂಗಾಣ, ರಾಯಲಸೀಮಾ, ಗುಜರಾತ್, ಹರಿಯಾಣ, ಚಂಡೀಗಢ, ದೆಹಲಿ, ಛತ್ತೀಸ್‌ಗಢ, ಪಂಜಾಬ್, ಉತ್ತರ ಪ್ರದೇಶ, ವಿದರ್ಭ, ತಮಿಳುನಾಡು ಮತ್ತು ಪಶ್ಚಿಮ ರಾಜಸ್ಥಾನ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಾಪಮಾನವು ತೀವ್ರ ಮಟ್ಟಕ್ಕೆ ಏರಿಕೆ ಆಗಿದೆ. ಶಾಖದ ಅಲೆಗೆ ಜನಜೀವನ ತತ್ತರಗೊಂಡಿದೆ.
ಗರಿಷ್ಠ ತಾಪಮಾನ 45-48 ಡಿಗ್ರಿ ಸೆಲ್ಸಿಯಸ್
ಈ ರಾಜ್ಯಗಳ ಪೈಕಿ ಹಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ಬರೋಬ್ಬರಿ 45 ಮತ್ತು 48 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ಇನ್ನೂ ಕೆಲವೆಡೆಇ ಕಡಿಮೆ ಎಂದರೆ 42 ರಿಂದ 45 ಡಿಗ್ರಿ ಸೆಲ್ಸಿಯಸ್ ನಷ್ಟು ಕಂಡು ಬಂದಿದೆ. ಇದರಿಂದ ಜನರು ಮನೆಯಿಂದ ಹೊರಬರಲು ಯೋಚಿಸುತ್ತಿದ್ದಾರೆ. ರಾಜಧಾನಿ ದೆಹಲಿಯಂತ ಪ್ರದೇಶಗಳಲ್ಲಿ ಜನರು ಸಂಚರಿಸುವಾಗ ಪ್ರಜ್ಞೆ ತಪ್ಪಿ ಬೀಳುತ್ತಿದ್ದಾರೆ.

ಸದ್ಯ ಮುಂಗಾರು ಋತುವಿನಲ್ಲಿ (ಜೂನ್ 01) ಈ ರಾಜ್ಯಗಲ್ಲಿ ದಾಖಲಾಗಿರುವ ತಾಪಮಾನ ವಾಡಿಕೆಗಿಂತ ಅತ್ಯಧಿಕ ಪ್ರಮಾಣದ್ದು ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ವಾಡಿಕೆಗಿಂತ ಸುಮಾರು 4-6 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕ ಉಷ್ಣಾಂಶ ಕಂಡು ಬಂದಿದೆ.
ರಾಜ್ಯಗಳಲ್ಲಿ ರಾತ್ರಿಯು ಬಿಸಿಯ ವಾತಾವರಣ
ಮುಂದಿನ ಮೂರು ದಿನ ಅಂದರೆ ಜೂನ್ 4 ರವರೆಗೆ ಒಡಿಶಾ ರಾಜ್ಯದಲ್ಲಿ ಅಧಿಕ ಬಿಸಿಲಿನ ವಾತಾವರಣ ಕಂಡು ಬರಬಹುದು. ರಾಜ್ಯದಲ್ಲಿ ಇಂದು ರಾತ್ರಿ ಅತ್ಯಧಿಕ ಬಿಸಿ, ಸೆಕೆಯ ವಾತಾವರಣ ಉಂಟಾಗುವ ನಿರೀಕ್ಷೆಗಳು ಇವೆ. ಮಧ್ಯಪ್ರದೇಶ ಮತ್ತು ಪೂರ್ವ ಉತ್ತರ ಪ್ರದೇಶ ರಾಜ್ಯದ ಹಲವು ಪ್ರದೇಶಗಳು ಬೆಚ್ಚಗಿನ ರಾತ್ರಿ ಅನುಭವಿಸಲಿವೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಗೋವಾ ರಾಜ್ಯದಲ್ಲಿ ಮುಂದಿನ 24ಗಂಟೆ ತೀವ್ರ ಬಿಸಿಲಿನ ವಾತಾವರಣ ಕಂಡು ಬರಲಿದೆ. ಇಲ್ಲಿ ಆದ್ರತೆ ಹೆಚ್ಚಿರಲಿದೆ. ಇಂದು ತೆಲಂಗಾಣ, ರಾಯಲಸೀಮಾದಲ್ಲಿ ಹೀಟ್ ವೆವ್ ಕಂಡು ಬಂದಿದೆ.
ಐದು ದಿನ ಮಳೆ ಮುನ್ಸೂಚನೆ ಕೊಟ್ಟ ಐಎಂಡಿ
ಹೀಗೆ ವಿಪರೀತ ಬಿಸಲಿನ ಮಧ್ಯೆ ಗಂಗಾನದಿ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್ ಹಾಗೂ ಛತ್ತೀಸ್‌ಗಢ ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ಆಗಾಗ ಸ್ವಲ್ಪ ಗುಡುಗು, ಮಿಂಚು ಸಹಿತ ಮಳೆ ಬರಲಿದೆ. ಈ ಮೂಲಕ ಮುಂಗಾರು ಮಳೆ ಸಕ್ರಿಯಗೊಳ್ಳುವ ಸಾಧ್ಯತೆಗಳು ಇವೆ. ಈ ವೇಳೆ ಪ್ರತಿ ಗಂಟೆಗೆ ಗಾಳಿಯ ಗರಿಷ್ಠ ವೇಗ 40 ಕಿಲೋಮೀಟರ್ ಇರಲಿದೆ.
ಮುಂಗಾರು ಮಳೆ ಎರಡು ದಿನದ ಹಿಂದೆ ಕೇರಳ ಪ್ರವೇಶ ಮಾಡಿದೆ. ದಕ್ಷಿಣ ರಾಜ್ಯಗಳಿಂದ ನಿಧಾನವಾಗಿ ಮುಂಗಾರು ಸಕ್ರಿಯಗೊಳ್ಳುತ್ತಿದೆ. ಮುಂದಿನ 2-3 ದಿನಗಳಲ್ಲಿ ಇನ್ನಷ್ಟು ರಾಜ್ಯಗಳಿಗೆ ನೈಋತ್ಯ ಮಾನ್ಸೂನ್ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾದ ವಾತಾವರಣವು ಇದೆ.
ಸದ್ಯ ಮುಂಗಾರು ಮಳೆಯು ಅರಬ್ಬೀ ಸಮುದ್ರದ ಮಧ್ಯ ಮತ್ತು ದಕ್ಷಿಣ ಭಾಗಗಳು, ಲಕ್ಷದ್ವೀಪ ಪ್ರದೇಶ, ಕರ್ನಾಟಕದ ದಕ್ಷಿಣ ಭಾಗ, ಕೇರಳ, ತಮಿಳುನಾಡಿನ ಹೆಚ್ಚಿನ ಭಾಗಗಳು ಪ್ರಭಾವ ಬೀರುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಈ ರಾಜ್ಯಗಳಲ್ಲಿ ಮುಂಗಾರು ಮಳೆ ಪ್ರಭಾವ ಹೆಚ್ಚಾಗಲಿದ್ದು, ಭಾರೀ ಮಳೆ ನಿರೀಕ್ಷಿಸಬಹುದಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications